ಮೈನ್‍ಮಾರ್
	ಉತ್ತರದಲ್ಲಿ ಭಾರತ ಮತ್ತು ಚೀನ ಪೂರ್ವದಲ್ಲಿ ಥೈಲೆಂಡ್, ಲಾವೋಸ್ ಮತ್ತು ಚೀನ, ನೈಋತ್ಯದಲ್ಲಿ ಬಂಗಾಳಕೊಲ್ಲಿ ಪಶ್ಚಿಮದಲ್ಲಿ ಭಾರತ, ಬಾಂಗ್ಲಾದೇಶದ ಮತ್ತು ಬಂಗಾಳಿಕೊಲ್ಲಿ. ದಕ್ಷಿಣದಲ್ಲಿ ಅಂಡಮಾನ್ ಸಮುದ್ರ ಮತ್ತು ಥೈಲೆಂಡ್ ಈ ದೇಶವನ್ನು ಸುತ್ತುವರಿದಿವೆ. ಉ.ಅ. 10(ಯಿಂದ 28( 30' ವರೆಗೂ ಪೂ.ರೇ. 92( ಯಿಂದ 101( ವರೆಗೂ ಹಬ್ಬಿದೆ. ದೇಶವನ್ನು 9 ವಿಭಾಗಗಳನ್ನು ಒಳಗೊಂಡಿರುವ 4 ರಾಜ್ಯಗಳಾಗಿ ವಿಭಾಗಿಸಲಾಗಿದೆ. ವಿಸ್ತೀರ್ಣ 676578 ಚ.ಕಿ.ಮೀ ಉತ್ತರದಿಂದ ದಕ್ಷಿಣದವರೆಗೆ ಇದರ ಒಟ್ಟು ಉದ್ದ 2090 ಕಿಮೀ, ಪೂರ್ವದಿಂದ ಪಶ್ಚಿಮಕ್ಕೆ 930 ಕಿ.ಮೀ ಅಗಲವಿದ್ದು 2,655 ಕಿಮೀ ಉದ್ದ ಸಮುದ್ರ ತೀರವನ್ನೊಳಗೊಂಡಿದೆ. ಜನಸಂಖ್ಯೆ 48,866000 (2000). ರಾಜಾಧಾನಿ ಯಂಗನ್ ಜನಸಂಖ್ಯೆ 1,315,564 (2000).

	ಮೇಲ್ಮೈ ಲಕ್ಷಣ: ಮೇಲಣ ಮತ್ತು ಕೆಳಗಿನ ಮೈನ್‍ಮಾರ್ ಎಂದು ಮೈನ್‍ಮಾರ್‍ವನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. ಮೈನ್‍ಮಾರ್‍ದ ತೀರ ಉತ್ತರದಲ್ಲಿ 5881 ಮೀಟರ್ ಎತ್ತರವಿದ್ದು ದಕ್ಷಿಣದಲ್ಲಿ ಇರವಾಡೀ ಮತ್ತು ಸಿತಾನ್ ನದಿಗಳ ಮುಖಜಭೂಮಿಯ ಸಮುದ್ರ ಪಾತಳಿಯವರೆಗೆ ಇಳಿಜಾರಾಗಿದೆ. ಪರ್ವತ ಶ್ರೇಣಿಗಳು ಉತ್ತರದಿಂದ ದಕ್ಷಿಣದತ್ತ ಉದ್ದುದ್ದವಾಗಿ ಹಬ್ಬಿವೆ. ಮೈನ್‍ಮಾರ್‍ವನ್ನು ಅರಕಾನ್ ತೀರಪ್ರದೇಶ, ತನಸರಮ್ ತೀರಭಾಗ, ಉತ್ತರದ ಪರ್ವತಪ್ರದೇಶ, ಪಶ್ಚಿಮದ ಪರ್ವತ ಪ್ರದೇಶ, ಮಧ್ಯಮೈನ್‍ಮಾರ್‍ದ ಬೋಗುಣಿ, ಇರವಾಡೀ ಸಿತಾನ್ ಮತ್ತು ಇತರ ನದಿಗಳ ಮುಖಜಭೂಮಿ ಮತ್ತು ಪೂರ್ವದ ಷಾನ್ ಪ್ರಸ್ಥಭೂಮಿ ಎಂಬ ಏಳು ಪ್ರಾಕೃತಿಕ ಭಾಗಗಳಾಗಿ ವಿಂಗಡಿಸಬಹುದು. ಅರಕಾನ್ ಯೋಮ ಪರ್ವತಶ್ರೇಣಿ ಮತ್ತು ಬಂಗಾಳಕೊಲ್ಲಿಗಳ ಮಧ್ಯದಲ್ಲಿ ಅರಕಾನ್ ತೀರಪ್ರದೇಶ ಹಬ್ಬಿದೆ. ದಕ್ಷಿಣದಲ್ಲಿ ಬಂಗಾಳಕೊಲ್ಲಿ ಮತ್ತು ತನಸರಮ್ ಯೋಮ ಪರ್ವತ ಶ್ರೇಣಿಗಳ ನಡುವೆ ತನಸರಮ್ ತೀರಭಾಗ ಇದೆ. ಈ ತೀರಪ್ರದೇಶಗಳ ಪೂರ್ವದಲ್ಲಿ ಎತ್ತರ ಪರ್ವತ ಶ್ರೇಣಿಗಳೂ ಪಶ್ಚಿಮದಲ್ಲಿ ತೀರಕ್ಕೆ ಹತ್ತಿರವಾಗಿ ಅನೇಕ ಸಣ್ಣ ಪುಟ್ಟ ದ್ವೀಪಗಳ ಸಾಲುಗಳೂ ಇವೆ. ಉತ್ತರದ ಪರ್ವತ ಪ್ರದೇಶದಲ್ಲಿರುವ ಮೈನ್‍ಮಾರ್‍ದೇಶದ ಅತ್ಯಂತ ಎತ್ತರ ಶಿಖರವುಳ್ಳ (5,881 ಮೀಟರ್) ಖಕಬೊರಾಜಿ ಇದರ ಜೊತೆಗೆ ಪೊಪ ಶಿಖರ ಉಳ್ಳ ಪೆಗೊಯೋಮ ಪರ್ವತ ಶ್ರೇಣಿ ಇವೆ. ಈ ಶ್ರೇಣಿಗಳೇ ಇರವಾಡೀ, ಸಲ್‍ವೀನ್ ಮಾಕಾನ್ ಮತ್ತು ಯಾನ್‍ಸೇ ಮೊದಲಾದ ಮೊದಲಾದ ಮಹಾನದಿಗಳ ಉಗಮಸ್ಥಾನ. ಇವು ಕೆಲವೇ ಮೀಟರುಗಳ ಅಂತರದ ಮೇಲಕ್ಕೆದ್ದಿರುವ ಪರ್ವತಗಳಿಂದ ಬೇರ್ಪಟ್ಟು ಆಳವಾದ ಕಮರಿಗಳಲ್ಲಿ ಹರಿಯುತ್ತವೆ. ಭಾರತ ಮತ್ತು ಮೈನ್‍ಮಾರ್‍ಗಳ ನಡುವಣ ಗಡಿಯಾಗಿರುವ ಪಶ್ಚಿಮ ಪರ್ವತಪ್ರದೇಶದಲ್ಲಿರುವ ಪರ್ವತಶ್ರೇಣಿಗಳ ಗುಂಪಿನಿಂದ ಹೊರಟು ದಕ್ಷಿಣದತ್ತ ಹಬ್ಬಿ ನಗ್ರೈಸ್ ಭೂಶಿರದ ಹತ್ತಿರ ಸಮುದ್ರಗತವಾಗಿ ಮುಂದೆ ಅಂಡಮಾನ್ ದ್ವೀಪವಾಗಿ ಮೇಲಕ್ಕೆದ್ದಿವೆ. ಈ ಪ್ರದೇಶದ ಸರಾಸರಿ ಎತ್ತರ 1828 ಮೀ. ಕೆಲವು ಶಿಖರಗಳು ಸುಮಾರು 3047 ಮೀಟರ್ ಎತ್ತರ ಮುಟ್ಟುವುದುಂಟು. ಅರಕಾನ್ ಯೋಮ ಮತ್ತು ಷಾನ್ ಪ್ರಸ್ಥಭೂಮಿಗಳ ನಡುವೆ ಮಧ್ಯ ಮೈನ್‍ಮಾರ್‍ದ ಬೋಗುಣಿ ಪ್ರದೇಶವಿದೆ. ಮೈನ್‍ಮಾರ್‍ದಲ್ಲಿ ಹರಿಯುವ ನದಿಗಳು ತರುವ ಎರೆಮಣ್ಣು ಕೃಷಿಗೆ ಯೋಗ್ಯವಾದದ್ದು. ಇರವಾಡೀ, ಸಿತಾನ್ ಮತ್ತು ಇತರ ನದಿಗಳ ಮುಖಜಭೂಮಿಯ ವಿಸ್ತೀರ್ಣ ಸುಮಾರು 25,900 ಚ. ಕಿಮೀ. ಇದು ಬಹಳ ಫಲವತ್ತಾದ ಪ್ರದೇಶ. ಪ್ರಪಂಚದ ಭತ್ತದ ಕಣಜಗಳ ಪೈಕಿ ಒಂದು. ಪೂರ್ವದ ಷಾನ್ ಪ್ರಸ್ಥಭೂಮಿ ಮಧ್ಯಬೋಗುಣಿಯಿಂದ ಒಮ್ಮೆಲೇ ಸುಮಾರು 609ಮೀಟರುಗಳಷ್ಟು ಮೇಲಕ್ಕೆದ್ದಿದೆ. ಛಿನ್ನವಿಚ್ಛನ್ನವಾಗಿರುವ ಈ ಪ್ರಸ್ಥಭೂಮಿಯ ಸರಾಸರಿ ಎತ್ತರ ಸುಮಾರು 915 ಮೀ. ದೇಶದ ಪೂರ್ವಭಾಗವನ್ನೆಲ್ಲವನ್ನು ವ್ಯಾಪಿಸುವ ಈ ಪ್ರದೇಶ ಪಶ್ಚಿಮದ ಪರ್ವತಗಳಿಗಿಂತ ಹಳೆಯದು. ಕೆಳಗಿನ ಮೈನ್‍ಮಾರ್‍ಕ್ಕೆ ಸೇರಿದ ಉದ್ದನೆಯ ತನಸರಮ್ ಪಟದ ಬಾಲಂಗೋಚಿಯಂತೆ ಕಂಡುಬಂದು ಮೈನ್‍ಮಾರ್‍ವನ್ನು ಥೈಲೆಂಡಿನಿಂದ ವಿಂಗಡಿಸಿದೆ. ಮಾರ್ಟಬಾನ್ ಕೊಲ್ಲಿಯಿಂದ ದಕ್ಷಿಣದ ಕಡೆಗೆ ಅಂಡಮಾನ್ ಸಮುದ್ರದವರೆಗೆ ಚಾಚಿ ಕೊಂಡಿರುವ ಇದರ ಅಗಲ 80ಕಿಮೀ, ಉದ್ದ 800 ಕಿಮೀ ಬಹುಫಲವತ್ತಾದ ಭೂಮಿಯಿಂದ ಕೂಡಿರುವ ಈ ಪರ್ವತ ಪ್ರದೇಶದಲ್ಲಿ ತನಸರಮ್ ನದಿ ಹರಿಯುವುದು. 

	ಮಣ್ಣು: ಮೈನ್‍ಮಾರ್‍ದ ಉನ್ನತ ಪ್ರದೇಶಗಳಲ್ಲಿ ಜಂಬು ಮಣ್ಣು ಹರಡಿಕೊಂಡಿದೆ. ತಗ್ಗುಪ್ರದೇಶಗಳಲ್ಲಿ ಮೆಕ್ಕಲು ಮಣ್ಣು ಮತ್ತು ಜೇಡಿಮಣ್ಣು ಪ್ರಧಾನವಾಗಿರುವ ನೆರೆಮಣ್ಣು ಕಂಡುಬರುವುದು. ಇದರಲ್ಲಿ ಪೊಟ್ಯಾಸಿಯಮ್, ಸುಣ್ಣ ಮತ್ತು ಮ್ಯಾಗ್ನೀಷಿಯಮ್ ಹೆಚ್ಚಾಗಿರುವುದರ ಮೂಲಕ ಕಪ್ಪಾಗಿರುವ ಎರೆಮಣ್ಣು ಇದೆ. ಅದೇ ಪ್ರದೇಶದ ಮಣ್ಣಿನಲ್ಲಿ ಜೇಡಿಮಣ್ಣಿನ ಅಂಶ ಕಡಿಮೆಯಿರುವ ಕಡೆ ತೀವ್ರ ಬಾಷ್ಪೀಕರಣದಿಂದಾಗಿ ಲವಣಯುಕ್ತವಾಗಿದ್ದು ಅದನ್ನು ಅರಿಶಿಣ ಇಲ್ಲವೇ ಕಂದು ಬಣ್ಣದಿಂದ ಗುರುತಿಸಬಹುದು. 

	ಹವಾಗುಣ: ಮೈನ್‍ಮಾರ್‍ದ ಪರ್ವತ ಪ್ರದೇಶಗಳಲ್ಲಿ ತಂಪಾದ ಹವಾಗುಣವೂ ಸಮುದ್ರತೀರ ಪ್ರದೇಶದಲ್ಲಿ ಶೈತ್ಯದಿಂದ ಕೂಡಿದ ಹವಾಗುಣವೂ ಉಂಟು. ಒಟ್ಟಿನಲ್ಲಿ ಉಷ್ಣವಲಯದ ಹವಾಗುಣ ಒಳನಾಡಿನಲ್ಲಿ ಏಪ್ರಿಲ್ ಮತ್ತು ಮೇತಿಂಗಳ ಪ್ರಥಮಾರ್ಧ ಹಾಗೂ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಪ್ರಥಮಾರ್ಧಗಳಲ್ಲಿ ಸೆಕೆಯಿರುತ್ತದೆ: ಮಧ್ಯ ಮೇಯಿಂದ ಮಧ್ಯ ಅಕ್ಟೋಬರಿನ ತನಕ ಮಳೆ ಬೀಳುತ್ತದೆ. ಡಿಸೆಂಬರಿನಿಂದ ಮಾರ್ಚ್ ತನಕ ಹವೆ ತಂಪಾಗಿರುತ್ತದೆ. ಏಪ್ರಿಲಿನಲ್ಲಿ ಉಷ್ಣತೆ 330ಅ ಇದ್ದರೆ ಡಿಸೆಂಬರಿನಲ್ಲಿ 210ಅಗೆ ಇಳಿದಿರುತ್ತದೆ. ಮಧ್ಯ ಮೈನ್‍ಮಾರ್‍ದಲ್ಲಿ ತಂಪು ಕಾಲದಲ್ಲಿ ಹೆಚ್ಚು ತಂಪು, ಸೆಕೆಕಾಲದಲ್ಲಿ ಹೆಚ್ಚು ಸೆಕೆ. ಮೇಲಿನ ಮೈನ್‍ಮಾರ್‍ದಲ್ಲಿ ವಿಶೇಷವಾಗಿ ಸುಮಾರು 305 ಮೀ ನಿಂದ 1218 ಮೀ ವರೆಗಿನ ಉನ್ನತ ಪ್ರದೇಶದಲ್ಲಿ ವರ್ಷಾದದ್ಯಂತ ಹವೆ ಹಿತವಾಗಿರುತ್ತದೆ. ನದಿಗಳ ಮುಖಜ ಭೂಮಿ ಮತ್ತು ತೀರ ಪ್ರದೇಶಗಳಲ್ಲಿ ತೀವ್ರ ಆದ್ರ್ರ ಹವಾಗುಣವಿರುತ್ತದೆ. ಸಾಮಾನ್ಯವಾಗಿ ಮೇಯಿಂದ ಅಕ್ಟೋಬರ್ ತನಕ ಹೆಚ್ಚು ಮಳೆ ಬೀಳುತ್ತದೆ. ಉತ್ತರ ಮೈನ್‍ಮಾರ್‍ದಲ್ಲಿ ಬೀಳುವ ಮಳೆ ವರ್ಷಕ್ಕೆ ಸರಸಾರಿ 100 ಸೆಂಮೀ. ಉತ್ತರ ಮೈನ್‍ಮಾರ್‍ದ ಪರ್ವತಗಳಲ್ಲಿ ಹಾಗೂ ಅರಕಾನ್ ಮತ್ತು ತನಸರಮ್ ತೀರಪ್ರದೇಶಗಳಲ್ಲಿ ಇದು 510 ಸೆಂಮೀಗೂ ಹೆಚ್ಚು. ಅರಕಾನ್ ಯೋಮದ ಮರೆಪ್ರದೇಶವಾದ ಮಧ್ಯ ಮೈನ್‍ಮಾರ್‍ದಲ್ಲಿ ಸುಮಾರು 62 ಸೇಂಮೀ ನಿಂದ 112ಸೆಂ.ಮೀವರೆಗೆ ಮಳೆ ಬೀಳುತ್ತದೆ. ಮಾಂಡಲೆಯಲ್ಲಿ ಇದು ಸುಮಾರು 75 ಸೆಂಮೀ ಆದರೆ ಷಾನ್ ತಪ್ಪಲು ಪ್ರದೇಶದಲ್ಲಿ ಸುಮಾರು 163 ಸೆಂಮೀ ಆಗಿರುವುದು. 

	ನದಿಗಳು: ಮೈನ್‍ಮಾರ್‍ದ ಮುಖ್ಯ ನದಿಗಳು ಉತ್ತರ ಮೈನ್‍ಮಾರ್‍ದ ಪರ್ವತಶ್ರೇಣಿಗಳಲ್ಲಿ ಹುಟ್ಟಿ ದಕ್ಷಿಣಾಭೀಮುಖವಾಗಿ ಹರಿದು ಬಂಗಾಳ ಕೊಲ್ಲಿ, ಮಾರ್ಟಬಾನ್ ಕೊಲ್ಲಿ ಮತ್ತು ಅಂಡಮಾನ್ ಸಮುದ್ರ ಸೇರುತ್ತವೆ. ಮಧ್ಯ ಮೈನ್‍ಮಾರ್‍ದ ಮೀಚೀನದ ಉತ್ತರದಲ್ಲಿ ಮಾಲ್ ಇ ಮತ್ತು ನ ಮೈ ನದಿಗಳು ಕೂಡಿ ಮೈನ್‍ಮಾರ್‍ದ ಮುಖ್ಯ ನದಿ ಇರವಾಡೀ ಎಂದಾಗಿ ಅನೇಕ ಸಣ್ಣ ಪುಟ್ಟ ನದಿಗಳನ್ನು ಕೂಡಿಕೊಂಡು ಒಟ್ಟು 2012 ಕಿಮೀ ದಕ್ಷಿಣಾಭಿಮುಖವಾಗಿ ಹರಿದು ಮತ್ತೆ ಕವಲೊಡೆದು ಬಂಗಾಳಕೊಲ್ಲಿ ಸೇರುವುದು. ಇರವಾಡೀ ನದಿ 1449 ಕಿಮೀ ದೂರದವರೆಗೆ ದೋಣಿ ಸಂಚಾರ ಯೋಗ್ಯವಾಗಿದ್ದು ಮೈನ್‍ಮಾರ್‍ದ ಒಂದು ಮುಖ್ಯ ಜಲಮಾರ್ಗವಾಗಿದೆ. ಮಾಂಡಲೇ, ಮೀಚೀನ, ಮೈನ್‍ಬೋನ್, ಪ್ಯೇ, ಹೆಂಜಡಾ ಮತ್ತು ಬಾಮೊ ಮುಂತಾದ ನಗರಗಳು ಈ ನದಿಯ ದಡದಲ್ಲಿವೆ. ಕೂಮಾನ್ ಪರ್ವತಶ್ರೇಣಿಯಲ್ಲಿ ಹುಟ್ಟಿ 1159 ಕಿಮೀ ಹರಿಯುವ ಚಿಂದ್ವನ್ ಇರವಾಡೀ ನದಿಯ ಒಂದು ಮುಖ್ಯ ಉಪನದಿ. ಸ್ವೆಲೀನದಿ ಸುಮಾರು 644 ಕಿಮೀ ಹರಿದು ಕಥಾ ಬಳಿ ಇರವಾಡೀಯನ್ನು ಕೂಡಿ ಕೊಳ್ಳುತ್ತದೆ. ಮ್ಯಿಟ್‍ಗೇ ನದಿ ಮೈನ್‍ಮಾರ್‍ದ ಈಶಾನ್ಯದಿಂದ ನೈಋತ್ಯ ಮುಖವಾಗಿ ಸುಮಾರು 402 ಕಿಮೀ ದೂರ ಹರಿದು ಮಾಂಡಲೇಯ ದಕ್ಷಿಣದಲ್ಲಿ ಇರವಾಡೀಯನ್ನು ಸೇರುವುದು. ಮೈನ್‍ಮಾರ್‍ದ ಪೂರ್ವದಲ್ಲಿ ಸ್ವಲ್ಪದೂರ ಮೈನ್‍ಮಾರ್-ಥೈಲೆಂಡುಗಳ ಗಡಿಯಾಗಿ ಹರಿದು ಸಲ್‍ವೀನ್ ನದಿ ಮಾರ್ಟಬಾನ್ ಕೊಲ್ಲಿ ಸೇರುತ್ತದೆ. ನವ್, ಚೆಂದ್ವಿನ್, ಕಲದನ್, ಲೆಮ್ರೊ ಮತ್ತು ಸಲ್‍ವೀನ್ ಮುಂತಾದ ಚಿಕ್ಕ ಪುಟ್ಟ ನದಿಗಳು ಹೆಚ್ಚು ಸೆಳೆತದಿಂದ ಕೂಡಿದ್ದು ಅರಕಾನ್‍ಯೋಮಾದಿಂದ ಬಂಗಾಳ ಕೊಲ್ಲಿ ಸೇರುತ್ತವೆ. ಮೈನ್‍ಮಾರ್‍ದ ದಕ್ಷಿಣ ತುದಿಯಲ್ಲಿರುವ ತನಸರಮ್ ಪ್ರಾಂತ್ಯದಲ್ಲಿ ಸುಮಾರು 403 ಕಿಮೀ ದೂರ ಹರಿವ ತನಸರಮ್ ನದಿ ಅಂಡಮಾನ್ ಸಮುದ್ರ ಸೇರುತ್ತದೆ. ನದಿಗಳಿಗೆ ಕಟ್ಟೆಕಟ್ಟಿ ಪ್ರವಾಹ ನಿಯಂತ್ರಣ ಹಾಗೂ ವ್ಯವಸಾಯಕ್ಕೆ ಜಲಪೂರೈಕೆ ಕಾರ್ಯ ಎರಡೂ ನಡೆದಿವೆ. ರಂಗೂನಿಗೆ ಉತ್ತರದಲ್ಲಿ 320 ಕಿಮೀ ದೂರದಲ್ಲಿ ಇರವಾಡೀ ನದಿಗೆ ಕಟ್ಟಿರುವ ನವಿನ್ ಅಣೆಕಟ್ಟು ಪ್ರೋಮ್ ಪ್ರದೇಶದ ಸುಮಾರು 40,500 ಹೆಕ್ಟೇರಿನ ಭೂಮಿಗೆ 1982ರಿಂದ ನೀರೊದಗಿಸಲಾರಂಭಿಸಿದೆ. ಇರವಾಡೀ ನದೀಮುಖಜಭೂಮಿಯಲ್ಲಿ ಕಟ್ಟಿರುವ ಅಡ್ಡ ತಡೆಗಳಿಂದ 1982ರಲ್ಲಿ 20,250 ಹೆಕ್ಟೇರ್ ಭೂಮಿಯನ್ನು ಪ್ರವಾಹದ ನೀರಿನಿಂದ ರಕ್ಷಿಸಲಾಗಿದೆ. ಇದೇ ರೀತಿ 1983ರಲ್ಲಿ 43,000 ಹೆಕ್ಟೇರ್ ಭೂಮಿಯನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಮೇಲಣ ಮೈನ್‍ಮಾರ್‍ದಲ್ಲಿ ಆಸ್ಟ್ರೇಲಿಯದ ನೆರವಿನಿಂದ ಕಟ್ಟಿರುವ ಮಾಬ್‍ಯಿ ಅಣೆಕಟ್ಟು 1982ರಿಂದ 3200 ಹೆಕ್ಟೇರಿಗೂ ಹೆಚ್ಚಾದ ಭೂಮಿಗೆ ನೀರೊದಗಿಸಲಾರಂಭಿಸಿದೆ. ಮಾಂಡಲೇ ಬಳಿ ಕಟ್ಟುತ್ತಿರುವ ಸೆಡಾಗಿ ಅಣೆಕಟ್ಟು ಮತ್ತು ಮಧ್ಯ ಮೈನ್‍ಮಾರ್‍ದಲ್ಲಿ ಕಟ್ಟುತ್ತಿರುವ ಕಿಂಡ ವಿವಿಧೊದ್ದೇಶ ಅಣೆಕಟ್ಟು ಮೈನ್‍ಮಾರ್‍ದಲ್ಲೇ ಬಹುಭಾರಿಯಾದುವು. ಒಟ್ಟಿನಲ್ಲಿ ಮೈನ್‍ಮಾರ್ ಅನೇಕ ಕೃಷಿಯೋಗ್ಯ ದೊಡ್ಡ ಹಾಗೂ ಸಣ್ಣ ಪುಟ್ಟ ನದಿಗಳಿಂದ ಕೂಡಿದೆ. 

	ಸಸ್ಯಗಳು ಪ್ರಾಣಿಗಳು: ಮೈನ್‍ಮಾರ್ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಂದ ಕೂಡಿದೆ. ದೇಶದ ಸೇಕಡ ಸುಮಾರು 57 ಭಾಗದಲ್ಲಿ ಪ್ರದೇಶ ಔನ್ನತ್ಯ ಮತ್ತು ಮಳೆಯ ಪ್ರಮಾಣ ಅವಲಂಬಿಸಿ ವಿವಿಧ ಬಗೆಯ ಕಾಡುಗಳಿವೆ. ಅವುಗಳಲ್ಲಿ 60ಕ್ಕೂ ಹೆಚ್ಚು ಜಾತಿಯ ಗಿಡಮರಗಳಿವೆ. ಪರ್ವತ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ತೇಗದ ಮರಗಳು ಒಟ್ಟು ಅರಣ್ಯಪ್ರದೇಶದ ಸುಮಾರು ಕಾಲುಭಾಗವನ್ನಾಕ್ರಮಿಸಿವೆ. ನದಿಗಳ ಮುಖಜಭೂಮಿಯ ಸಿಹಿನೀರಿನ ಜವುಳು ಮತ್ತು ತೀರಪ್ರದೇಶಗಳಲ್ಲಿ ನಿತ್ಯಹಸಿರು ಮರಗಳು, ಬಿದಿರು ಮತ್ತು ತಾಳೆ ವಿಶೇಷವಾಗಿವೆ. ತೀರದ ಉಪ್ಪು ನೀರಿನ ಜವುಳು ನೆಲದಲ್ಲಿ ಉಷ್ಣವಲಯದ ಗಿಡಗಳು ಬೆಳೆಯುತ್ತವೆ; ಷಾನ್ ಪ್ರಸ್ಥಭೂಮಿಯಲ್ಲಿ ಮಿಶ್ರ ಸಮಶೀತೋಷ್ಣವಲಯದ ಮರಗಳ ಕಾಡುಗಳು ಮತ್ತು ಹುಲ್ಲುಗಾವಲುಗಳು ಇವೆ. ಮಧ್ಯದ ಶುಷ್ಕ ಪ್ರದೇಶದಲ್ಲಿ ಕುರುಚಲು ಜಾತಿಯ ಗಿಡಗಳು ಬೆಳೆಯುತ್ತವೆ. 

	ಮೈನ್‍ಮಾರ್‍ದ ಕಾಡುಗಳಲ್ಲಿ ಜೀವಂಜೀವ, ಗಿಳಿ ನವಿಲು, ಕಾಡು ಕೋಳಿ, ಗ್ರಾಸ್ ಮುಂತಾದ ಪಕ್ಷಿಗಳಿವೆ. ಒಂದು ಕಾಲಕ್ಕೆ ಅಧಿಕ ಸಂಖ್ಯೆಯಲ್ಲಿದ್ದ ಏಷ್ಯದ ಎರಡು ಕೋಡಿನ ಖಡ್ಗಮೃಗ, ಕಾಡುಕೋಣ, ಕಾಡೆಮ್ಮೆ ಮತ್ತು ವಿವಿಧ ಜಾತಿಯ ಜಿಂಕೆಗಳ ಸಂಖ್ಯೆ ಕ್ಷೀಣಿಸಿರುವುದರಿಂದ ಈಗ ಅವನ್ನು ಸಂರಕ್ಷಿತ ಮೃಗಗವರ್ಗಕ್ಕೆ ಸೇರಿಸಲಾಗಿದೆ. ಆನೆ, ಹುಲಿ, ಚಿರತೆ, ಮತ್ತು ಕಾಡು ಬೆಕ್ಕು ಸಾಮಾನ್ಯ. ಗುಡ್ಡಗಾಡುಗಳಲ್ಲಿ ಕರಡಿ ಮತ್ತು ಕಾಡುಗಳ ಒಳಭಾಗಗಳಲ್ಲಿ ಗಿಬನ್ ಸೇರಿದಂತೆ ಸುಮಾರು 12 ಜಾತಿಯ ವಾನರಗಳು ಇವೆ. ಹಾವುಗಳಲ್ಲಿ ಹೆಬ್ಬಾವು, ನಾಗರ, ಕಾಳಿಂಗಸರ್ಪ ಮುಂತಾದವುಗಳಿವೆ. ನದಿಗಳ ಮುಖಜಭೂಮಿಗಳಲ್ಲಿ ಮೊಸಳೆಗಳೂ ತೀರಪ್ರದೇಶಗಳಲ್ಲಿ ಆಮೆಗಳೂ ಹೆಚ್ಚು. ಇಲ್ಲಿಯ ನದಿ, ತೊರೆಗಳಲ್ಲಿ ಆಹಾರ ಯೋಗ್ಯ ಮೀನುಗಳು ವಿಪುಲವಾಗಿವೆ. 

	ಆರ್ಥಿಕತೆ: ಮೈನ್‍ಮಾರ್‍ದ್ದು ಕೃಷಿಪ್ರಧಾನ ಆರ್ಥಿಕತೆ. ದೇಶದಲ್ಲಿ ಸಾಗುವಳಿ ನಡೆಯುವ ಭೂಮಿಯ ಸೇಕಡಾ ಸುಮಾರು 70 ಭಾಗದಲ್ಲಿ ಬತ್ತ ಬೆಳೆಸುತ್ತಾರೆ. ವಿದೇಶಿ ವಿನಿಮಯದ ಸೇಕಡಾ ಸುಮಾರು 70 ಭಾಗ ಅಕ್ಕಿಯ ರಫ್ತಿನಿಂದ ಬರುತ್ತದೆ. ರಫ್ತಾಗುವ ವಸ್ತುಗಳ ಪೈಕಿ ಅಕ್ಕಿ ಪ್ರಧಾನವಾದದ್ದು ಮತ್ತು ತೇಗ ಮುಂತಾದ ಬೆಲೆಬಾಳುವ ಮರಗಳು, ವಿವಿಧ ಲೋಹಗಳ ಅದುರುಗಳು ಸೇರಿದ್ದರೆ ಆಯಾತದಲ್ಲಿ ಔಷಧಿಗಳು, ರಬ್ಬರು, ಕಾಗದ, ಕ್ಷೀರೋತ್ಪನ್ನಗಳು ಯಂತ್ರೋಪಕರಣಗಳು, ಆಹಾರ ಸಾಮಗ್ರಿಗಳು, ಬಟ್ಟೆ, ಸಾರಿಗೆ ವಾಹನಗಳು ಇತ್ಯಾದಿ ಸೇರಿವೆ. ಮೈನ್‍ಮಾರ್‍ದ ವ್ಯಾಪಾರ ಹೆಚ್ಚಾಗಿ ಸಿಂಗಪುರ, ಜಪಾನ್, ಇಂಡೊನೇಷ್ಯ, ಪಶ್ಚಿಮ ಜರ್ಮನಿ, ಚೀನ, ಹಾಂಗ್‍ಕಾಂಗ್, ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಧಾನಗಳೊಡನೆ ನಡೆಯುತ್ತದೆ. ಒಟ್ಟು ಅಂತರಿಕ ಉತ್ಪಾದನೆಯ ಮೌಲ್ಯ 6.4 ಶತಕೋಟಿ ಡಾಲರುಗಳು. ಪ್ರತಿ ವ್ಯಕ್ತಿಯ ಆದಾಯ 1980ರಲ್ಲಿ 186 ಡಾಲರುಗಳು. 1979ರಲ್ಲಿ ಆಮದಿನ ಒಟ್ಟು ಮೌಲ್ಯ 714 ದಶಲಕ್ಷ ಡಾಲರುಗಳಾದರೆ ರಫ್ತು 414 ದಶಲಕ್ಷ ಡಾಲರುಗಳಾಗಿತ್ತು.

	ಕೃಷಿ: ಮೈನ್‍ಮಾರ್‍ದಲ್ಲಿ ಸುಮಾರು 8,9034 ಹೆಕ್ಟೇರುಗಳಿಗೂ ಹೆಚ್ಚಿನ ಭೂಮಿಯ ಸಾಗುವಳಿಯುಂಟು. ಒಟ್ಟು ಕಾರ್ಮಿಕರ ಸಂಖ್ಯೆಯಲ್ಲಿ ಸೇಕಡಾ ಸುಮಾರು 70 ಜನರಿಗೆ ಕೃಷಿ ಜೀವನಾಧಾರ. ಮುಖ್ಯ ಬೆಳೆ ಬತ್ತ ಬೆಳೆಯುವುದು ಇರವಾಡೀ ಮುಖಜಭೂಮಿ, ಸಿತಾನ್ ಮತ್ತು ಸಲ್‍ವೀನ್ ನದಿಗಳ ಕೆಳಗಿನ ಕೊಳ್ಳಗಳು ಹಾಗೂ ಆರಕಾನ್ ಮತ್ತು ತನಸರಮ್ ತೀರಗಳಲ್ಲಿ ಹೆಚ್ಚು. ಎರಡನೆಯ ಮಹಾಯುದ್ಧದ ಮೊದಲಿಗೆ ಮೈನ್‍ಮಾರ್ ಅಕ್ಕಿಯನ್ನು ರಫ್ತು ಮಾಡುವ ದೇಶಗಳಲ್ಲಿ ಮುಂದಿದ್ದಿತು. ಆಗ ಉತ್ಪಾದನೆಯಾಗುತ್ತಿದ್ದ 6ರಿಂದ 8 ದಶಲಕ್ಷ ಟನ್ನುಗಳಲ್ಲಿ ಸುಮಾರು 3 ದಶಲಕ್ಷ ಟನ್ ರಫ್ತಾಗುತ್ತಿತ್ತು. ಯುದ್ಧದಿಂದ ಮೈನ್‍ಮಾರ್‍ದ ಆರ್ಥಿಕತೆಗೆ ಬಲವಾದ ಪೆಟ್ಟು ಬಿತ್ತು. 1964ರ ತನಕವೂ ದೇಶಕ್ಕೆ ಯುದ್ಧ ಪೂರ್ವದ ಉತ್ಪಾದನೆಯ ಮಟ್ಟ ಮುಟ್ಟಲಾಗಲಿಲ್ಲ. 1968ರಲ್ಲಿ 8,485,000 ಟನ್ ಉತ್ಪಾದನೆಯಾಯಿತು. ಸರ್ಕಾರ ನೀರಾವರಿ ಭೂಸುಧಾರಣೆ, ಉತ್ತಮ ಬೀಜ ಒದಗಿಸುವಿಕೆ, ಕೃಷಿಕರಿಗೆ ಮುಂಗಡ ಹಣ ಮತ್ತು ಸಕ್ರೀಯ ಕೃಷಿಕರು ಹೊಂದಿರುವ ಭೂಮಿಯನ್ನುಳಿದು ಉಳಿದೆಲ್ಲ ಭೂಮಿಯ ರಾಷ್ಟ್ರೀಕರಣ ಮೊದಲಾದ ಕಾರ್ಯಗಳ ಮತ್ತು ಅನೇಕ ನೀರಾವರಿ ಯೋಜನೆಗಳ ಮೂಲಕ ಕೃಷಿಗೆ ಉತ್ತೇಜನವಿತ್ತಿದೆ. ಮೈನ್‍ಮಾರ್ ಬತ್ತವಲ್ಲದೆ ಎಳ್ಳು ನೆಲಗಡಲೆ ಬೇಳೆಕಾಳು ಹತ್ತಿ ಗೋಣಿನಾರು ಗೋದಿ ತಂಬಾಕು ಮತ್ತು ಕಬ್ಬು ಬೆಳೆಯುತ್ತದೆ.  1979ರಲ್ಲಿ 40,000 ಟನ್ ಗೋದಿ, 80,000 ಟನ್ ಮುಸುಕಿನ ಜೋಳ, 4,30,000 ಟನ್ ನೆಲಗಡಲೆ, 3,50,000 ಟನ್ ದ್ವಿದಳಧಾನ್ಯ ಮತ್ತು 1.75 ಮಿಲಿಯನ್ ಟನ್ ಕಬ್ಬು ಬೆಳೆದಿದ್ದಾರೆ. ಸುಮಾರು 200,000 ಟನ್ ಎಳ್ಳು, ಹತ್ತಿ ಬೆಳೆದದ್ದಲ್ಲದೆ ವಿವಿಧ ತರಕಾರಿಗಳು, ಹಣ್ಣುಗಳು, ಸೆಣಬು ಇವನ್ನೆಲ್ಲ ಸಾಕಷ್ಟು ಉತ್ಪಾದಿಸಲಾಗಿತ್ತು. ಅತ್ಯಂತ ಹೆಚ್ಚಿನ ಉತ್ಪಾದನೆಯೆಂದರೆ ಬತ್ತ 139 ಲಕ್ಷ ಟನ್ನುಗಳು (1982). ಇರವಾಡೀ ಮತ್ತು ತನಸರಮ್ ನದಿಗಳ ಮುಖಜ ಭೂಮಿಗಳಲ್ಲಿ ರಬ್ಬರ್ ಬೆಳೆಯುತ್ತದೆ. 1968ರಲ್ಲಿ ರಬ್ಬರಿನ ಉತ್ಪಾದನೆ 9100 ಮೆಟ್ರಿಕ್ ಟನ್ನ್‍ಗಳಷ್ಟಿತ್ತು. ಪಶುಪಾಲನೆ ಸಾಮಾನ್ಯ. ಅದೂ ವಿಶೇಷವಾಗಿ ಷಾನ್ ಮತ್ತು ಕಚಿನ್ ರಾಜ್ಯಗಳಿಗೆ ಸೀಮಿತ. ಎಮ್ಮೆ ಮತ್ತು ಕೋಣಗಳನ್ನು ಉಳುಮೆಗೆ ಉಪಯೋಗಿಸುತ್ತಾರೆ. 1979ರಲ್ಲಿ ಸುಮಾರು 7.25 ಮಿಲಿಯನ್ ಹಸು ದನಕರುಗಳೂ, 2 ಮಿಲಿಯನ್ ಹಂದಿಗಳೂ, 1.6 ಮಿಲಿಯನ್ ಎಮ್ಮೆ ಕೋಣಗಳೂ 1.6 ಮಿಲಿಯನ್ ಕುರಿ ಮೇಕೆಗಳೂ 0.75 ಮಿಲಿಯನ್ ಕೋಳಿಗಳೂ ಇದ್ದುವು. 1980ರಲ್ಲಿ 94,000 ಟನ್ ದನದ ಮಾಂಸ 81,000 ಟನ್ ಹಂದಿಮಾಂಸ, ಮತ್ತು 4000 ಟನ್ ಕುರಿಮಾಂಸ ಉತ್ಪಾದಿಸಲಾಗಿತ್ತು. ಮೈನ್‍ಮಾರ್‍ದಲ್ಲಿ ಮೀನುಗಾರಿಕೆ ಮುಖ್ಯ ಕೃಷಿಯೇತರ ಕಸುಬು. ಬರ್ಮೀಯರ ಆಹಾರದಲ್ಲಿ ಮೀನು ಮುಖ್ಯ ಸಸಾರಜನಕಪೂರಕವಾಗಿದೆ. 2655 ಕಿಮೀ ಉದ್ದ ಸಮುದ್ರ ತೀರವಿದ್ದರೂ ಉಪ್ಪುನಿಂದ ಮೀನುಗಾರಿಕೆ ಸೀಮಿತವಾಗಿದೆ. ಬರ್ಮಿಯರು ಸಿಹಿನೀರಿನ ಮೀನನ್ನೇ ಹೆಚ್ಚಾಗಿ ಬಯಸುತ್ತಾರೆ ಮೈನ್‍ಮಾರ್ ಸಮುದ್ರದಾಳದ ಮೀನುಗಾರಿಕೆ ಅಭಿವೃದ್ಧಿ ಸಂಬಂಧದಲ್ಲಿ ಜಂಟಿಪ್ರಯತ್ನಗಳನ್ನು ನಡೆಸುವುದಕ್ಕೆ ಜಪಾನ್, ಥೈಲೆಂಡಿನ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಶೈತ್ಯಾಗಾರಗಳನ್ನೂ ಡಬ್ಬಗಳಲ್ಲಿ ಮೀನು ಕೆಡದಂತೆ ತುಂಬುವ ಕಾರ್ಖಾನೆಗಳನ್ನೂ ಮೀನಿನ ಹಿಟ್ಟಿನ ಕಾರ್ಖಾನೆಗಳನ್ನೂ ಸ್ಧಾಪಿಸಿದೆ. 1979ರಲ್ಲಿ 565.300 ಟನ್ ಮೀನು ಹಿಡಿಯಲಾಗಿತ್ತು.
	ಅರಣ್ಯ ಗಾರಿಕೆ: ಅರಣ್ಯ ಮೈನ್‍ಮಾರ್‍ದ ನೈಸರ್ಗಿಕ ಸಂಪತ್ತು. ದೇಶದ ಸೇಕಡಾ 57ಕ್ಕೂ ಹೆಚ್ಚುಭಾಗವನ್ನು (ಸುಮಾರು 3,76,302 ಚ. ಕಿಮೀ) ಅರಣ್ಯಗಳು ಆವರಿಸಿವೆ. ಮುಖ್ಯವಾಗಿ ರಫ್ತಾಗುವ ತೇಗದ ಮರಗಳು ಅರಣ್ಯ ಪ್ರದೇಶದ ಸುಮಾರು ಸೇಕಡಾ 30 ಭಾಗದಲ್ಲಿ ಬೆಳೆಯುತ್ತವೆ. ಅರಣ್ಯೋತ್ಪಾದನೆಗಳಲ್ಲಿ ಚೌಬೀನೆ ಮುಖ್ಯ. ಅರಗು, ರಾಳ ಮತ್ತು ಬೊಂಬು ಇತರ ಉತ್ಪಾದನೆಗಳು, ಡಲ್ಲ, ಆಕ್‍ಯಿನ್ ಮತ್ತು ರಂಗೂನ್‍ಗಳಲ್ಲಿ ಮರ ಕೊಯ್ಯುವ ಕಾರ್ಖಾನೆಗಳಿವೆ. ಮೈನ್‍ಮಾರ್ ಅರಣ್ಯವನ್ನು ರಾಷ್ಟ್ರೀಯ ಸಂಪತ್ತನ್ನಾಗಿ ಪರಿಗಣಿಸಿ, ಎಲ್ಲ ಅರಣ್ಯ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. 1982ರಲ್ಲಿ 50,00,00 ಘನ ಟನ್ ತೇಗದ ಮರ ಮತ್ತು 6,95000 ಘನ ಟನ್‍ಗಳ ಗಟ್ಟಿಮರದ ಉತ್ಪಾದನೆಯಾಗಿತ್ತು.
	ಗಣಿಗಾರಿಕೆ: ಮೈನ್‍ಮಾರ್‍ದಲ್ಲಿ ಖನಿಜ ನಿಕ್ಷೇಪಗಳು ಹೇರಳವಾಗಿವೆ. ಸೀಸ, ಸತು, ಬೆಳ್ಳಿ, ತಾಮ್ರ ನಿಕಲ್ ಮತ್ತು ಕೋಬಾಲ್ಟ್ ನಾಮ್‍ಟೂದಲ್ಲಿರುವ ಬಾಲ್ಡ್ವಿನ್ ಗಣಿಗಳಲ್ಲಿ ದೊರೆಕುತ್ತವೆ. ಕೀ ಆ ರಾಜ್ಯದಲ್ಲಿರುವ ಮಾಚಿ ಗಣಿಗಳಲ್ಲಿ ಮತ್ತು ತನರಸಮ್ ಪ್ರದೇಶದಲ್ಲಿ ತವರ ಮತ್ತು ಟಂಗಾಸ್ಟನ್ ದೊರಕುತ್ತವೆ. ಜಾಕ್ ಮತ್ತು ಲಾನಿವಾ ಪ್ರದೇಶಗಳಲ್ಲಿ ಪೆಟ್ರೋಲಿಯಮ್ ದೊರಕುತ್ತದೆ. ಜೇಡಶಿಲೆ ಕೆಂಪುಪಚ್ಚೆ, ನೀಲಮಣಿ ಮತ್ತು ಚಿನ್ನ ಇವು ಇತರ ಉತ್ಪಾದನೆಗಳು. ಆ್ಯಂಟಿಮನಿ ಮತ್ತು ಕಲ್ಲಿದ್ದಲುಗಳ ನಿಕ್ಷೇಪಗಳು ಪತ್ತೆಯಾಗಿವೆ. ಎರಡನೆಯ ಮಹಾಯುದ್ಧದ ಮೊದಲಿಗೆ ಮೈನ್‍ಮಾರ್ ಖನಿಜಗಳನ್ನು ರಫ್ತುಮಾಡುವ ಮುಖ್ಯ ದೇಶಗಳ ಪೈಕಿ ಒಂದಾಗಿತ್ತು. ಯುದ್ಧ ಮತ್ತು ಆಂತರಿಕ ಕಲಹಗಳಿಂದ ಖನಿಜಗಳ ಉತ್ಪಾದನೆ ಕುಸಿಯಿತು. ಕೈಗಾರಿಕಾಕರಣಕ್ಕೆ ಅವಶ್ಯವಾದ ಖನಿಜಗಳನ್ನು ಒದಗಿಸುವುದಕ್ಕೆ 1952ರಲ್ಲಿ ಸರ್ಕಾರ ಸ್ಥಾಪಿಸಿದ ಖನಿಜ ಸಂಪತ್ತು ಅಭಿವೃದ್ಧಿ ಸಂಸ್ಥೆ ಸಮೀಕ್ಷೆಗಳನ್ನು ನಡೆಯಿಸಿ ಹಳೆಯ ಗಣಿಗಳನ್ನು ಪುನಃ ಅಣಿಗೊಳಿಸಿ ಕಲ್ಲಿದ್ದಲು, ಟಂಗ್‍ಸ್ಟನ್ ಮತ್ತು ಸತುವುಗಳ ಗಣಿಗಾರಿಕೆ ಪ್ರಾರಂಭಿಸಿತು. ಬ್ರಿಟಿಷ್ ಸ್ವಾಮ್ಯದ ಮೈನ್‍ಮಾರ್ ಎಣ್ಣೆ ಸಂಸ್ಥೆ ನಡೆಸುತ್ತಿದ್ದ ಪೆಟ್ರೋಲಿಯಮ್ ಉದ್ದಿಮೆಯನ್ನು 1963ರಲ್ಲಿಯೂ ಖಾಸಗಿ ಒಡೆತನದಲ್ಲಿದ್ದ ಮಧ್ಯ ಮೈನ್‍ಮಾರ್‍ದ ಎಲ್ಲ ಎಣ್ಣೆಯ ಬಾವಿ ಮತ್ತು ಆಂಗ್ಲೋಟಿನ್ ಕಂಪನಿ ಇವನ್ನು 1964ರಲ್ಲಿಯೂ ರಾಷ್ಟ್ರೀಕರಿಸಲಾಯಿತು. 1964ರಲ್ಲಿ ಪೆಟ್ರೋಲಿಯಮ್ ಮತ್ತು ಖನಿಜಗಳ ಅಭಿವೃದ್ಧಿ ಸಂಸ್ಥೆ ಅಸ್ತಿತ್ವಕ್ಕೆ ಬಂತು. 1963ರಲ್ಲಿ ಮುಖ್ಯವಾಗಿ ಇರವಾಡೀ ಬೋಗುಣಿ ಮತ್ತು ಮುಖಜಭೂಮಿ ಪ್ರದೇಶಗಳಲ್ಲಿ ಪೆಟ್ರೋಲಿಯಮ್ಮನ್ನು ಪತ್ತೆಹೆಚ್ಚುವ ಕೆಲಸ ಪ್ರಾರಂಭವಾಯಿತು. ಪಕಾಕು ಜಿಲ್ಲೆಯಲ್ಲಿರುವ ಆಯಾಡಾದಲ್ಲಿ ಸ್ವಾಭಾವಿಕ ಅನಿಲವನ್ನು ಪತ್ತೆಹಚ್ಚಲಾಯಿತು. ಟಾನ್‍ಜೀ ಮತ್ತು ಮೇ ಮ್ಯೊ ಪ್ರದೇಶಗಳಲ್ಲಿ ಕಬ್ಬಿಣದ ಅದುರಿನ ಪತ್ತೆಯಾಗಿದೆ. 1970ರಲ್ಲಿ ಬರ್ಮೀಯರ ನಿರೀಕ್ಷಾತಂಡಗಳು ಸ್ಯಾನ್‍ಡವೇ ಮತ್ತು ಆಕ್ಯಾಬ್ ಜಿಲ್ಲೆಗಳಲ್ಲಿ ಎಣ್ಣೆಯನ್ನು ಪತ್ತೆ ಹಚ್ಚುವ ಕಾರ್ಯಕೈಗೊಂಡಿತು.

	ಕೈಗಾರಿಕೆ: ಮೈನ್‍ಮಾರ್ ಸ್ವಾತಂತ್ರ್ಯ ಪಡೆದ ಬಳಿಕ ಕೈಗಾರಿಕಾಕರಣದ ಕಡೆ ಗಮನಹರಿಸಿತೆನ್ನಬಹುದು. ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಕೈಗಾರಿಕೆಯ ಪಾಲು ಸೇಕಡಾ 10.3 ಮತ್ತು 1963_64ರಲ್ಲಿ ಸೇಕಡಾ 15 ಇತ್ತು. ಕೈಗಾರಿಕೆಗಳು ಮುಖ್ಯವಾಗಿ ಕೃಷಿ, ಗಣಿ ಮತ್ತು ಅರಣ್ಯಗಳ ಉತ್ಪಾದನೆಗಳನ್ನು ಅವಲಂಬಿಸಿವೆ. ಗಿರಣಿಗಳಲ್ಲಿ ಅಕ್ಕಿ ತಯಾರಿಸುವುದು ಇಂದಿಗೂ ಮುಖ್ಯ ಉದ್ದಿಮೆ. ಕಟ್ಟಿಗೆ ಕೊರೆಯುವುದು, ಬಟ್ಟೆನೇಯುವುದು ಪೆಟ್ರೋಲಿಯಮ್ಮಿನ ಶುದ್ಧೀಕರಣ ಮತ್ತು ಅದುರಿನಿಂದ ಲೋಹ ತಯಾರಿಕೆ ಇವು ಇತರ ಕೈಗಾರಿಕಾ ಚಟುವಟಿಕೆಗಳು. ಸಿಮೆಂಟ್ ಗಮನಾರ್ಹ ಪ್ರಮಾಣದಲ್ಲಿ ತಯಾರಾಗುತ್ತಿದ್ದು ಥಯೆಟ್‍ಮ್ಯೋದಲ್ಲಿ ಹೊಸದಾಗಿ ಸ್ಥಾಪಿಸಲಾದ ಕಾರ್ಖಾನೆ ವರ್ಷದಲ್ಲಿ 180,000 ಟನ್ ತಯಾರಿಸುವ ಸಾಮಥ್ರ್ಯ ಹೊಂದಿದೆ. ದಿನಕ್ಕೆ 4000 ಗ್ಯಾಲನ್ ತೀಕ್ಷ್ಣ ಮದ್ಯ ತಯಾರಿಸುವ ಸಾಮಥ್ರ್ಯವುಳ್ಳ ಒಂದು ಕಾರ್ಖಾನೆ 1966ರಲ್ಲಿ ಸ್ಥಾಪಿತವಾಯಿತು. ತಾಮೈಂಗ್‍ನಲ್ಲಿರುವ ಸರ್ಕಾರಿ ಸ್ವಾಮ್ಯದ ಬಟ್ಟೆ ಕಾರ್ಖಾನೆಗಳು ಒಟ್ಟಾಗಿ 40,000 ಕದಿರುಗಳನ್ನೂ 139 ಮಗ್ಗಗಳನ್ನೂ ಹೊಂದಿದ್ದು ವರ್ಷಕ್ಕೆ 82,29,600 ಮೀಟರ್ ಬಟ್ಟೆ ತಯಾರಿಸುವ ಸಾಮಥ್ರ್ಯ ಪಡೆದಿವೆ.

	ಸರ್ಕಾರದ ಸ್ವಾಮ್ಯಕ್ಕೆ ಸೇರಿದ ಸಕ್ಕರೆ ಕಾರ್ಖಾನೆಗಳೂ ಗೋಣಿನಾರಿನ ಮತ್ತು ಹಂಚಿನ ಕಾರ್ಖಾನೆಗಳೂ ಇವೆ. ದೇಶದಲ್ಲಿರುವ ಸುಮಾರು 2550 ಉದ್ದಿಮೆಗಳ ಪೈಕಿ ಸುಮಾರು 1153 ಪೆಗೂನಲ್ಲಿ ಕೇಂದ್ರೀಕರಿಸಿವೆ. ಕೈಗಾರಿಕೆಗಳ ಬೆಳೆವಣಿಗೆಯನ್ನು ಅಭಿವೃದ್ಧಿಗೊಳಿಸುವುದಕ್ಕೆ ಸರ್ಕಾರ 1952ರಲ್ಲಿ ಕೈಗಾರಿಕಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿತು. 1961ರಲ್ಲಿ ಮೈನ್‍ಮಾರ್ ಆರ್ಥಿಕಾಭಿವೃದ್ಧಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು. ಕೈಗಾರಿಕೆಗಳನ್ನು ರಾಷ್ಟ್ರೀಕರಿಸುವ ತನ್ನ ನಿರ್ಧಾರ ಕ್ರಾಂತಿಕಾರಕ ಸಭೆ ಮಾರ್ಚಿಯಲ್ಲಿ ಘೋಷಿಸಿ ಆರ್ಥಿಕಾಭಿವೃದ್ಧಿ ಸಂಸ್ಥೆಯನ್ನೂ ಅದು ಹೊಂದಿದ್ದ 39 ಸಹಾಯಕ ಸಂಸ್ಥೆಗಳನ್ನೂ ವಶಪಡಿಸಿಕೊಂಡಿತು. ಈ ಸಂಸ್ಥೆಗಳ ವರ್ಗಾವಣೆ 1964ರಲ್ಲಿ ಆರಂಭವಾಯಿತು. 1968ರಲ್ಲಿ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ 75000 ಟನ್ ಸಕ್ಕರೆ, 1369 ದಶಲಕ್ಷ ಸಿಗರೇಟು, 1200 ಟನ್ ಹತ್ತಿಯ ನೂಲು, 270 ದಶಲಕ್ಷ ಮೀಟರ್ ನೇಯ್ದ ಹತ್ತಿಯ ಬಟ್ಟೆ 577000 ಘನಮೀಟರು ಕೊರೆದಕಟ್ಟಿಗೆ 158,000 ಟನ್ ಮೋಟರ್ ಸ್ಪಿರಿಟ್, 233,000 ಟನ್ ಸೀಮೆಯೆಣ್ಣೆ, 16,000 ಟನ್ ಜೆಟ್ ಎಣ್ಣೆ, 241,000 ಟನ್ ಬಟ್ಟಿಯಿಳಿಸಿದ ಎಣ್ಣೆ, 98,000 ಟನ್ ಶೇಷ ಎಣ್ಣೆ, 18,000 ಟನ್ ಪ್ಯಾರಾಫಿನ್ ಮೇಣ ಮತ್ತು 176,000 ಟನ್ ಸಿಮೆಂಟ್ ಇವುಗಳ ಉತ್ಪಾದನೆಯಾಗಿತ್ತು. ಕೈಗಾರಿಕಾ ಯೋಜನೆಗಳಲ್ಲಿ ಯಾಮಾ ಉಕ್ಕಿನ ಕಾರ್ಖಾನೆ, ತಾಮೈಂಗ್‍ನ ಗೋಣಿನಾರು ಕಾರ್ಖಾನೆ, ಕಾನಿಗ್‍ಗಾನಿನ ಇಟ್ಟಿಗೆ ಮತ್ತು ಹಂಚಿನ ಕಾರ್ಖಾನೆ, ಸ್ಪಾರ್ಕ್‍ಪ್ಲಗ್ ಕಾರ್ಖಾನೆ, ಪಾದರಕ್ಷೆಗಳ ಕಾರ್ಖಾನೆ, ಅನೇಕ ಅಕ್ಕಿಗಿರಣಿಗಳು ರೇಡಿಯೊ ಜೋಡಿಸುವ ಯಂತ್ರಾಗಾರ ಮತ್ತು ಔಷಧ ತಯಾರಿಕಾ ಸಂಸ್ಥೆ ಸೇರುತ್ತವೆ. ಚೌಕ್‍ನಲ್ಲಿ ಇನ್ನೊಂದು ತೈಲ ಶುದ್ಧೀಕರಣ ಕಾರ್ಖಾನೆ ತೆರೆಯಲಾಗಿದೆ. ಮೈನ್‍ಮಾರ್‍ದ ಮೂರನೆಯ ಚತುರ್ವರ್ಷದ ಯೋಜನಾವಧಿಯ (1978-82) 1982ರಲ್ಲಿ ಅತ್ಯಂತ ಹೆಚ್ಚಿನ ಉತ್ಪಾದನೆಯೊಂದೇ ಅಲ್ಲದೆ ತಯಾರಾದ ವಸ್ತುಗಳ ಗುಣಮಟ್ಟ ಕೂಡ ಸುಧಾರಿಸಿತು. ಪ್ರೋಮ್, ಮನ್ ಮತ್ತು ಇನ್‍ಸೇನ್ ನಗರಗಳಲ್ಲಿ ಹೊಸದಾಗಿ ಅನಿಲೋತ್ಪಾದಿತ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಯಿತು. 1981ರಲ್ಲಿ 177. ಮಿಲಿಯನ್ ವಾಟ್ಸ್ ಇದ್ದ ವಿದ್ಯುತ್ ಉತ್ಪಾದನೆ 1982ರಲ್ಲಿ 214 ಮಿ. ವಾಟ್ಸ್‍ಗೆ ಏರಿತ್ತು. ಗಣಿಗಾರಿಕೆಯ ಉತ್ಪನ್ನ ಸೇಕಡಾ 15.8 ರಷ್ಟು ಹೆಚ್ಚಿತ್ತು. ಮೊನ್ಯಾವ ಬಳಿಯ ತಾಮ್ರದ ಗಣಿಯ ಮತ್ತು ಸರೀಯದಲ್ಲಿಯ ಟನ್ ಅದುರು ಕರಗಿಸುವ ಕಾರ್ಖಾನೆಯ ಉತ್ಪತ್ತಿಗಳು ಗಮನಾರ್ಹವಾಗಿದ್ದುವು. ಇರವಾಡೀ ನದಿ ಮುಖಜ ಭೂಮಿಯಲ್ಲಿ ಎರಡು ಪುರಾತನ ನಗರವಾದ ಪಗಾನ್ ಬಳಿಯಲ್ಲಿ ಒಂದು ಹೀಗೆ ಒಟ್ಟು ಮೂರು ಎಣ್ಣೆ ಬಾವಿಗಳನ್ನು ಪತ್ತೆಮಾಡಿ ಅವುಗಳಲ್ಲಿ ಸುಮಾರು 172 ಕೋಟಿ ಬ್ಯಾರೆಲ್ ಎಣ್ಣೆ ಸಂಗ್ರಹವಿರಬಹುದೆಂದು ಅಂದಾಜು ಮಾಡಲಾಗಿದೆ. ಕೈಗಾರಿಕೆಯಲ್ಲಿ ಮೈನ್‍ಮಾರ್ ಮುಂದುವರಿಯುವಂತೆ ಮಾಡಲು ಎಲ್ಲ ಪ್ರಯತ್ನಗಳನ್ನೂ ಕೈಗೊಳ್ಳಲಾಗಿದೆ.

	ಸಾರಿಗೆ ಸಂಪರ್ಕ: ಮೈನ್‍ಮಾರ್ ಹೆಚ್ಚಾಗಿ ಸಮುದ್ರ ಮತ್ತು ನದಿಸಾರಿಗೆಗಳನ್ನು ಅವಲಂಬಿಸಿದೆ. ಒಳನಾಡಿನ ಸಾರಿಗೆಗೆ ಮಿತವಾಗಿರುವ ರೈಲು ಮತ್ತು ಇತರ ಮಾರ್ಗಗಳಿಗೆ ಜಲಮಾರ್ಗಗಳು ಪೂರಕವಾಗಿವೆ. ಮುಖ್ಯವಾದ ಅಕ್ಕಿಯ ವ್ಯಾಪಾರ ಜಲಸಾರಿಗೆಯನ್ನು ಅವಲಂಬಿಸಿದೆ. ಇರವಾಡೀನದಿ ದೇಶದ ಸಾರಿಗೆ ಪದ್ಧತಿಯ ಬೆನ್ನು ಮೂಳೆಯಂತಿದ್ದು ಸುಮಾರು 500000 ಸಣ್ಣ ಹಡಗು ಮತ್ತು ದೋಣಿಗಳು ಸಮುದ್ರದಿಂದ ಈ ನದಿಯಲ್ಲಿ 1449 ಕಿಮೀ ವರೆಗೆ ಸಂಚರಿಸುತ್ತವೆ. ಚಿಂದ್ವಿಸ್ ನದಿಯಲ್ಲಿ ಸುಮಾರು 612 ಕಿಮೀ ವರೆಗೆ ಸಂಚಾರ ಮಾಡಬಹುದು. ಸಲ್‍ವೀನ್ ಮತ್ತು ಸಿತಾನ್ ನದಿಗಳೂ ಅನೇಕ ಕೂಡುಹೊಳೆ ಮತ್ತು ಹಳ್ಳಿಗಳಲ್ಲಿ ಸಣ್ಣದೋಣಿಗಳು ಸಂಚರಿಸುತ್ತವೆ. ಒಳನಾಡಿನ ಜಲಸಾರಿಗೆ ಮಂಡಲಿ ಸುಮಾರು 660 ಹಡಗುಗಳನ್ನು ನಡೆಸುತ್ತದೆ. ಸಮುದ್ರ ಸಾರಿಗೆಯನ್ನು ನಿಯಂತ್ರಿಸುವ ಅಧಿಕಾರವನ್ನು ಹೊಂದಿರುವ ಸರ್ಕಾರ ಕರಾವಳಿ ಪ್ರದೇಶ ಮತ್ತು ಸಮುದ್ರಯಾನಗಳ ಸರಕು ಮತ್ತು ಪ್ರವಾಸಿಗಳ ಸಾಗಾಣಿಕೆ ಹಡಗುಗಳನ್ನು ನಡೆಸುತ್ತದೆ. ಹೆದ್ದಾರಿ, ರೈಲುಮಾರ್ಗ, ಒಳನಾಡಿನ ಜಲಮಾರ್ಗ ಮತ್ತು ವಾಯು ಮಾರ್ಗಗಳಿಗೆ ಕೊನೆ ನಿಲ್ದಾಣವಾಗಿರುವ ರಂಗೂನ್ ಸಾಗರ ಸಂಚಾರಿ ಹಡಗುಗಳಿಗೆ ಮುಖ್ಯ ಬಂದರು. ಅದು ಸಾಗರಮಾರ್ಗ ನಡೆಯುವ ವ್ಯಾಪಾರದ ಸೇಕಡ 85 ಭಾಗವನ್ನು ನಿರ್ವಹಿಸುತ್ತದೆ. ಪಶ್ಚಿಮ ಮೈನ್‍ಮಾರ್‍ಕ್ಕೆ ಆಕ್ಯಾಬ್, ಮುಖಜಭೂಮಿ ಪ್ರದೇಶಕ್ಕೆ ಬೆಸೀನ್ ಮತ್ತು ತನ ಸರಮ್ ಪ್ರದೇಶದ ಖನಿಜ ಮತ್ತು ಚೌಬೀನೆಗಳ ರಫ್ತಿನ ವ್ಯಾಪಾರವನ್ನು ನಿರ್ವಹಿಸುವುದಕ್ಕೆ ಮೂಲ್‍ಮೇನ್, ತವಾಯ್, ಮತ್ತು ಮರ್‍ಗ್ವೇ ಬಂದರುಗಳಿವೆ. ಕ್ಯಾಂಕ್‍ಪಿಯು, ಸ್ಯಾನ್‍ಡವೇ ಮತ್ತು ಕಾತುಂಗ್ ಇನ್ನುಳಿದ ಮುಖ್ಯ ಬಂದರುಗಳು. ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಲಾಶಿಯೋ ಮತ್ತು ದಕ್ಷಿಣಚೀನದಲ್ಲಿರುವ ಕುನ್ಮಿಂಗ್‍ಗಳ ನಡುವಣ ಮಾರ್ಗ, ಮೀಚೀನ ಮತ್ತು ಅಸ್ಸಾಮಿನಲ್ಲಿರುವ ತೆಡೋಗಳನ್ನು ಜೋಡಿಸುವ ಮಾರ್ಗ ಹಾಗೂ ದಕ್ಷಿಣ ಷಾನ್ ಪ್ರಸ್ಥ ಭೂಮಿಯಲ್ಲಿರುವ ಕೆಂಟುಂಗ್ ಮತ್ತು ಉತ್ತರ ಥೈಲೆಂಡ್‍ಗಳ ನಡುವಣ ಮಾರ್ಗ ಹೀಗೆ ಮೂರು ಅಂತರಾಷ್ಟ್ರೀಯ ಮಾರ್ಗಗಳು ಬಳಕೆಯಲ್ಲಿದ್ದುವು. 1970ರ ದಶಕದ ಆದಿಯಲ್ಲಿ ಸುಮಾರು 4025 ಕಿಮೀ ಉದ್ದದ ಶಾಖೆಗಳನ್ನೊಳಗೊಂಡ ಹೆದ್ದಾರಿಗಳು ಮತ್ತು 9660 ಕಿಮೀ ಉದ್ದದ ಮುಖ್ಯ ಮಾರ್ಗಗಳು ಇದ್ದುವು, 1970 ರ ಶತಕದ ಆದಿಯಲ್ಲಿ ಸುಮಾರು 3897 ಕಿಮೀ ಉದ್ದದ ಕಿರಿಯಗಲದ ರೈಲು ಮಾರ್ಗಗಳಿದ್ದುವು. 1164 ಕಿಮೀ ಉದ್ದದ ರಂಗೂನ್ ಮಾಂಡಲೆ ಮೀಚೀನ ರೈಲುದಾರಿ ಪ್ರಧಾನ ರೈಲುದಾರಿಯಾಗಿದ್ದು ಅದರ ಶಾಖೆಗಳು ಉತ್ತರ ಮತ್ತು ಮಧ್ಯ ಷಾನ್ ಪ್ರಸ್ಥಭೂಮಿಗಳನ್ನು ಇರವಾಡೀಯೊಂದಿಗೆ ಜೋಡಿಸಿವೆ. ಹಾಗೂ ಪ್ರಮುಖನಗರಗಳ ಮಧ್ಯೆ ಸಂಪರ್ಕವಿದ್ದು ಒಟ್ಟು 3.315 ಕಿಮೀ(1975) ರೈಲು ರಸ್ತೆಯಿದೆ. ಪ್ರೋಮ್ ರಂಗೂನ್‍ಗಳ ನಡುವಣ ರೈಲು ಮಾರ್ಗದ ಉದ್ದ ಸುಮಾರು 260 ಕಿಮೀಗಳು. 1975ರಲ್ಲಿ ಒಳನಾಡಿನ ಜಲಸಾರಿಗೆ 8000 ಕಿಮೀ ರಸ್ತೆ ಸಂಪರ್ಕ 27,400 ಕಿಮೀ ಇತ್ತು. ಮೈನ್‍ಮಾರ್ ಒಕ್ಕೂಟದ ವಿಮಾನ ಸಂಸ್ಥೆ ವಿಮಾನಗಳು ರಂಗೂನ್ ಮತ್ತು ಇತರ 50 ನಗರಗಳೊಡನೆ ಸಂಪರ್ಕವನ್ನೊದಗಿಸುತ್ತವೆ. ಅದೇ ಸಂಸ್ಥೆಯ ವಿಮಾನಗಳು ವಾರಕ್ಕೆ ಒಂದು ಇಲ್ಲವೇ ಎರಡು ಸಲ ಹಾಂಗ್‍ಕಾಂಗ್, ಬಾಂಗ್‍ಕಾಕ್, ಡಾಕಾ, ಕಲ್ಕತ್ತ ಮತ್ತು ಖಟ್ಮಂಡುಗಳಿಗೂ ಹೋಗುತ್ತವೆ. ರಂಗೂನ್ ನಗರಕ್ಕೆ 19 ಕಿಮೀದೂರದಲ್ಲಿರುವ ರಂಗೂನ್ ವಿಮಾನ ನಿಲ್ದಾಣ ಮತ್ತು ಮಾಂಡಲೇ ವಿಮಾನ ನಿಲ್ದಾಣಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ದೂರವಾಣಿ, ತಂತಿ, ರೇಡಿಯೋ ಮತ್ತು ಟಪಾಲು ಸೌಲಭ್ಯಗಳಿವೆ. ರಂಗೂನಿನಲ್ಲಿ ಒಂದು ಬಾನುಲಿ ಕೇಂದ್ರವಿದೆ. ವಿವಿಧ ವಾರ್ತಾಪತ್ರಿಕೆಗಳುಂಟು.

	ಸರ್ಕಾರ: 1962ರ ಮೊದಲಿಗೆ ಮೈನ್‍ಮಾರ್ 1947ರ ಸಂವಿಧಾನದ ಕೆಳಗೆ ಸಂಸದೀಯ ಪ್ರಜಾ ಪ್ರಭುತ್ವದ ಸಂಯುಕ್ತ ಸಂಘವಾಗಿತ್ತು. 1962ರ ಮಾರ್ಚ್ 2ರಂದು ಸೈನಿಕ ಪಡೆಗಳ ಕ್ಷಿಪ್ರಕ್ರಾಂತಿಯ ಅನಂತರ ಸಂವಿಧಾನವನ್ನು ರದ್ದು ಮಾಡಿ ವಿಧಾನಮಂಡಲವನ್ನು ವಿಸರ್ಜಿಸಲಾಯಿತ್ತು. ಹಿರಿಯ ಸೈನಿಕ ಅಧಿಕಾರಿಗಳು ಮತ್ತು ಒಬ್ಬ ನಾಗರಿಕ ಸದಸ್ಯನಿದ್ದ ಕ್ರಾಂತಿಕಾರಕ ಸಭೆ ಅಧಿಕಾರ ವಹಿಸಿಕೊಂಡಿತು. ಸಭೆಯ ಅಧ್ಯಕ್ಷ ನೆವಿನ್ ಅವರೇ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿಯ ಅಧಿಕಾರಗಳನ್ನು ವಹಿಸಿಕೊಂಡರು. ಸಭೆ ಹೊಸ ಆಡಳಿತವನ್ನು ಸಾಮಾಜಿಕ ಪ್ರಜಾ ಪ್ರಭುತ್ವವೆಂದಿತು. ಎಲ್ಲ ಕಾಯಿದೆಗಳನ್ನು ಅಧ್ಯಕ್ಷರೇ ಹೊರಡಿಸುವುದೂ. ಆ ಕಾಯಿದೆಗಳನ್ನು ಕಾರ್ಯ ರೂಪದಲ್ಲಿ ತರುವ ಕೆಲಸವನ್ನೂ ಪ್ರಧಾನಮಂತ್ರಿಯಾಗಿ ಆತನೇ ಮಂತ್ರಿಮಂಡಲ ಸಹಾಯದಿಂದ ನಿರ್ವಹಿಸುವುದೂ ಆಗಿದ್ದು ಎಲ್ಲ ಆಜ್ಞೆ ಮತ್ತು ನೇಮಕಾತಿಗಳು ಆತನಿಂದಲೇ ಮಾಡಲಾಗುವುದು. ಕ್ರಾಂತಿಕಾರಕ ಸಭೆಯ ಅಧ್ಯಕ್ಷನಿಂದ ಪ್ರಸಕ್ತ ಅಧಿಕಾರ ಮತ್ತು ಕರ್ತವ್ಯಗಳು ಐದು ಪರಮೋಚ್ಚ ರಾಜ್ಯಸಭೆಗಳಿಗೆ ಪ್ರತ್ಯಾಯೋಜಿತವಾದುವು. ಸಂಯುಕ್ತಸಂಘ ಪದ್ಧತಿಯ ಬದಲಾಗಿ ಏಕೀಕೃತ ರಾಷ್ಟ್ರೀಯ ಸರ್ಕಾರ ಅಸ್ತಿತ್ತ್ವದಲ್ಲಿ ಬಂದಿತು. ಸಂವಿಧಾನದ ಕೆಳಗೆ ರಾಜ್ಯಸಭೆಗಳ ಸದಸ್ಯರು ಚುನಾಯಿತರಾಗುತ್ತಿದ್ದರು. ಆದರೆ ಈಗ ಅವರು ಕ್ರಾಂತಿಕಾರಕ ಸಭೆಯ ಅಧ್ಯಕ್ಷನಿಂದ ನೇಮಿತರಾಗುತ್ತಾರೆ. ಮುಖ್ಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಮತ್ತು ಕ್ರಾಂತಿಕಾರಕ ಸಭೆಯ ಈರ್ವರು ಸದಸ್ಯರಿರುವ ವಿಶೇಷ ಅಪೀಲು ನ್ಯಾಯಾಲಯ ಸಭಾಧ್ಯಕ್ಷನಿಂದ ನ್ಯಾಯಕ ಅಧಿಕಾರಗಳನ್ನು ಪಡೆದಿವೆ.

	ಆಡಳಿತ: ಮೈನ್‍ಮಾರ್‍ದೇಶವನ್ನು ನಾಲ್ಕು ರಾಜ್ಯಗಳನ್ನಾಗಿ; ಅನಂತರ ಒಂದು ವಿಶಿಷ್ಟ ವಿಭಾಗವೂ ಸೇರಿದಂತೆ ಒಟ್ಟು 9 ಆಡಳಿತ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅನಂತರ ಜಿಲ್ಲೆಗಳು, ಕೇಂದ್ರಗಳು, ಪಟ್ಟಣ ಪ್ರದೇಶಗಳು, ಮುಂತಾದ ಆಡಳಿತಾತ್ಮಕ ಘಟಕಗಳು ಬರುತ್ತವೆ. ಸಂಘಟನಾತ್ಮಕ ಮತ್ತು ಆಡಳಿತಾತ್ಮಕ ಎಂಬ ಎರಡು ವಲಯಗಳಿದ್ದು ಮೊದಲನೆಯ ವಲಯದಲ್ಲಿ ಕಾರ್ಮಿಕರ ಮತ್ತು ರೈತರ ಸಭೆಗಳಿವೆ. ಆಡಳಿತ ಭದ್ರತೆ ಆಡಳಿತಾತ್ಮಕ ಸಮಿತಿಯ ಕೈಯಲ್ಲಿದೆ. 20 ಸದಸ್ಯರ ಸಮಿತಿ, 10 ಸದಸ್ಯರ ಉಪಸಮಿತಿ ಹಾಗೂ ಒಬ್ಬ ಸೈನಿಕ ಅಧಿಕಾರಿ ಮತ್ತು ಒಬ್ಬ ನ್ಯಾಯಾಧೀಶ ಇರುವ ಐವರು ಸದಸ್ಯರ ಕಾರ್ಯನಿರ್ವಾಹಕ ಸಮಿತಿಗಳು ಇರುತ್ತವೆ. ಇವುಗಳ ಹೊರತಾಗಿ ನಾಗರಿಕ ಅಧಿಕಾರಿಗಳು ನ್ಯಾಯಾಧೀಶರಾಗಿರುವ ಸ್ಥಳೀಯ ನ್ಯಾಯಾಲಯಗಳಿರುತ್ತವೆ. 1971ರಲ್ಲಿ ಕ್ರಾಂತಿಕಾರಕ ಸಭೆ ಹೊಸ ಸಂವಿಧಾನವನ್ನು ರಚಿಸುವುದಕ್ಕೆ ಒಂದು ಸಂವಿಧಾನ ಸಮಿತಿಯನ್ನು ನೇಮಿಸಿತು. 1972ರಲ್ಲಿ ಸೈನಿಕ ಮಂತ್ರಿಮಂಡಲ, ನೆವಿನ್ ಸೇರಿದಂತೆ ಅಧಿಕ ಸೈನಿಕ ಸದಸ್ಯರ ರಾಜೀನಾಮೆ ಮತ್ತು ಪ್ರಜಾ ಮಂತ್ರಿಗಳ ನೇಮಕ ಇವುಗಳಿಂದಾಗಿ ಪ್ರಜಾ ಮಂತ್ರಿಮಂಡಲವಾಗಿ ಮಾರ್ಪಟ್ಟಿತು. ಅದೇ ಸಮಯಕ್ಕೆ ಹೊಸ ಸಂವಿಧಾನದ ಕರಡೊಂದು ಪ್ರಕಟಿಸಲ್ಪಟ್ಟು ಅದು ಜನತೆಯೊಂದಿಗೆ ಚರ್ಚೆ ಮತ್ತು ತಿದ್ದುಪಡಿಗಳ ಅನಂತರ 1974ರಲ್ಲಿ ಅಂಗೀಕರಿಸುವುದಾಗಿ ಹೇಳಲಾಯಿತು. ಏಕಪಕ್ಷ ಪದ್ಧತಿ ಮತ್ತು ಒಂದು ಚುನಾಯಿತ ಸಭೆಯ ಸಮಾಜ ಸ್ವಾಮ್ಯವಾದಿ ಮೈನ್‍ಮಾರ್ ಗಣರಾಜ್ಯದ ಸ್ಥಾಪನೆಯಾಗಬೇಕೆಂದು ಕರಡಿನಲ್ಲಿ ಹೇಳಲಾಗಿತ್ತು. ಚಿನ್ ವಿಶೇಷ ವಿಭಾಗದ ಹೆಸರಚಿನ್ ರಾಜ್ಯವೆಂದು ಬದಲಾಗಬೇಕು ಮತ್ತು ಆರಕಾನೀಸ್ ಮತ್ತು ಮಾನ್ಸ್‍ಗಳಿಗೆ ಎರಡು ಹೊಸ ಸ್ವಯಾಮಾಧಿಕಾರ ಹೊಂದಿರುವ ರಾಜ್ಯಗಳ ನಿರ್ಮಾಣವಾಗಬೇಕೆಂದು ಕೂಡ ಕರಡಿನಲ್ಲಿ ನಮೂದಿಸಲಾಗಿತ್ತು.

	ನ್ಯಾಯಪದ್ಧತಿ: ಮಾರ್ಚ್ 1962ರ ಪೂರ್ವದಲ್ಲಿ ಪ್ರಕರಣಗಳನ್ನು ಮೊದಲ ಬಾರಿಗೆ ನಗರ ಪ್ರದೇಶ, ಉಪವಿಭಾಗ ಮತ್ತು ಜಿಲ್ಲೆಗಳ ಮ್ಯಾಜಿಸ್ಟ್ರೇಟರು ವಿಚಾರಿಸುತ್ತಿದ್ದರು. ಒಬ್ಬ ನ್ಯಾಯಾಧೀಶ ಮತ್ತು ಒಂಬತ್ತು ಸಹವರ್ತಿ ನ್ಯಾಯಾಧೀಶರು ಇರುತ್ತಿದ್ದ ಉಚ್ಚ ನ್ಯಾಯಾಲಯ ಮೊದಲು ಬಾರಿಯ ವಿಚಾರಣೆಯ ನ್ಯಾಯಾಲಯವೂ ಮುಖ್ಯ ಅಪೀಲು ನ್ಯಾಯಲಯವೂ ಆಗಿತ್ತು. ಅದರ ಅಧಿಕಾರವ್ಯಾಪ್ತಿಗೆ ರಾಜಧಾನಿ ರಂಗೂನ್, ಸಂವಿಧಾನಿಕ ಪ್ರಶ್ನೆಗಳು ಮತ್ತು ಸಂಯುಕ್ತ ಸಂಘಕ್ಕೆ ಸಂಬಂಧಿಸಿದ ವಾದಗ್ರಸ್ತ ವಿಷಯಗಳು ಸೇರುತ್ತಿದ್ದುವು. ಪರಮೋಚ್ಚ ನ್ಯಾಯಾಧೀಶರು ಇದ್ದರು. ಕ್ರಾಂತಿಕಾರಕ ಸಭೆ ಪರಮೋಚ್ಚ ನ್ಯಾಯಾಲಯ ಮತ್ತು ಉಚ್ಚನ್ಯಾಯಾಲಯಗಳನ್ನು ರದ್ದು ಮಾಡಿ ಅವುಗಳ ಸ್ಥಾನದಲ್ಲಿ ಒಬ್ಬ ಮುಖ್ಯ ನ್ಯಾಯಾಧೀಶ ಮತ್ತು ಆರು ಸಹವರ್ತಿ ನ್ಯಾಯಾಧೀಶರಿರುವ ಮುಖ್ಯ ನ್ಯಾಯಾಲಯವನ್ನು ನೇಮಿಸಿತು.

	ಆರೋಗ್ಯ: ಮೈನ್‍ಮಾರ್‍ದ ಜನಸಂಖ್ಯೆಯಲ್ಲಿ ಅಧಿಕ ಸಂಖ್ಯಾತರು ಕೃಷಿಜೀವನ ನಡೆಸುವರು. ಅವರಲ್ಲಿ ತೀರ ಕಡಿಮೆ ಜನರಿಗೆ ಮಾತ್ರ ಇತ್ತೀಚಿನ ವರೆಗೆ ಆಧುನಿಕ ವೈದ್ಯಕೀಯ ಚಿಕಿತ್ಸೆ ಲಭ್ಯವಾಗುತ್ತಿತ್ತು. 1967ರಲ್ಲಿ ವೈದ್ಯರ ಮತ್ತು ಜನಸಂಖ್ಯೆಯ ಪ್ರಮಾಣ 1 : 12500 ಇತ್ತಾದರೂ ಗ್ರಾಮೀಣ ಪ್ರದೇಶಗಳಲ್ಲಿ ಅದು 1 : 28,000 ಇತ್ತು. ಈ ಅಸಮತೆಯನ್ನು ನಿವಾರಿಸುವುದಕ್ಕೆ ವೈದ್ಯರನ್ನು ಅಧಿಕ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಕಳಿಸುವುದು ಮತ್ತು ಗ್ರಾಮೀಣ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸುವುದು ಇವುಗಳ ಮೂಲಕ ಆರೋಗ್ಯ ಸೇವೆಗಳನ್ನು ಪುನವ್ರ್ಯವಸ್ಥೆಗೊಳಿಸಲಾಯಿತು. ಖಾಸಗಿವೃತ್ತಿ ನಡೆಸುತ್ತಿದ್ದ ವೈದ್ಯರ ಸೇವೆಯನ್ನು ಎರಡು ವರ್ಷಗಳ ಅವಧಿಗೆ ಸೇರಿಸಿಕೊಳ್ಳಲಾಯಿತು. 1967ರಲ್ಲಿ ಆಸ್ಪತ್ರೆ ಮತ್ತು ಔಷಧ ವಿತರಣೆ ಕೇಂದ್ರಗಳ ಸಂಖ್ಯೆ ಕ್ರಮವಾಗಿ 315 ಮತ್ತು 65 ಇದ್ದುವು. ದೇಶದಲ್ಲಿ ಇತ್ತೀಚೆಗೆ ಆಸ್ಪತ್ರೆಗಳಿಗೆ ಪ್ರವೇಶ, ವೈದ್ಯಕೀಯ ಚಿಕಿತ್ಸೆ, ಔಷಧ ಮತ್ತು ಪಥ್ಯಗಳನ್ನು ಪುಕ್ಕಟೆಯಾಗಿ ನೀಡುವ ಸರಿಸಮಾನ ವ್ಯವಸ್ಥೆ ಪ್ರಾರಂಭವಾಗಿದೆ. 1967ರಲ್ಲಿ ಆಸ್ಪತ್ರೆಗಳಲ್ಲಿ 21.671 ರೋಗಿಶಯ್ಯೆಗಳಿದ್ದುವು. 2.635 ವೈದ್ಯರು, 25 ದಂತವೈದ್ಯರು, 2.024 ದಾದಿಯರು ಮತ್ತು 3,685 ಸೂಲಗಿತ್ತಿಯರು ಇದ್ದರು. ಒಂದು ಪೌಷ್ಟಿಕ ಆಹಾರ ಸಂಶೋಧನ ತಂಡ ಬರ್ಮಿಯರ ಆಹಾರ ಸಂಬಂಧದ ಸಂಶೋಧನೆ ನಡೆಯಿಸಿ ಸಲಹೆಗಳನ್ನು ವೃತ್ತಪತ್ರಿಕೆ, ರೇಡಿಯೋ ಮೂಲಕ ಹಾಗೂ ಕಚೇರಿ ಮತ್ತು ಕಾರ್ಖಾನೆಗಳಲ್ಲಿ ಪ್ರದರ್ಶನಗಳ ಮೂಲಕ ತಿಳಿಯಪಡಿಸುತ್ತಿದೆ. ಇದರಿಂದ ಬರ್ಮಿಯರ ಎತ್ತರ ಮತ್ತು ತೂಕಗಳು ಹೆಚ್ಚಿವೆ. ಕಳೆದ ಮೂವತ್ತು ವರ್ಷಗಳಲ್ಲಿ ಮೈನ್‍ಮಾರ್‍ದ ಜನತೆಯ ಆಯುಷ್ಯದ ಅವಧಿ ಗಮನಾರ್ಹವಾಗಿ ಏರಿದೆ.

	ಪತ್ರಿಕೋದ್ಯಮ: ಕ್ರಾಂತಿಕಾರಕ ಸಭೆ ಸಂವಿಧಾನವನ್ನು ರದ್ದುಗೊಳಿಸಿದೆಯಾದರೂ ಪತ್ರಿಕಾ ಸ್ವಾತಂತ್ರ್ಯವನ್ನು ತಾನು ಮಾನ್ಯ ಮಾಡುವುದಾಗಿ ಸಾರಿದೆ. ಜುಲೈ 1963ರಲ್ಲಿ ಸರ್ಕಾರ ಆಂತರಿಕ ಸುದ್ದಿ ಹಂಚುವಿಕೆಯ ಏಕಸ್ವಾಮ್ಶವನ್ನು ಪಡೆದಿರುವ ನ್ಯೂಸ್ ಏಜೆನ್ಸಿ ಮೈನ್‍ಮಾರ್, ಎಂಬ ತನ್ನದೆ ಆದ ಪತ್ರಿಕಾ ನಿಯೋಗವನ್ನು ಸ್ಥಾಪಿಸಿತು. ರಂಗೂನಿನಿಂದ ಬರ್ಮಿ, ಇಂಗ್ಲಿಷ್, ಉರ್ದು, ತಮಿಳು. ಚೀನಿ ಮತ್ತು ಹಿಂದಿ ಭಾಷೆಗಳಲ್ಲಿ ವೃತ್ತಪತ್ರಿಕೆಗಳು ಹೊರಡುತ್ತವೆ. ಮಾಂಡಲೇಯಿಂದ ಹೊರಡುವ ಪತ್ರಿಕೆಗಳಲ್ಲಿ ಕಮ್ಯುನಿಸ್ಟ್ ಪಕ್ಷದತ್ತ ವಾಲಿರುವ ಲುಡು ಮುಖ್ಯವಾದದ್ದು.

	ಜನ ಧರ್ಮ, ಭಾಷೆ ಮತ್ತು ಉಡುಪು: ಪ್ರಾಚೀನ ಕಾಲದಲ್ಲಿ ಟಿಬೆಟ್ಟಿನ ಪೂರ್ವಕ್ಕಿರುವ ಗುಡ್ಡಗಳಿಂದ ಬರ್ಮಿಯರು ಇರವಾಡೀ ಕೊಳ್ಳಕ್ಕೆ ಬಂದು ನೆಲೆಸಿದಾಗ ಅವರ ಮತ್ತು ಅಲ್ಲಿ ವಾಸಮಾಡಿಕೊಂಡಿದ್ದ ಮಾನ್ ಮತ್ತು ಪ್ಯೂ ಜನರ ನಡುವೆ ಅಂತರ್ವಿವಾಹಗಳು ನಡೆದುವು. ಅಂದಿನಿಂದ ಈಶಾನ್ಯ ಮತ್ತು ವಾಯವ್ಯಗಳಿಂದ ವಲಸೆ ಬಂದವರು ಮೈನ್‍ಮಾರ್‍ದಲ್ಲಿ ನೆಲೆಸಿದ್ದಾರೆ. ಅವರಲ್ಲಿ ಷಾನರು, ಕರೆನ್ನರು ಕಾಚಿನ್ನರು, ಕಯಕರು ಮತ್ತು ಚಿನ್ನರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಈ ಮಂದಿ ಮತ್ತು ಬರ್ಮಿಯರ ನಡುವೆ ವಿಶೇಷ ರಕ್ತಸಂಬಂಧ ಬೆಳೆದಿರುವುದಾದರೂ ಅವರು ತಮ್ಮದೇ ಆದ ವಿಶಿಷ್ಟ ಸಂಸ್ಕøತಿಯನ್ನು ಕಾಪಾಡಿಕೊಂಡಿದ್ದಾರೆ. ಮೈನ್‍ಮಾರ್‍ದ ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ದೇಶದ ಜನಸಂಖ್ಯೆಯಲ್ಲಿ ಸೇಕಡ ಸುಮಾರು 85 ಜನರು ಬೌದ್ಧರು, ಸರ್ಕಾರ ಬೌದ್ಧ ಧರ್ಮ ಬಹು ಸಂಖ್ಯಾತರ ಧರ್ಮವೆಂದು ಪರಿಗಣಿಸಿದೆ. 1950ರಲ್ಲಿ ಕಾಯಿದೆ ಬದ್ಧವಾಗಿ ಸ್ಥಾಪಿತವಾದ ಬುದ್ಧ ಶಾಸನ ಸಂಸ್ಥೆ, ವಿವಿಧ ಬೌದ್ಧಪಂಗಡಗಳ ಚಟುವಟಕೆಗಳನ್ನು ವ್ಯವಸ್ಥೆಗೊಳಿಸುತ್ತದೆ ಮತ್ತು ದೇಶದ ದೂರದೂರದ ಭಾಗಗಳಿಗೆ ಧರ್ಮಪ್ರಚಾರಕರನ್ನು ಕಳಿಸುತ್ತದೆ. ಹಳ್ಳಿಹಳ್ಳಿಗಳಲ್ಲಿ ಬೌದ್ಧಸನ್ಯಾಸಿಗಳನ್ನು ಆರಾಧನಾ ಮಂದಿರಗಳಾದ ಪಗೋಡಗಳನ್ನು ಕಾಣಬಹುದು. ಗುಡ್ಡ ಗಾಡುವಾಸಿಗಳೇ ಮೊದಲಾದ ಕೆಲವು ಬೌದ್ಧರು ನ್ಯಾಟ್ಸ್ ಎಂಬ ಭೂತಗಳಲ್ಲಿ ನಂಬಿಕೆಯುಳ್ಳವರು. ಮೈನ್‍ಮಾರ್‍ದಲ್ಲಿರುವ ಚೀನಿಗಳು ಮಹಾಯಾನ ಬೌದ್ಧಮತ, ತಾವೊವಾದ ಕನ್‍ಫ್ಯೂಶಿಯನ್‍ವಾದ ಮತ್ತು ಪುರಾತನರ ಪೂಜೆಗಳನ್ನೊಳಗೊಂಡ ಮಿಶ್ರಣ ಸಂಪ್ರದಾಯಗಳನ್ನುಳ್ಳವರು. ಹಿಂದು ಭಾರತಿಯರು, ಮುಸ್ಲಿಂ ಪಾಕಿಸ್ತಾನಿಗಳು ಕ್ರೈಸ್ತ ಐರೋಪ್ಯರೂ ಮೈನ್‍ಮಾರ್‍ದಲ್ಲಿದ್ದಾರೆ ಬರ್ಮಿ ಅಧಿಕೃತ ಭಾಷೆ ಸೇಕಡ ಸುಮಾರು 80 ಜನರು ಬರ್ಮಿಯನ್ನು ಆಡುತ್ತಾರೆ.

	ಬರ್ಮಿಯರು ಸಾಧಾರಣ ಎತ್ತರದ ಚಪ್ಪಟೆ ಮೂಗಿನ ಅಗಲ ಮುಖದ ಜನರು. ಸ್ತ್ರೀಯರು ಜಗಜಗಿಸುವ ಬಣ್ಣದ ಲಂಗಾಯಿ ಉಡುತ್ತಾರೆ. ಲಂಗಾಯಿ ಲುಂಗಿಯಂತೆ ಇರುತ್ತದೆ. ಈ ಲಂಗಾಯಿಯ ಮೇಲೆ ಪುರುಷರು ಪಾಸೊ ಎಂಬ ಲಂಗದಂಥ ಉಡುಪು ಉಟ್ಟು ತಲೆಗೆ ರೇಷ್ಮೆ ವಸ್ತ್ರವನ್ನು ಸುತ್ತುತ್ತಾರೆ. ಸ್ತ್ರೀಯರು ಬಣ್ಣಬಣ್ಣದ ರವಿಕೆ ತೊಡುತ್ತಾರೆ: ಪ್ರತಿಯೊಬ್ಬ ಹುಡುಗನೂ ಕೆಲವು ದಿನಗಳ ಕಾಲ ಸನ್ಯಾಸಿ ಮಂದಿರದಲ್ಲಿರಬೇಕು. ಅವನು ಮುಂದೆ ಸಂನ್ಯಾಸಿಯಾಗದೆ ಇರಬಹುದಾದರೂ ಕೆಲವು ದಿನಗಳ ಮಟ್ಟಿಗೆ ಆದರೂ ಸಂನ್ಯಾಸಿಗಳ ಉಡುಪು ಧರಿಸಿ ಮಂದಿರಗಳ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

	ಮೈನ್‍ಮಾರ್‍ದ ಗಣ್ಯವ್ಯಕ್ತಿಗಳು: 1044ರಲ್ಲಿ ಪಗಾನ್ ರಾಜ್ಯವನ್ನು ಸ್ಥಾಪಿಸಿ ಹೀನಯಾನ ಬೌದ್ಧಮತವನ್ನು ಅಧಿಕೃತ ಧರ್ಮವನ್ನಾಗಿ ಸಾರಿದ ಅನವ್ರತ ಟಾಂಗು ಯೋಧರಾಜ ಬಾಯಿನ್ನಾಂಗ್ (1551-81) ಮತ್ತು 1886ರವರೆಗೆ ಆಳಿದ ರಾಜವಂಶದ ಮೂಲ ಪುರುಷ ಆಲಂಗ್‍ಪಾಯ (1752-60) ಐತಿಹಾಸಿಕ ವ್ಯಕ್ತಿಗಳು. ಗತಕಾಲದ ಪ್ರಮುಖ ಲೇಖಕರಲ್ಲಿ ಗೌತಮ ಬುದ್ಧನ ಜೀವನದ ಮೇಲೆ ಪತಿಪಾಲ ಪ್ಯೊ ಎಂಬ ಕಾವ್ಯವನ್ನು ಬರೆದ ಭಿಕ್ಷು ರಥಸಾರ, ಟಾಂಗು ವಂಶದ ಕವಿಗಳಾದ ನಾವೆಡೆಗ್ಯಿ ಮತ್ತು ನಟ್‍ಶಿನ್ನಾಂಗ್ ಹಾಗೂ ಅವನ ರಾಜನ ದೀರ್ಘ ಹೋರಾಟಗಳ ಬಗೆಗೆ ಬರೆದ ಬಿನಯದಲ ಸೇರುತ್ತಾರೆ. 1920ರ ದಶಕದಲ್ಲಿ ಮೈನ್‍ಮಾರ್‍ಕ್ಕೆ ಪಾಶ್ಚಾತ್ಯ ಶೈಲಿಯ ಕಲೆಯನ್ನು ಪರಿಚಯ ಮಾಡಿಕೊಟ್ಟ ಉಬನ್ಯಾನ್ ಮತ್ತು ಉ ಬ ಜೌ ವರ್ಣಚಿತ್ರಕಾರರು. ಸ್ವತಂತ್ರ ಮೈನ್‍ಮಾರ್‍ದ ಪ್ರಥಮ ಪ್ರಧಾನಮಂತ್ರಿ ಉ ನು ಮೈನ್‍ಮಾರ್‍ದ ಕ್ರಾಂತಿಯ ಪಿತನೆಂದು ಕರೆಯಲಾಗುವ ಅಂಗ ಸಾನ್ (1916-47) ಆಧುನಿಕ ಮೈನ್‍ಮಾರ್‍ದ ಸ್ಥಾಪಕರೆಂದು ಖ್ಯಾತಿವೆತ್ತವರು, ಉ ಬ ಸ್ವೆ, ಉ ಕ್ಯಾವ್‍ನೈಯೆನ್ ಮೈನ್‍ಮಾರ್‍ದ ಒಕ್ಕೂಟದ ಅಧ್ಯಕ್ಷ ಉ ವಿನ್ ಮಾಂಗ್ ಯೋಧ ಮುಂದಾಳು ಮತ್ತು ಕ್ರಾಂತಿಯಿಂದೀಚಿನ ಪ್ರಧಾನ ಮಂತ್ರಿ ಜನರಲ್ ನೆವಿನ್ ಥಾಂಕಿನ್ ಥಾಂಟನ್ ಮತ್ತು ಕಮ್ಯುನಿಸ್ಟ್ ಮುಂದಾಳು ಥಾಕಿನ್ ಸೋ ಎರಡು ಬಾರಿ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಗಿದ್ದ ಉ ಥಾಂಟ್ ಆಧುನಿಕ ಮೈನ್‍ಮಾರ್‍ದ ಗಣ್ಯ ವ್ಯಕ್ತಿಗಳಲ್ಲಿ ಹೆಸರಾದವರು.   (ಜಿ.ಕೆ.ಯು.)

	ಶಿಕ್ಷಣ: ಮೈನ್‍ಮಾರ್‍ದ ಶಿಕ್ಷಣ ಒಟ್ಟಾರೆ ಹಿಂದುಳಿದಿದೆ ಎನ್ನಬಹುದು. ಮಹಾಯುದ್ಧದ ಅನಂತರ ದೇಶದಲ್ಲಿ ಒಂದೇ ಸಮನೆ ಆಂದೋಳನಗಳಾಗುತ್ತಿದ್ದು ಆರ್ಥಿಕ ಸ್ಥಿತಿ ಹದಗೆಟ್ಟಿತು. ಇದರಿಂದಾಗಿ ಶಿಕ್ಷಣವನ್ನು ಉತ್ತಮಪಡಿಸಲು ಅಗತ್ಯ ಕಟ್ಟಡಗಳ ನಿರ್ಮಾಣ, ಪೀಠೋಪಕರಣಗಳ ಪೂರೈಕೆ, ಅಧ್ಯಾಪಕರ ಪ್ರಶಿಕ್ಷಣ, ಕಾರ್ಯ ಕ್ರಮಗಳ ಆಧುನೀಕರಣ ಮುಂತಾದವುಗಳ ಕಡೆ ಗಮನ ಕೊಡುವುದು ಕಷ್ಟವಾಗಿ ಶಿಕ್ಷಣ ವ್ಯವಸ್ಥೆ ಹಿಂದುಳಿಯಲು ಬಲುಮಟ್ಟಿಗೆ ಕಾರಣವಾಗಿದೆ. ಈ ದೇಶದ ಶೇಕಡಾ 85ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಒಟ್ಟು ಜನಸಂಖ್ಯೆಯ ಶೇಕಡಾ 80ರಷ್ಟು ಬೌದ್ಧ ಮತೀಯರಿದ್ದರೂ ವಿವಿಧ ಭಾಷೆಗಳನ್ನಾಡುವ ಹಲವಾರು ಬುಡಕಟ್ಟಿನ ಜನರೂ ಇದ್ದಾರೆ. ಈಚೆಗೆ ಇಲ್ಲಿದ್ದ ಭಾರತೀಯರನ್ನೂ ಪಾಕಿಸ್ತಾನಿಗಳನ್ನೂ ಹೊರದೂಡಿದ್ದರೂ ಭಾಷಾ ಅಲ್ಪ ಸಂಖ್ಯಾತರು ಇದ್ದೇ ಇದ್ದಾರೆ. ಈ ಕಾರಣಗಳಿಂದಾಗಿಯೂ ಇಲ್ಲಿಯ ಶಿಕ್ಷಣವ್ಯವಸ್ಥೆ ತೊಡಕುಗಳನ್ನು ಎದುರಿಸಬೇಕಾಗಿದೆ.

	ಮೈನ್‍ಮಾರ್ ಪೂರ್ಣವಾಗಿ ಬ್ರಿಟಿಷರ ಆಡಳಿತಕ್ಕೆ ಬಂದಮೇಲೆ (1885-1937) ಅದು ಭಾರತದ ಒಂದು ಅಧಿಪತ್ಯವಾಗಿದ್ದು ಆಗ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಇಂಗ್ಲಿಷ್ ಶಿಕ್ಷಣ ಪದ್ಧತಿಯನ್ನೇ ರೂಢಿಸಿಕೊಂಡಿತು. 1937ರಿಂದ ಸ್ವಲ್ಪ ಮಟ್ಟಿನ ಪ್ರಾಂತೀಯ ಸ್ವಾತಂತ್ರ್ಯ ಬಂದಿತಾದರೂ ಶಿಕ್ಷಣ ಅಷ್ಟಾಗಿ ಮಾರ್ಪಡಲಿಲ್ಲ. ಎರಡನೆಯ ಮಹಾ ಯುದ್ಧದಲ್ಲಿ ಜಪಾನೀಯರ ಆಕ್ರಮಣ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಶಿಕ್ಷಣ ವ್ಯವಸ್ಥೆಯೂ ಕುಸಿದು ಬಿತ್ತು. ಜಪಾನಿನ ಪತನಾನಂತರ ಮತ್ತೆ ಬ್ರಿಟಿಷ್ ಸರ್ಕಾರ ಆಡಳಿತಕ್ಕೆ ಬಂದಿತಾದರೂ ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ಅಧಿಕಗೊಂಡು 1948ರಲ್ಲಿ ಮೈನ್‍ಮಾರ್ ಸ್ವತಂತ್ರವಾಯಿತು. ಬ್ರಿಟಿಷ್ ಶಿಕ್ಷಣ ಪದ್ಧತಿ ಆರಂಭವಾಗುವ ಮುಂದೆ ದೇಶದಲ್ಲಿ ಬೌದ್ಧ ಸಂಘಾರಾಮಗಳ ಶಾಲೆಯಲ್ಲಿ ಶಿಕ್ಷಣ ದೇಶಿಯ ಪದ್ಧತಿಯಲ್ಲಿ ನಡೆಯುತ್ತಿತ್ತು. ಇದರ ಫಲವಾಗಿ ಪುರುಷರಲ್ಲಿ ತಕ್ಕಮಟ್ಟಿನ ಅಕ್ಷರಸ್ಥರ ಸಂಖ್ಯೆ ಹೆಚ್ಚಿತ್ತು. ಆದರೆ ಬ್ರಿಟಿಷ್ ಶಿಕ್ಷಣ ಪದ್ಧತಿ ಆರಂಭವಾದ ಮೇಲೆ ಈ ಪ್ರಮಾಣ ಇಳಿಮುಖವಾಯಿತು.

	ಆರಂಭದಲ್ಲಿ ಬರ್ಮೀಭಾಷಾಶಾಲೆಗಳು, ಆಂಗ್ಲೋಬರ್ಮೀ ಶಾಲೆಗಳು, ಇಂಗ್ಲಿಷ್ ಶಾಲೆಗಳು ಎಂಬುದಾಗಿ ಮೂರುವಿಧದ ಪ್ರಾಥಮಿಕ ಶಾಲೆಗಳು ಅಸ್ತಿತ್ವಕ್ಕೆ ಬಂದುವು. ಬರ್ಮೀ ಭಾಷಾಶಾಲೆಗಳು ಕನಿಷ್ಠ ಮಟ್ಟದ ಮೂಲಶಿಕ್ಷಣ ಒದಗಿಸುತ್ತಿದ್ದುವು. ಆಂಗ್ಲೋಬರ್ಮೀ ಶಾಲೆಗಳು ಶುಲ್ಕ ವಿಧಿಸುತ್ತಿದ್ದುದರಿಂದ ಪ್ರಾಥಮಿಕ ಮಟ್ಟದ ವಿದ್ಯಾರ್ಥಿಗಳು ಅಲ್ಲಿಗೆ ಅಷ್ಟಾಗಿ ಹೋಗುತ್ತಿರಲಿಲ್ಲ. ಇಂಗ್ಲಿಷ್ ಶಾಲೆಗಳು ಮುಖ್ಯವಾಗಿ ಯೂರೊಪಿಯನ್ನರ ಮಕ್ಕಳಿಗೆ ಮೀಸಲಾಗಿದ್ದುವು. ಹೀಗಾಗಿ ಶೇಕಡಾ 10ರಷ್ಟು ದೇಶಿಯ ವಿದ್ಯಾರ್ಥಿಗಳು ಮಾತ್ರ ಸೆಕೆಂಡರಿ ಮಟ್ಟದ ವಿದ್ಯಾಭ್ಯಾಸಕ್ಕೆ ಅರ್ಹತೆ ಪಡೆಯುತ್ತಿದ್ದರು.

	ಜಪಾನಿನ ಆಕ್ರಮಣದಲ್ಲಿ ಈ ಮೂರು ರೀತಿಯ ಶಾಲಾ ವಿಭಜನೆಯನ್ನು ತೊಡೆದು ಹಾಕಿ ಏಕರೀತಿಯ ಶಿಕ್ಷಣವ್ಯವಸ್ಥೆ ಆರಂಭಿಸಿ ಮೈನ್‍ಮಾರ್ ಜನ ದೇಶಿಯ ಭಾಷಾಮಾಧ್ಯಮಕ್ಕೂ ಭಾಷಾವ್ಯಾಸಂಗಕ್ಕೂ ಪ್ರಾಮುಖ್ಯವಿತ್ತರು. ಅಲ್ಲದೆ ಜೀವನದ ವಾಸ್ತವ ಸ್ಥಿತಿಗಳಿಗೆ ಹೊಂದುವಂಥ ಶಿಕ್ಷಣ ರೂಪಿಸತೊಡಗಿದರು. ಆದರೆ ಯುದ್ಧದ ಬಾಯಿಗೆ ಸಿಕ್ಕಿದ ದೇಶ ಆ ಮಾರ್ಪಡುಗಳನ್ನು ಅರಗಿಸಿಕೊಳ್ಳಲಾಗಲಿಲ್ಲ.

	ಈಗ ದೇಶದಲ್ಲಿ ನಾಲ್ಕು ವರ್ಷದ ಪ್ರಾಥಮಿಕ, ಮೂರು ವರ್ಷದ ಮಾಧ್ಯಮಿಕ, ಎರಡು ವರ್ಷದ ಪ್ರೌಢಶಿಕ್ಷಣ ಉಂಟು. ಇವುಗಳ ಜೊತೆಗೆ ಒಂದು ವರ್ಷದ ಮೆಟ್ರಿಕ್ಯುಲೇಷನ್ ತರಗತಿಯನ್ನು 1961ರಿಂದ ಸೇರಿಸಲಾಗಿದೆ. ಇದಕ್ಕೂ ಹೆಚ್ಚಿನ ಮಟ್ಟದ ಔದ್ಯೋಗಿಕ, ತಾಂತ್ರಿಕ ಹಾಗೂ ಕೃಷಿ ಶಿಕ್ಷಣ ಸಂಸ್ಥೆಗಳೂ ಇವೆ. ರಂಗೂನ್ ಮತ್ತು ಇತರ ಕೆಲವು ಸ್ಥಳಗಳಲ್ಲಿ ನಾಲ್ಕು ವರ್ಷದ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿದ್ದರೂ ಸಾರ್ವತ್ರಿಕ ಕಡ್ಡಾಯ ಶಿಕ್ಷಣ ಇನ್ನೂ ಆಚರಣೆಗೆ ಬಂದಿಲ್ಲ.

	ಶಿಕ್ಷಣದ ಆಡಳಿತವನ್ನು ಶಿಕ್ಷಣ ಮತ್ತು ಆರೋಗ್ಯ ಸಚಿವಾಲಯ ನೋಡಿಕೊಳ್ಳುತ್ತದೆ. ಈಚೆಗೆ ಅಧಿಕಾರಕ್ಕೆ ಬಂದಿದ್ದ ಸೈನಿಕ ಸರ್ಕಾರ ವಿದೇಶಿ ಪ್ರಭಾವವನ್ನು ತಡೆದು ಸ್ವದೇಶಿ ಚಳವಳಿ ಹರಡಲು ಶಿಕ್ಷಣ ಸಂಸ್ಥೆಗಳನ್ನು ತನ್ನ ಹತೋಟಿಯಲ್ಲಿರಿಸಿ ಕೊಂಡಿತು. ಈಗ ಇಡೀ ಶಿಕ್ಷಣದ ಆಡಳಿತ ಒಬ್ಬ ನಿರ್ದೇಶನಾಧಿಕಾರಿಗೆ ಸೇರಿದೆ. ಅವನಿಗೆ ಸಹಾಯಕರಾಗಿ ಇಬ್ಬರು ಉಪನಿರ್ದೇಶನಾಧಿಕಾರಿಗಳಿದ್ದಾರೆ. ಜಿಲ್ಲೆಯಲ್ಲಿ 50ರಿಂದ 100 ಶಾಲೆಗಳಿಗೆ ಒಬ್ಬೊಬ್ಬ ತನಿಖಾಧಿಕಾರಿಯೂ ಮಿಕ್ಕ ಹಂತಗಳ ಶಿಕ್ಷಣದ ತನಿಖೆಗಾಗಿ ಒಬ್ಬ ಜಿಲ್ಲಾಶಿಕ್ಷಣಾಧಿಕಾರಿಯೂ ಇದ್ದಾರೆ.

	ಪ್ರಾಥಮಿಕ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರೂ ಮೇಲಿನ ತರಗತಿಗಳಲ್ಲಿ ಅವರ ಸಂಖ್ಯೆ ತೀರ ಕಡಿಮೆ. ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡಾ 4ರಷ್ಟು ಮಾತ್ರ ಮೆಟ್ರಿಕ್ಯುಲೇಷನ್‍ನವರೆಗೆ ಶಿಕ್ಷಣ ಮುಂದುವರಿಸುವರು. ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ ಸರ್ಕಾರ ಗೊತ್ತುಮಾಡಿರುವ ಶಿಕ್ಷಣಾರ್ಹತೆ ಶೇಕಡಾ 33ರಷ್ಟು ಮಂದಿಗಿದ್ದು ಮಿಕ್ಕವರು ಅರ್ಹತೆಯಿಲ್ಲದ ಅಧ್ಯಾಪಕರಾಗಿದ್ದಾರೆ.

	ಮಾಧ್ಯಮಿಕ ಶಾಲೆಗಳಲ್ಲಿ ಬರ್ಮೀ ಭಾಷೆ ಶಿಕ್ಷಣ ಮಾಧ್ಯಮವಾಗಿದ್ದು ಪ್ರಥಮ ಭಾಷೆಯಾಗಿದೆ. ಜೊತೆಗೆ ಗಣಿತ, ವಿಜ್ಞಾನ ಮತ್ತು ಸಮಾಜಪಾಠಗಳನ್ನು ಬೋಧಿಸಲಾಗುತ್ತದೆ. ಈ ಮಟ್ಟದ ಶಿಕ್ಷಣ ಉಚಿತವಾಗಿದ್ದರೂ ವಿಧ್ಯಾರ್ಥಿಗಳ ಸಂಖ್ಯೆ ತೀರ ಕಡಿಮೆ. ಶಾಲೆಯ ಕೊನೆಯ ವರ್ಷ ಆಂತರಿಕ ಪರೀಕ್ಷೆ ನಡೆದು ಉತ್ತೀರ್ಣರಾದವರು ಪ್ರೌಢಶಾಲೆಗೆ ಅರ್ಹರಾಗುತ್ತಾರೆ.

	ಮೂರುವರ್ಷದ ಪ್ರೌಢಶಿಕ್ಷಣದ ಕೊನೆಯಲ್ಲಿ ನಡೆಯುವ ಸಾರ್ವತ್ರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ವಿವಿಧ ವೃತ್ತಿಶಿಕ್ಷಣಕ್ಕೆ ಅರ್ಹತೆ ಪಡೆಯುತ್ತಾರೆ. ಕೃಷಿ ಶಿಕ್ಷಣ ಕೇವಲ ಒಂದು ವರ್ಷದ್ದಾದರೆ ಇತರ ವೃತ್ತಿಗಳಿಗೆ ಇರುವ ಶಿಕ್ಷಣ ದೀರ್ಘಕಾಲದ್ದು. ಪ್ರೌಢಶಿಕ್ಷಣದ ಅನಂತರ ಮುಂದಿನ ಶಿಕ್ಷಣಕ್ಕೆ ಅರ್ಹರಾದವರಲ್ಲಿ ಶೇಕಡ 25ರಷ್ಟು ಜನ ಕಾಲೇಜು ಶಿಕ್ಷಣಕ್ಕೆ ಹೋಗುತ್ತಾರೆ.

	ಕಾಲೇಜುಮಟ್ಟದ ಶಿಕ್ಷಣ 1894ರಿಂದ ಆರಂಭವಾಯಿತು. ಆ ವರ್ಷ ರಂಗೂನಿನಲ್ಲಿ ಆರಂಭವಾದ ಬಾಪ್ಟಿಸ್ ಇಂಟರ್ ಆಟ್ರ್ಸ್ ಕಾಲೇಜು ಕಲ್ಕತ್ತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಯಿತು. 1918ರಲ್ಲಿ ಅದನ್ನು ಜೆಡ್ಸನ್ ಕಾಲೇಜೆಂದು ಕರೆಯಲಾಯಿತು. ಮುಂದೆ ಅದೇ ರಂಗೂನ್ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಿತು. ಜಪಾನೀಯರ ಆಕ್ರಮಣ ಕಾಲದಲ್ಲಿ ಮುಚ್ಚಲಾಗಿದ್ದು ಮತ್ತೆ ಆರಂಭವಾದರೂ ಹಲವಾರು ಕಾರಣಗಳಿಂದ ಅದು ಕ್ಷೋಭೆಗೀಡಾಗುತ್ತಲೇ ಮುಂದುವರಿಯಿತು. ಅನಂತರ ಸೈನಿಕ ಆಡಳಿತದಲ್ಲಿ ಅಲ್ಲಿಯ ವಿದ್ಯಾರ್ಥಿಸಂಘದ ಯೂನಿಯನ್ ಕಟ್ಟಡದ ಮೇಲೆ ದಾಳಿಯಾಯಿತು. ವಿಶ್ವವಿದ್ಯಾಲಯದ ಕಾರ್ಯಕಲಾಪಗಳು ಅವನತಿಗಿಳಿದವು. 1963ರಲ್ಲಿ ರಂಗೂನ್ ವಿಶ್ವವಿದ್ಯಾಲಯವೂ ಆ ಸುಮಾರಿಗೆ ಆರಂಭವಾಗಿದ್ದ ಮಾಂಡಲೆ ವಿಶ್ವವಿದ್ಯಾಲಯವೂ ಮುಚ್ಚಿಹೋದುವು. ಸೈನಿಕ ಸರ್ಕಾರ 1964ರಲ್ಲಿ ವಿಶ್ವವಿದ್ಯಾಲಯದ ಶಾಸನವನ್ನು ಹೊರಡಿಸಿ ಅವೆರಡೂ ವಿಶ್ವವಿದ್ಯಾಲಯಗಳನ್ನೂ ಪ್ರತ್ಯೇಕ ಕಾಲೇಜುಗಳಾಗಿ ವಿಭಾಗಿಸಲಾಯಿತು. ಅವುಗಳ ಅಂಗಿಕ ಕಾಲೇಜುಗಳಾಗಿದ್ದ ಕಲೆ ಮತ್ತು ವಿಜ್ಞಾನ ಶಾಸ್ತ್ರಗಳ ಕಾಲೇಜುಗಳನ್ನು ಪ್ರತ್ಯೇಕ ವಿಶ್ವವಿದ್ಯಾಲಯಗಳಾಗಿ ಮಾರ್ಪಡಿಸಲಾಯಿತು. ವೈದ್ಯ, ಪಶುವೈದ್ಯ, ಎಂಜಿನಿಯರಿಂಗ್, ಅರ್ಥಶಾಸ್ತ್ರ ಮುಂತಾದ ಘಟಕಗಳು ಪ್ರತ್ಯೇಕ ಕಾಲೇಜುಗಳಾದುವು.

	ವಿಶ್ವವಿದ್ಯಾಲಯಗಳ ಆಡಳಿತ ಮಂಡಲಿ ವಿದ್ಯಾರ್ಥಿಗಳ ಪ್ರವೇಶವನ್ನು ನಿರ್ಧರಿಸುತ್ತದೆ. ಕೃಷಿಪದವಿ ಶಿಕ್ಷಣ 5 ವರ್ಷದ್ದು; ಎಂಜಿನಿಯರಿಂಗ್ ಶಿಕ್ಷಣ 6 ವರ್ಷದ್ದು ವೈದ್ಯ ಶಿಕ್ಷಣ 9 ವರ್ಷದ್ದು; ಬಿ.ಎ.ಪರೀಕ್ಷೆ ನಾಲ್ಕು ವರ್ಷದ್ದು; ಆನರ್ಸ್ ಪದವಿ 5 ವರ್ಷದ್ದು; ಎಂ.ಎ. ಎಂ.ಎಸ್‍ಸಿ. ಪದವಿಗಳು 2 ವರ್ಷದವು.

	ಮೈನ್‍ಮಾರ್‍ದಲ್ಲಿ ಅಧ್ಯಾಪಕರ ಪ್ರಶಿಕ್ಷಣ ಯೋಜನೆ ತೀರ ಹಳೆಯ ಮಾದರಿಯದು ಪ್ರಾಥಮಿಕ ಶಾಲೆಯ ಅಧ್ಯಾಪಕರು ಮಾಧ್ಯಮಿಕ ಶಾಲೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು 1-2 ವರ್ಷದ ಪ್ರಶಿಕ್ಷಣ ಪಡೆದಿರುತ್ತಾರೆ. ಮಾಧ್ಯಮಿಕ ಶಾಲೆಯ ಅಧ್ಯಾಪಕರು ಪ್ರೌಢಶಾಲೆಯ ಶಿಕ್ಷಣಪಡೆದು ಒಂದು ವರ್ಷದ ಪ್ರಶಿಕ್ಷಣ ಪಡೆದಿರುತ್ತಾರೆ. ಪ್ರೌಢಶಾಲೆಯ ಶಿಕ್ಷಕರು ವಿಶ್ವವಿದ್ಯಾಲಯದಲ್ಲಿ ಅಥವಾ ಅದರ ಅಂಗಭಾಗದಲ್ಲಿ ಶಿಕ್ಷಣಪಡೆದಿರುತ್ತಾರೆ. ಎಲ್ಲ ಮಟ್ಟಗಳಲ್ಲೂ ಪ್ರಶಿಕ್ಷಣಕ್ಕೆ ಬರತಕ್ಕ ಅಧ್ಯಾಪಕರ ಸಂಖ್ಯೆ ಅಗತ್ಯಕ್ಕಿಂತ ತೀರ ಕಡಿಮೆ ಇರುತ್ತದೆ.

	ಮೈನ್‍ಮಾರ್‍ದಲ್ಲಿ ತಾಂತ್ರಿಕ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳಿದ್ದರೂ ಕೆಲವು ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಐಚ್ಛಿಕ ವಿಷಯವಾಗಿ ಕೆಲವು ಉದ್ಯೋಗಗಳನ್ನು ಕಲಿಸಲಾಗುತ್ತದೆ. ಗ್ರಾಮಾಂತರ ಪ್ರದೇಶದ ಮಾಧ್ಯಮಿಕ ಶಾಲೆಗಳಲ್ಲಿ ಕೃಷಿಯನ್ನು ನಗರದ ಶಾಲೆಗಳಲ್ಲಿ ಉದ್ಯೋಗ ವಾಣಿಜ್ಯ ಕೈಗಾರಿಕೆ ಮುಂತಾದವನ್ನು ಬೋಧಿಸಲಾಗುವುದು. ಆದರೆ ಈ ಸೌಲಭ್ಯಗಳು ಸಾರ್ವತ್ರಿಕವಾಗಿಲ್ಲ. ಒಟ್ಟು ವಿದ್ಯಾರ್ಥಿ ಸಂಖ್ಯೆಯಲ್ಲಿ ಕೇವಲ ಶೇಕಡಾ 1ರಷ್ಷು ಮಾತ್ರ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣ ಪಡೆಯುತ್ತಿದೆ.

	ಒಟ್ಟಿನಲ್ಲಿ ಮೈನ್‍ಮಾರ್‍ದ ಶಿಕ್ಷಣ ಎಲ್ಲ ಹಂತಗಳಲ್ಲೂ ಉತ್ತಮಗೊಳ್ಳಬೇಕಾಗಿದೆ. ಎಲ್ಲರಿಗೂ ತಕ್ಕಷ್ಟು ವಿದ್ಯಾ ಸೌಲಭ್ಯವಿಲ್ಲದಿರುವುದು ಇಲ್ಲಿಯ ಪ್ರಮುಖ ಸಮಸ್ಯೆ. ಆಧುನಿಕ ಜ್ಞಾನ ಮತ್ತು ತಂತ್ರವಿದ್ಯೆ ಪಾಶ್ಚಾತ್ಯಭಾಷೆಗಳಲ್ಲಿರುವುದರಿಂದ ಅವನು ಕಲಿಯುವ ತೊಡಕು ಎರಡನೆಯ ಸಮಸ್ಯೆ. ಇದನ್ನು ಪರಿಹರಿಸಲು ದೇಶೀಯ್ನ ಭಾಷಾ ಮಾಧ್ಯಮವನ್ನು ಬೆಳಸದಿರುವುದು ಇನ್ನೊಂದು ಸಮಸ್ಯೆ.	(ಎನ್.ಎಸ್.ಇ.)

	ಪ್ರಾಕ್ತನ: ಬರ್ಮಾ ದೇಶ ಮೊದಲಿಗೆ ಭಾರತದ ಒಂದು ಭಾಗವಾಗಿದ್ದು ಭಾರತದ ಸಂಸ್ಕøತಿ ಮತ್ತು ನಾಗರಿಕತೆಗಳಿಂದ ಸಾಕಷ್ಟು ಪ್ರಭಾವಿತವಾಗಿದೆ. ಮೈನ್‍ಮಾರ್‍ದ ಕಲೆ ಹೆಚ್ಚಾಗಿ ಧಾರ್ಮಿಕವಾದದ್ದು. ಕ್ರಿ.ಶ. 5ರಿಂದ 12ನೆಯ ಶತಮಾನದ ಅವಧಿಯಲ್ಲಿ ಇದು ವಿಕಸಿಸಿ ಬೆಳಕಿಗೆ ಬಂತು. ಉತ್ತರ ಮೈನ್‍ಮಾರ್‍ದಲ್ಲಿ ಸಮತಲ ನದಿ ದಡದಲ್ಲಿ ಅನ್ಯಾಥಿಯನ್ ಕಾಲದ ಕಲ್ಲಿನ ಆಯುಧಗಳು ದೊರಕಿವೆ. ದಕ್ಷಿಣ ಮೈನ್‍ಮಾರ್‍ದಲ್ಲಿ ಆಯುಧ ತಯಾರಿಕೆಗೆ ಹಳೆಯದಾದ ಒಂದು ಬಗೆ ಮರ ಉಪಯೋಗಿಸಿದ್ದಾರೆ. ಆದ್ದರಿಂದ ಈ ಆಯುಧಗಳು ಬಹು ಪುರಾತನವಾದುವುಗಳಂತೆ ಕಾಣುತ್ತವೆ. ಇಲ್ಲಿ ತೂಫ ಎಂಬ ಸುಣ್ಣದಕಲ್ಲನ್ನು ಕೂಡ ಆಯುಧ ತಯಾರಿಕೆಗೆ ಉಪಯೋಗಿಸಿದ್ದಾರೆ. ಈ ಸಂಸ್ಕøತಿಗೆ ಅನ್ಯಾಥಿಯನ್ ಸಂಸ್ಕøತಿಯೆಂದು ಹೆಸರು. ಭಾರತದ ಆದಿಸೋಹಾನ್ ಆಯುಧಗಳ ರಚನೆಯಲ್ಲಿ ಕಂಡುಬರುವ ಸಂಸ್ಕøತಿಯ ಜೊತೆ ಇದನ್ನು ಹೋಲಿಸುವುದುಂಟು. ಬೆಣಚುಕಲ್ಲು ಮತ್ತು ಬೇರೆ ಬಗೆಯ ಕಲ್ಲುಗಳು ದೊರಕುವ ಸ್ಥಳಗಳಲ್ಲಿ ಆಯುಧಗಳನ್ನು ಸುಂದರವಾಗಿ ಮಾಡಿರುವುದು ಕಂಡುಬಂದಿದೆ. ಅಲ್ಲಿಯ ಆದಿಮಾನವರು ಆಯುಧ ತಯಾರಿಕೆಯಲ್ಲಿ ಒಳ್ಳೆಯ ಕೆಲಸಗಾರರಾಗಿದ್ದಾರೆಂದು ಹೇಳಬಹುದು. ಚಿಪ್ಪುಕಲ್ಲಿನ ಆಯುಧಗಳು ಅನ್ಯಾಥಿಯನಿನಲ್ಲಿ ಬಲು ವಿರಳ.

	ತುಂಡರಿಸಲು ಉಪಯೋಗಿಸುವ ಭಾರವಾದ ಮಚ್ಚುಕತ್ತಿಗಳನ್ನೊಳಗೊಂಡ ಸಂಸ್ಕøತಿಯನ್ನು ಜಾವಾದಲ್ಲಿ ಪಟ್ಟಿತಾನಿಯನ್, ಮೈನ್‍ಮಾರ್‍ದಲ್ಲಿ ಅನ್ಯಾಥಿಯನ್, ಪಂಜಾಬಿನಲ್ಲಿ ಆದಿ ಸೋಹಾನ್, ಉತ್ತರ ಚೀನದಲ್ಲಿ ಚೌಕುಟಿಯಾನ್ ಮತ್ತು ಮಲಯಾ ಪರ್ಯಾಯ ದ್ವೀಪದಲ್ಲಿ ಬಹುಶಃ ತಂಪಾನಿಯನ್ ಸಂಸ್ಕøತಿಯನ್ನು ಪ್ರತಿನಿಧಿಸುತ್ತವೆ ಎಂಬುದು ಮುವಿಸ್‍ರವರ ಅಭಿಪ್ರಾಯ. ದಕ್ಷಿಣ ಚೀನಾ, ಇಂಡೋಚೀನಾ, ಮೈನ್‍ಮಾರ್ ಮೇಲ್ಭಾಗದ ಮತ್ತು ಜಾವಾಗಳಲ್ಲಿ ಸಾಮಾನ್ಯವಾಗಿ ಮಧ್ಯ ಪ್ಲೀಸ್ಟೋಸೀನ್ ಯುಗಕ್ಕೆ ಸಂಬಂಧಿಸಿದ ಸ್ಪಿಗೊಡಾನ್ ಐಲುರೋಪೊಡ ಪ್ರಾಣಿಗಳಾದ ವಿಲ್ಲಿಫ್ರಾಂಚಿಯನ್ ಆನೆ ಕಂಡುಬಂದಿದೆ. ಮ್ಯಾಥ್ಯು ಮತ್ತು ಗ್ರಾಂಜರ್ (1923) ಎಂಬವರು ಮೈನ್‍ಮಾರ್‍ದ ಮೆಕಾಕ್ ಗುಹೆಗಳಲ್ಲಿ ಮೊತ್ತಮೊದಲುಬಾರಿಗೆ ಸ್ಪಿಗೊಡಾನ್ ಐಲುರೊಪೋಡ ಪ್ರಾಣಿಗಳ ಪಳೆಯುಳಿಕೆ ಗಮನಿಸಿದ್ದಾರೆ. ಮೈನ್‍ಮಾರ್‍ದ ಕೊನೆಯ ಅನ್ಯಾಥಿಯಾನ್ ಸಂಸ್ಕøತಿ ಪ್ಲೀಸ್ಟೋಸೀನ್ ಸಂಸ್ಕøತಿಯನ್ನು ಹೋಲುತ್ತದೆ. ಈ ಅಂತ್ಯ ಪ್ಲೀಸ್ಟೊಸೀನ್ ಕಾಲಕ್ಕೆ ಸಂಬಂಧಿಸಿದ ನಿಅಹ್ (ಕಾಲಿಮಂಟಸ್) ಗುಹೆಯ ಕಲ್ಲಿನ ಆಯುಧಗಳು ಭಾರತ ಮೈನ್‍ಮಾರ್ ಮಧ್ಯಗ್ನೇಯ ಭಾಗದಲ್ಲಿ ಪ್ರಚುರದಲ್ಲಿದ್ದುವೆಂದು ಹೇಳಬಹುದು. ಇತ್ತೀಚಿನ ತನಕ ಮೈನ್‍ಮಾರ್‍ದಲ್ಲಿ ಹೊ ಅಬಿನ್ ಹಿ ಅನ್ ಕಾಲಕ್ಕೆ ಸಂಬಂಧಿಸಿದ ಕಲ್ಲಿನ ಚಿಕ್ಕಚಿಕ್ಕ ಆಯುಧಗಳು ಬೆಳಕಿಗೆ ಬಂದಿರಲಿಲ್ಲ. ಕೆಲವೇ ದಿನಗಳ ಹಿಂದೆ ಷಾನ್ ರಾಜ್ಯದಲ್ಲಿಯ ಒಂದು ಗುಹೆಯಲ್ಲಿ ನಡೆಸಿದ ಉತ್ಖನನಗಳಲ್ಲಿ ಹೇರಳವಾಗಿ ದೊರಕಿದ ಚಿಪ್ಪುಕಲ್ಲುಗಳ ಆಯುಧಗಳು ಹೊ ಅಬಿನ್ ಹಿ ಅನ್ ಮತ್ತು ಬಾಕ್ ಸೊನಿಯನ್ ಸಂಸ್ಕøತಿಗಳಿಗೆ ಸಂಬಂಧಿಸಿದ ಮಧ್ಯ ಪೂರ್ವ ಇಂಡೋಚೀನ ಸಂಸ್ಕøತಿಗಳನ್ನು ಹೋಲುತ್ತವೆ.

	ಮೈನ್‍ಮಾರ್‍ದಲ್ಲಿ ನವ ಶಿಲಾಯುಗದ ಅವಶೇಷಗಳಾದ ಮಡಕೆಗಳೇ ಅಲ್ಲದೆ ನುಣುಪಾಗಿ ಉಜ್ಜಿ ಚೂಪುಗೊಳಿಸಿರುವ ಕಲ್ಲಿನ ಆಯುಧಗಳು ಪುರಾತನ ಶಿಲಾಯುಗದ ಕೊನೆಯ ಮತ್ತು ಭಾರತದ ಸಣ್ಣ ಸಣ್ಣ ಆಯುಧಗಳ ಕಾಲಕ್ಕೆ ಸಂಬಂಧಿಸಿದ ಆಯುಧಗಳು, ಮತ್ತು ಉಜ್ಜುವ ಮತ್ತು ಶಂಖಾಕಾರದ ಆಯುಧಗಳನ್ನು ಹಳೆಯ ಮರದಿಂದ ತಯಾರಿಸಿದ ಬಳಿಕ ಉಳಿದ ಕಲ್ಲಿನ ಒಳಭಾಗಗಳು ದೊರೆತಿವೆ. ಪ್ರಾಗಿತಿಹಾಸಕ್ಕೆ ಸಂಬಂಧಿಸಿದ ಕೈಕೊಡಲಿಗಳಂಥ ಬಗ್ಗಿರುವ ಅಥವಾ ತಿರುಗಿ ಸೊಟ್ಟಗಿರುವ ಆಯುಧಗಳು ದೊರೆತಿವೆ. ಇವು ಸಾಮಾನ್ಯವಾಗಿ ಸ್ಥೂಲವಾಗಿವೆ. ಇವನ್ನು ಕೊನ್‍ಬಿಇನ್ ನದಿಯ ದಡದ ನುರುಜುಕಲ್ಲುಗಳಲ್ಲಿ ಸಿಕ್ಕಿರುವ ಆಯುಧಗಳಿಗೆ ಹೋಲಿಸಬಹುದು. ಈ ಸ್ಥಳಗಳಲ್ಲಿ ಬೆಳಕಿಗೆ ಬಂದಿರುವ ಆಯುಧಗಳು ಸಾಮಾನ್ಯವಾಗಿ ಚೆಲ್ಲಾನ್ ಸಂಸ್ಕøತಿಗಿಂತ ಮುಂಚಿನವು. ಇವನ್ನು ಭಾರತ, ಆಫ್ರಿಕಾ ಮತ್ತು ಪಶ್ಚಿಮ ಯೂರೋಪಿನ ಆಯುಧಗಳೊಡನೆ ಹೋಲಿಸಬಹುದು.

	ಮೈನ್‍ಮಾರ್‍ದಲ್ಲಿ ದೊರಕಿರುವ ಹೊಸ ಶಿಲಾಯುಗದ ನೂರಾರು ಆಯುಧಗಳ ಪೈಕಿ ಹದಿನಾಲ್ಕು ಆಯುಧಗಳು ಮಾತ್ರ ತಾಮ್ರ ಮತ್ತು ಕಂಚಿನವು. ಇವುಗಳ ಪೈಕಿ ಏಳು ಬ್ರಿಟಿಷ್ ಮ್ಯೂಸಿóಯಮಿನಲ್ಲಿ ಎರಡು ಆಕ್ಸ್‍ಫರ್ಡಿನ ಪಿಟ್ ರಿವರ್ಸ್ ಮ್ಯೂಸಿಯಮಿನಲ್ಲಿ, ಒಂದು ಸ್ಟಾಕ್ ಹೋಮಿನ ಮ್ಯೂಸಿóಯಮ್ ಆಫ್ ಫಾರ್ ಈಸ್ಟರ್ನ್ ಅಂಟಿಕ್ವಿಟೀಸಿನಲ್ಲಿ, ಎರಡು ಕಲಾವ್‍ನ ಎಂ. ಎ. ಕ್ಯಾಮರಾನ್ ಸಂಗ್ರಹದಲ್ಲಿ ಮತ್ತು ಎರಡು ಥಯೆಟ್ ಮ್ಯಾ ಮತ್ತು ತಳಚಿಂದ್‍ವಿನ್ ಹಳ್ಳಿಗಳಲ್ಲಿ ಇವೆ.

	ಮೈನ್‍ಮಾರ್‍ದಲ್ಲಿ ಮಾಡಿದ ಇತ್ತೀಚಿನ ಶೋಧನೆಗಳಲ್ಲಿ ಒಂದು ಪಳೆಯುಳಿಕೆ ದೊರೆತಿದೆ. ಮಾನವನ ಉಗಮವನ್ನು ತೋರಿಸುವ ಅತ್ಯಂತ ಹಳೆಯ ಪಳೆಯುಳಿಕೆ ಅದೆಂದು ಹೇಳಲಾಗಿದೆ. ಸುಮಾರು ಮೂರು ಕೋಟಿ ವರ್ಷಗಳಷ್ಟು ಪುರಾತನವಾದುದೆಂದು ಪಂಡಿತರ ಅಭಿಪ್ರಾಯ. ಆದರೆ ಅದರ ಕಾಲ ಮತ್ತು ನಿಜಾಂಶ ಇನ್ನೂ ನಿಖರವಾಗಿ ನಿರ್ಧರಿತವಾಗಿಲ್ಲ. ಹಾಗೆ ನಿರ್ಣಯಿಸುವ ತನಕ ಭಾರತದಲ್ಲಿ 1932ರಲ್ಲಿ ಕೇಂಬ್ರಿಜ್ ಮತ್ತು ಯೇಲ್ ವಿಶ್ವವಿದ್ಯಾಲಯದವರು ನಡೆಸಿದ ಶೋಧನೆಗಳಲ್ಲಿ ಶಿವಾಲಿಕ್ ಪರ್ವತಗಳಲ್ಲಿ ಸಿಕ್ಕಿದೆ ಎನ್ನಲಾದ ಪಳೆಯುಳಿಕೆಯೇ ಅತ್ಯಂತ ಪುರಾತನವಾದದ್ದೆಂದು ಪುರಾತತ್ವಜ್ಞರು ನಿರ್ಧರಿಸಿರುವರು.

	ಮೈನ್‍ಮಾರ್‍ದ ಕಬ್ಬಿಣಯುಗ ಸಂಸ್ಕøತಿಗೆ ಭಾರತದ ಕಬ್ಬಿಣಯುಗ ಸಂಸ್ಕøತಿಯೊಡನೆ ಸಂಬಂಧ ಉಂಟು. ಆದರೆ ಯಾವ ಕಾಲದಲ್ಲಿ ಈ ಸಂಸ್ಕøತಿಯ ಅಲೆ ಭಾರತದಿಂದ ಮೈನ್‍ಮಾರ್‍ವನ್ನು ಮೊತ್ತಮೊದಲು ತಲಪಿತು ಎಂದು ಹೇಳುವುದು ಕಷ್ಟ. ಮೈನ್‍ಮಾರ್‍ದ ನವ ಶಿಲಾಯುಗದ ಆಯುಧಗಳಂತೆಯೇ ಈ ಆಯುಧಗಳೂ ಇಂಡೋಚೀನಾ ಮತ್ತು ಚೀನಾದಿಂದ ಪ್ರಭಾವಿತವಾಗಿರುವುದು ಕಾಣುತ್ತದೆ. ಆದ್ದರಿಂದ ತಾಮ್ರ ಮತ್ತು ಕಂಚು ಕಾಸಿ ಎರಕ ಹುಯ್ಯುವ ಕಲೆಯೂ ಚೀನಾದಿಂದಲೇ ಮೈನ್‍ಮಾರ್‍ವನ್ನು ತಲಪಿರುವುದಾಗಿ ಹೇಳುಬಹುದು. ಉತ್ತರ ಮೈನ್‍ಮಾರ್‍ದ ಷಾನ್ ರಾಜ್ಯಗಳಲ್ಲಿ ನವ ಶಿಲಾಯುಗದ ಕೆಲವು ಆಯುಧಗಳೂ ಲೋಹದ ಆಯುಧಗಳೂ ಒಂದರಮೇಲೆ ಒಂದು ಬರುವುದು ಕುತೂಹಲಕರ ಸಂಗತಿ.

	ಕಲೆ: ಮೈನ್‍ಮಾರ್‍ದ ನದೀಮುಖಜಭೂಮಿಗಳಲ್ಲಿ ಮತ್ತು ಇರವಾಡೀ ಕಣಿವೆಗಳಲ್ಲಿ ಹರಡಿರುವ ಪುರಾತನ ರಾಜಧಾನಿಗಳ ಅರಮನೆಗಳಲ್ಲಿ ಈ ದೇಶದ ಕಲೆ ಹೆಚ್ಚಾಗಿ ಕಾಣಸಿಗುತ್ತದೆ. ಉದಾಹರಣೆಗೆ ಮಾಸ್ ನಗರಗಳಾದ ತಟಾನ್, ಪೆಗು ಮತ್ತು ರಂಗೂನುಗಳನ್ನು ಒಳಗೊಂಡ ಇರವಾಡೀ ಮುಖಜಭೂಮಿ, ಪ್ಯೂಜನರಿಂದ ಕೂಡಿದ ಪ್ರೋಮ್ ನಗರವನ್ನು ಒಳಗೊಂಡ ಇರವಾಡೀ ತಗ್ಗುಕಣಿವೆ ಮತ್ತು ಚೌಕ್ಸೆಪಗಾನ್, ಸಾಗಿಂಗ್ ಅವ, ಅಮರಪುರ, ಮಾಂಡಲೆ ಮತ್ತು ಉತ್ತರಕ್ಕೆ ತಗಾಂಗ್ ನಗರಗಳನ್ನೊಳಗೊಂಡ ಮಧ್ಯಕಣಿವೆ ಇತ್ಯಾದಿ. ಇಲ್ಲಿಯ ಕಲೆ ಭಾರತದಿಂದ ಹೆಚ್ಚು ಪ್ರಭಾವಿತವಾದದ್ದೆನ್ನಬಹುದು. ಅಶೋಕನ ಕಾಲದಲ್ಲಿಯೇ ಬೌದ್ಧಗುರುಗಳು ಧರ್ಮ ಪ್ರಚಾರಕ್ಕೆ ಇಲ್ಲಿಗೆ ಹೋಗಿದ್ದರೆಂದು ತಿಳಿದು ಬರುತ್ತದೆ. ಆದರೆ ಹಿಂದೂ ಧರ್ಮ ಮತ್ತು ಕಲೆ ಬಹುಶಃ ಕ್ರಿ. ಶ. ಐದನೆಯ ಶತಮಾನದ ಅಂತ್ಯದಲ್ಲಿ ಅಥವಾ ಆರನೆಯ ಶತಮಾನದ ಆದಿಭಾಗದಲ್ಲಿ ಮೈನ್‍ಮಾರ್‍ವನ್ನು ಪ್ರವೇಶಿಸಿರಬಹುದೆಂದು ಹೇಳಬಹುದು. ಪಾಳಿ ಭಾಷೆಯಲ್ಲಿರುವ ಬೌದ್ಧ ಗ್ರಂಥಗಳಲ್ಲಿ ಇದಕ್ಕೆ ಆಧಾರ ದೊರೆಯುತ್ತದೆ. ಇಲ್ಲಿಯ ಕಲೆ ಭಾರತದ ಮತ್ತು ಇತರ ನೆರೆ ರಾಷ್ಟ್ರಗಳಿಂದ ಸ್ಛೂರ್ತಿ ಪಡೆದು ಸ್ವಂತ ವೈಶಿಷ್ಟ್ಯ ಉಳಿಸಿಕೊಂಡಿದೆ. ಈ ದೇಶದ ಶೈಲಿ ಹೆಚ್ಚಾಗಿ ಭಾರತದ ಶೈಲಿಯನ್ನು ಅವಲಂಬಿಸಿದ್ದು ಕಾಂಬೋಡಿಯಾ ಶೈಲಿಯಂತಿಲ್ಲವೆಂದು ವಿಶ್ಲೇಷಿಸಬಹುದು. ಮೈನ್‍ಮಾರ್‍ದ ಮುಖ್ಯ ಸ್ಮಾರಕಗಳ ವಿಷಯವಾಗಿ ಮಾತ್ರ ಕೆಲವು ಬರವಣಿಗೆಗಳು ಬೆಳಕಿಗೆ ಬಂದಿವೆ. ಇಲ್ಲಿಯ ಮೂರ್ತಿ ಮತ್ತು ವಾಸ್ತು ಶಿಲ್ಪಗಳ ಭೌಗೋಳಿಕ ವಿಸ್ತಾರವನ್ನಾಗಲೀ ಕಾಲಾನುಕ್ರಮದ ಬೆಳೆವಣಿಗೆಯನ್ನಾಗಲೀ ಯಾರೂ ಅಭ್ಯಸಿಸಿಲ್ಲ. ಬಹುಶಃ ಇದರ ಕಾರಣ ಮೈನ್‍ಮಾರ್‍ದಲ್ಲಿ ಹೆಚ್ಚಾಗಿ ಪ್ರಚಾರದಲ್ಲಿರುವ ಸ್ತೂಪಗಳ ಬೆಳೆವಣಿಗೆಗೆ ಭಾರತದಲ್ಲಿಯ ಸ್ಮಾರಕಗಳ ಬೆಳೆವಣಿಗೆಯಷ್ಟು ವಿಪುಲವಾಗಿಲ್ಲದಿರುವುದು. ಅಲ್ಲದೆ ಎರಡೂವರೆ ಶತಮಾನಗಳಲ್ಲಿ ಇಟ್ಟಿಗೆಯಿಂದ ನಿಮಿತವಾದ ಪಗಾನ್ ನಗರದ ಸ್ಮಾರಕಗಳನ್ನು ಬಿಟ್ಟರೆ ಮಿಕ್ಕೆಲ್ಲ ನಿರ್ಮಾಣಗಳು ನಶಿಸಿ ಹೋಗುವ ಮರಮುಟ್ಟುಗಳಿಂದ ನಿರ್ಮಿಸಲ್ಪಟ್ಟಿದ್ದು ತೀರ ಜೀರ್ಣವಾಗಿವೆ. ಅಳಿದುಳಿದಿರುವ ಸ್ಮಾರಕಗಳಿಂದಲೇ ಅವುಗಳ ಸಾಮಾನ್ಯ ಶೈಲಿ ರೀತಿ, ಆಯುಃ ಪ್ರಮಾಣ ಮೊದಲಾದವನ್ನು ನಿಷ್ಕರ್ಷಿಸಬೇಕಾಗಿದೆ.

	ಮೈನ್‍ಮಾರ್‍ದಲ್ಲಿರುವ ಬುದ್ಧನ ವಿಗ್ರಹಗಳು ಕ್ರಿ. ಶ. 6 ಮತ್ತು 8ನೆಯ ಶತಮಾನಗಳಿಗೆ ಒಳಪಟ್ಟಿದ್ದು ಗುಪ್ತರ ಅಂತ್ಯಕಾಲದ ಶೈಲಿಯಲ್ಲಿ ಕೆತ್ತಲ್ಪಟ್ಟಿವೆ. ಪಗಾನಿಗೆ ಸಂಬಂಧಿಸಿದ ವಿಗ್ರಹಗಳಲ್ಲಿ ಬಂಗಾಳದೇಶದ ಪಾಲ ಮತ್ತು ಸೇನ ಕಲಾ ಶೈಲಿಯ ಪ್ರಭಾವವಿರುವುದು ಗಮನಕ್ಕೆ ಬರುತ್ತದೆ. ಈ ಕಾಲದ ಮೈನ್‍ಮಾರ್ ಕಲೆಯ ಶಿಷ್ಟಾ ಚಾರದಂತೆ ಬುದ್ಧನ ತಲೆ ಸ್ವಲ್ಪ ಕೆಳಕ್ಕೆ ಬಗ್ಗಿರುವಂತೆ ಕೆತ್ತಿರುವುದು ಗಮನಿಸಬಹುದು. ಮೈನ್‍ಮಾರ್ ದೇಶದ ಮೂರ್ತಿಶಿಲ್ಪದ ಅವನತಿ ಕ್ರಿ.ಶ. 13ನೆಯ ಶತಮಾನದ ತರುವಾಯ ಪ್ರಾರಂಭವಾಗಿದೆ. ಅಲ್ಲಿ ವಿರಳವಾಗಿ ದೊರಕುವ ಹಿಂದೂ ದೇವದೇವತೆಗಳ ವಿಗ್ರಹಗಳು ಪ್ರೋಮ್ ಮತ್ತು ಪಗಾನ್ ನಗರಗಳ ದೇವಾಲಯಗಳಲ್ಲಿವೆ. ಅವು ಗುಪ್ತರ ಮತ್ತು ಪಲ್ಲವರ ಅಂತ್ಯಕಾಲದ್ದಾಗಿದ್ದು ಪಾಲ, ಸೇನ ಶೈಲಿಯಲ್ಲಿರುವುದರಿಂದ ಅವನ್ನು ಭಾರತದ ಸ್ಥಪತಿಗಳೇ ನಿರ್ಮಿಸಿರಬಹುದೆಂದು ಎಣಿಕೆ. ಮೈನ್‍ಮಾರ್‍ದೇಶದ ಚಿತ್ರಕಲೆ ಹೆಚ್ಚಾಗಿಲ್ಲ. ಪಗಾನ್‍ನಗರದ ದೇವಮಂದಿರದ ಒಳಗೋಡೆಗಳ ಮೇಲಿರುವ ಭಿತ್ತಿ ಚಿತ್ರಗಳು ಸಮಕಾಲೀನ ಬಂಗಾಳ ಮತ್ತು ಅಸ್ಸಾಮ್ ಚಿತ್ರಕಲೆಯನ್ನು ಹೋಲುತ್ತವೆ.

	ವಾಸ್ತುಶಿಲ್ಪ: ಮೈನ್‍ಮಾರ್‍ದ ಪುರಾತನ ಕಾಲದ ಸುಂದರ ಸ್ಮಾರಕಗಳಲ್ಲಿ ಧರ್ಮ ಸಂಬಂಧವಾದ ದೇವಾಲಯಗಳು, ವಿಹಾರಗಳು ಮತ್ತು ಸ್ತೂಪಗಳು ಹೆಚ್ಚಾಗಿವೆ ಈ ವೈಶಿಷ್ಟಕ್ಕೆ ಎರಡು ರಣಗಳುಂಟು. ತಮ್ಮ ಸಂಪತ್ತನ್ನು ಬೌದ್ಧಧರ್ಮಕ್ಕೆ ಅನುಗುಣವಾಗಿ, ಧರ್ಮಕ್ಕೆ ಸಂಬಂಧಿಸಿದ ಕಟ್ಟಡ ಕಟ್ಟಲು ವಿನಿಯೋಗಿಸಿದರೆ ಪುಣ್ಯ ಪ್ರದವೆಂಬ ನಂಬಿಕೆ ಬರ್ಮೀಯರಲ್ಲಿದ್ದುದು ಒಂದು ಕಾರಣ; ಸಾರ್ವಜನಿಕ ಸಂಬಂಧವಾದ ತಾತ್ಕಾಲಿಕ ಕಟ್ಟಡಗಳನ್ನು ಮರ ಮತ್ತು ಬಿದಿರುಗಳಿಂದ ನಿರ್ಮಿಸುತ್ತಿದ್ದುದು ಮತ್ತೊಂದು ಕಾರಣ. ಬರ್ಮೀಯರು ಸಾರ್ವಜನಿಕ ಉಪಯೋಗಕ್ಕೆ ಒದಗುವಂಥ ಕಟ್ಟಡಗಳನ್ನು ಕಲ್ಲಿನಲ್ಲಿ ನಿರ್ಮಿಸಲೇ ಇಲ್ಲ. ಮರದ ಸಾಮಾನುಗಳು ದೇಶದಲ್ಲಿ ಹೇರಳವಾಗಿ ದೊರಕುತ್ತಿದ್ದುದು ಈ ಸಂಪ್ರದಾಯಕ್ಕೆ ಇನ್ನೂ ಒಂದು ಕಾರಣ ಅಲ್ಲದೆ ಬರ್ಮೀಯರು ಸಾಮಾನ್ಯವಾಗಿ ನಮ್ರ ಮತ್ತು ಅಹಂಕಾರರಹಿತರಾಗಿದ್ದು ತಮ್ಮ ಪೂರ್ವಜರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಡೆಯುತ್ತ ಸಾರ್ವಜನಿಕ ಕಟ್ಟಡಗಳಲ್ಲಿ ಮರ ಉಪಯೋಗಿಸುತ್ತ ಧಾರ್ಮಿಕ ಕಟ್ಟಡಗಳಿಗೆ ಮಾತ್ರ ಕಲ್ಲು ಉಪಯೋಗಿಸುತ್ತಿದ್ದರು. ಅರಮನೆಗಳಲ್ಲಿ ಸಹ 19ನೆಯ ಶತಮಾನದ ತನಕ ಮರವನ್ನೇ ಉಪಯೋಗಿಸುತ್ತಿದುದು ವಾಡಿಕೆ. ಇತ್ತೀಚಿಗೆ ಮಾಂಡಲೇ ಅರಮನೆಗೆ ಕೆಲವು ಕಲ್ಲಿನ ಕೊಠಡಿಗಳನ್ನು ಸೇರಿಸಲಾಗಿದೆ. ಧಾರ್ಮಿಕ ಮತ್ತು ಸಾಂಪ್ರದಾಯಿಕ ಈ ಎರಡೂ ರೀತಿಯ ಕಟ್ಟಡಗಳಲ್ಲಿ ಬಂಗಾರದ ನೀರು ಹೊಯ್ಯುವುದು ಅಥವಾ ಬಂಗಾರದ ಮೆರುಗು ಕೊಡುವುದು ಪ್ರಚುರದಲ್ಲಿತ್ತು. ಆದ್ದರಿಂದ ದೇಶದ ಲೆಕ್ಕವಿಲ್ಲದಷ್ಟು ಕಟ್ಟಡಗಳಲ್ಲಿ ಮತ್ತು ಪಗೋಡಗಳಲ್ಲಿ ಬಂಗಾರದ ಮಿರುಗು ಕಾಣಬಹುದು. ಎಂದೇ ಮೈನ್‍ಮಾರ್ ಪಗೋಡಗಳ ರಾಜ್ಯ ಎನಿಸಿಕೊಂಡಿತು.

	ಇಲ್ಲಿಯ ವಾಸ್ತುಶಿಲ್ಪದ ಅತಿ ಮುಖ್ಯ ಲಕ್ಷಣ ವೃತ್ತ, ಖಂಡ ಅಥವಾ ಕಮಾನುಗಳ ನಿರ್ಮಾಣ. ಇಂಡೋಚೀನಾದೇಶಗಳಲ್ಲಿ ಬಹುವಾಗಿ ಚಾಚು ಕಂಬಗಳನ್ನು ಅಳವಡಿಸಿಕೊಂಡಿದ್ದರೆ ಬರ್ಮಾದಲ್ಲಿ ಅಡ್ಡ ಉಬ್ಬು ಕಟ್ಟಡವನ್ನು ಅಳವಡಿಸಿಕೊಳ್ಳಲಾಗಿದೆ. ಯಾವರೀತಿಯ ಆಶ್ರಯವೂ ಇಲ್ಲದೆ ಕಮಾನನ್ನು ನಿರ್ಮಿಸುವುದೇ ಈ ರೀತಿಯಾದ ಕಮಾನಿನ ನಿರ್ಮಾಣದ ಮುಖ್ಯ ಉಪಯೋಗ. ಈ ಬಗೆಯ ಕಟ್ಟಡಗಳಲ್ಲಿ ಪರ್ಷಿಯಾದ ಪ್ರಭಾವವಿದೆ ಎಂದು ಕೆಲವು ವಿದ್ವಾಂಸರು ಊಹಿಸಿದರೆ ಮತ್ತೆ ಕೆಲವರು ಇದರ ಮೇಲೆ ನೇರವಾಗಿ ಚೀನಾದ ಪ್ರಭಾವವಿದೆ ಎಂದು ಹೇಳುವುದುಂಟು. ಈ ರೀತಿಯ ಕಮಾನಿನ ನಿರ್ಮಾಣ ಕ್ರಿ. ಶ. 12ನೆಯ ಶತಮಾನಕ್ಕೆ ಮುಂಚೆ ಭಾರತದಲ್ಲಿದ್ದಿತೆಂದೂ, ಮೂರ್ತಿಶಿಲ್ಪ ಮತ್ತು ವಾಸ್ತುಶಿಲ್ಪಗಳ ಶೈಲಿಗಳಂತ ಈ ಶೈಲಿ ಸಹ ಭಾರತದಿಂದಲೇ ಬಂದಿರಬಹುದೆಂದೂ ಊಹಿಸುತ್ತಾರೆ. ಪಗಾನಿನಲ್ಲಿ ದೊಡ್ಡಕಲ್ಲುಗಳಿಂದ ನಿರ್ಮಿಸಿರುವ ಗೋಡೆಗಳ ಮಧ್ಯೆ ಮರುಳುಕಲ್ಲಿನ ಚಪ್ಪಡಿಗಳನ್ನು ಅಳವಡಿಸಲಾಗಿದೆ ಮತ್ತು ಭಿತ್ತಿಯ ಹೊರಭಾಗದಲ್ಲಿ ಹಾಗೂ ಮೂಲೆಗಳಲ್ಲಿ ಶಿಲ್ಪಗಳನ್ನು ಹುಗಿಯಲಾಗಿದೆ.

	ಸ್ತೂಪ ಮತ್ತು ವಿಹಾರಗಳನ್ನು ಎಲ್ಲ ಕಾಲಗಳಲ್ಲಿಯೂ ಬೃಹತ್ ಆಕಾರಗಳಲ್ಲಿ ನಿರ್ಮಿಸಲಾಗುತ್ತಿತ್ತು. ವಿಹಾರದ ಮೇಲ್ಛಾವಣಿಕಮಾನಿನ ಆಕಾರದಲ್ಲಿದ್ದು ಕಟ್ಟಡ ನಿರ್ಮಾಣವಾದ ಮೇಲೆ ಕಲ್ಲನ್ನು ಕೊರೆದಿರುವಂತೆ ಭಾಸವಾಗುತ್ತದೆ. ಇಟ್ಟಿಗೆಗಳಿಂದ ನಿರ್ಮಿತವಾದ ಸುತ್ತುಗೋಡೆಗಳು, ಪ್ರತಿದಿಕ್ಕಿನ ಮಧ್ಯಭಾಗದಲ್ಲಿ ಸಾಮಾನ್ಯವಾದ ಕಮಾನುಗಳಿಂದ ಛೇದಿಸಲಾದ ಬಾಗಿಲುಗಳು, ದೇವಾಲಯ ಮುಖ್ಯಭಾಗ ಮತ್ತು ಅದರ ಶಿಖರಗಳ ತಳಪಾಯ, ಮೇಲ್ಭಾಗದ ಕೋವೆಗಳಲ್ಲಿ ಪ್ರಮಾಣಬದ್ಧವಾಗಿ ರೂಪಿಸಲಾಗಿರುವ ಅಲಂಕಾರಿಕ ಹೊರಭಾಗಗಳು ಮತ್ತು ನುಣ್ಣಗಿರುವ ಸ್ತಂಭಗಳಿಂದ ಬೇರ್ಪಡಿಸಲ್ಪಟ್ಟ ಬೊಂಬೆಗಳಿಂದ ಅಲಂಕೃತವಾದ ದೃಶ್ಯಗಳು ಅಥವಾ ವಿಗ್ರಹಗಳು ಇವೆ. ಭಿತ್ತಿಯ ಹೊರಭಾಗದ ಚಪ್ಪಡಿಗಳು ಬೃಹದಾಕಾರದಲ್ಲಿವೆ. ಇವು ಮೂಲೆಗಳಲ್ಲಿ ಅರ್ಧ ಕಂಬಗಳಿಂದ ಅಲಂಕೃತವಾಗಿವೆ. ಒಂದೊಂದಾಗಿ ಅಥವಾ ಎರಡೆರಡಾಗಿ ನಿರ್ಮಿಸಿರುವ ಈ ಅರ್ಧ ಕಂಬಗಳಿಗೆ ತಮ್ಮವೇ ಆದ ತಳ ಮತ್ತು ಕಪೋತ ಇವೆ. ಇವು ಕೋನ ಮತ್ತು ಆಯತಾಕಾರಗಳಿಂದ ಅಲಂಕೃತವಾಗಿವೆ. ತಳ ಮತ್ತು ಕಪೋತಗಳು ಒಂದೇ ಆಕಾರದಲ್ಲಿದ್ದು ಚಿತ್ರಗಳಿಂದ ಕೂಡಿವೆ. ಮೇಲ್ಭಾಗದ ತಳದಲ್ಲಿ ಒಳಹುದುಗಿಸಲಾಗಿರುವ ಚಿತ್ರದ ಸಾಲುಗಳಲ್ಲಿ ಕಪೋತದ ತಳದಲ್ಲಿ ಬರುವ ಹಾರಗಳ ಸಾಲುಗಳು ಮಾತ್ರ ಅಲಂಕಾರದ ವಿಶೇಷವಾಗಿದೆ. ಚೈತ್ಯಗಳು ಕಮಾನಿನಾಕಾರದಲ್ಲಿವೆ. ಇವುಗಳಲ್ಲಿ ತೊಲೆಗಳಿಲ್ಲ. ದೇವಾಲಯದ ಒಳಹೊರ ಭಾಗಗಳು ಏರುತಗ್ಗುಗಳಿಲ್ಲದೆ ಸಮತಲದಲ್ಲಿವೆ. ಬೃಹದಾಕಾರದ ಬಾಗಿಲುಗಳು ಅಂತರಾಳದ ಚೌಕಟ್ಟಿನಿಂದ ಹೊರಚಾಚಿ ನಿಂತಿದ್ದು ಕಮಾನಿನಾಕಾರದಲ್ಲಿರುವ ಒಳಭಾಗದ ಮೇಲ್ಛಾವಣಿಯಿಂದ ಬೇರ್ಪಡಿಸಲ್ಪಟ್ಟಿವೆ. ದೊಡ್ಡ ಬಾಗಿಲುಗಳು ಓಗೀಕಮಾನುಗಳಿಂದ ಕೂಡಿದ್ದರೆ ಸಣ್ಣ ಬಾಗಿಲುಗಳು ಉಬ್ಬುಗಳಿಂದ ಅಲಂಕೃತವಾಗಿವೆ. ಚೈತ್ಯಗಳು ಸರಳವಾಗಿದ್ದು ಪಾಶ್ರ್ವಗಳು ಅಲಂಕಾರದ ಗೆರೆಗಳಂತೆ ನೆಲದವರೆಗೆ ಇರುತ್ತವೆ. ಇವುಗಳ ಮೇಲ್ಭಾಗ ಅರ್ಧಸ್ತಂಭಗಳ ಮೇಲೆ ನಿಂತಿದೆ. ಅದನ್ನು ಮೊಸಳೆಯಂತೆ ಕಾಣುವ ಮಕರದ ತಲೆಯಿಂದ ಅಲಂಕರಿಸಿದೆ. ಕಮಾನಿನ ಮಧ್ಯಭಾಗದ ಈ ಮಕರಗಳ ಬಾಲಗಳು ಹರಡಿವೆ. ಕಿಟಿಕಿಗಳು ಬಾಗಿಲುಗಳಂತೆಯೇ ಕಾಣುತ್ತವೆ.

	ಮೈನ್‍ಮಾರ್‍ದೇಶದ ವಾಸ್ತುಶಿಲ್ಪವನ್ನು ಈ ಕೆಳಗಿನಂತೆ ವಿಂಗಡಿಸಿರುವರು. 1 ಗಂಟೆಯಾಕಾರದ ಸ್ತೂಪ. 2 ಇಟ್ಟಿಗೆಗಳಿಂದ ನಿರ್ಮಿತವಾದ ಪಗೋಡಗಳು ಇವು ಚೌಕ ಅಥವಾ ಆಯಾಕಾರವಾಗಿವೆ. ಇವುಗಳ ಮೇಲ್ಭಾಗವನ್ನು ಪಿರಮಿಡ್ಡಿನಂತೆ ಕಟ್ಟಲಾಗಿದೆ. ಇವು ಮರದ ವಾಸ್ತುಶಿಲ್ಪದ ಅನುಕರಣೆಗಳು. 3 ಒರಿಸ್ಸಾ ವಾಸ್ತುಶಿಲ್ಪದ ಪ್ರಭಾವ ಕಂಡುಬರುವ ಶಿಖರಾಕಾರದ ಮೇಲ್ಭಾಗವಿರುವ ಪಗೋಡಗಳು, 4 ಒರಿಸ್ಸಾ ವಾಸ್ತುಶಿಲ್ಪಕ್ಕೊಳಗಾಗಿ ಅಂತರಾಳದಿಂದ ಕೂಡಿರುವ ಪಗೋಡ, ಮತ್ತು ಕೆಲವು ಸ್ಥಳಗಳಲ್ಲಿ ಜಗಲಿಯ ಮೇಲೆ ನಿರ್ಮಾಣವಾಗಿರುವ ಇದೇ ಬಗೆಯ ಕಟ್ಟಡ. 5 ಚತುರಸ್ರ ಅಥವಾ ಆಯಾಕಾರದ ತಳಪಾಯ ಹೊಂದಿದ್ದು ಮೇಲ್ಭಾಗ ನೇಪಾಳದ ವಾಸ್ತುಶಿಲ್ಪ ಮಾದರಿಯಲ್ಲಿ ಒಂದು ಪಾತ್ರೆಯಂತೆ ಇರುವಂಥವು. 6 ಚತುರಸ್ರ ಅಥವಾ ಆಯಾಕಾರದ ತಳಪಾಯವಿದ್ದು ಮೇಲ್ಭಾಗ ಒರಿಸ್ಸಾ ದೇವಾಲಯಗಳ ಶಿಖರದಂತಿರುವವು. 7 ಭೂಪಾಯದಲ್ಲಿರುವ ಗೋಳಾಕಾರದ ಸ್ತೂಪಗಳು. 8 ಮಾನ್ ವಾಸ್ತುಶಿಲ್ಪದಂತಿರುವ ವೃತ್ತಾಕಾರದ ಗೋಪುರಗಳು. 9 ಎಲ್ಲ ರೀತಿಯ ವಾಸ್ತುಶಿಲ್ಪವನ್ನು ಒಳಗೊಂಡಿರುವ ಸ್ಮಾರಕಗಳು. 10 ವಿಹಾರಗಳು.

	ಮೈನ್‍ಮಾರ್ ಪುರಾತತ್ವ ನಿರ್ದೇಶಕ ಉ.ಲು. ಪೆವಿನ್ ತಮ್ಮ ಪಗಾನ್ ದೇಶ ಎಂಬ ಚಿತ್ರರಂಜಿತ ಪುಸ್ತಕದಲ್ಲಿ ಈ ಮುಂದಿನ ವಿಂಗಡಣೆ ಮಾಡಿರುವರು: 1 ಅವಶೇಷಗಳನ್ನು ಒಳಗೊಂಡ ಗುಮ್ಮಟಾಕಾರದ ಸ್ತೂಪಗಳು. 2 ಒಂದು ಗುಡ್ಡದಂತೆ ಗುಮ್ಮಟಾಕಾರದಲ್ಲಿರುವ ಸ್ತೂಪಗಳು. 3 ಸಿಂಹಳ ದೇಶದಲ್ಲಿರುವಂಥ ಸ್ತೂಪಗಳು. 4 ಉತ್ತರ ಭಾರತದ ದೇವಾಲಯಗಳನ್ನು ಹೋಲುವ ಮಂದಿರಗಳು. 5 ಮಧ್ಯ ಭಾರತ ಶೈಲಿಯ ಮಂದಿರಗಳು. 6 ದಕ್ಷಿಣ ಭಾರತ ಶೈಲಿಯ ದೇವಾಲಯಗಳು 7 ಭಾರತ ಶೈಲಿಯ ಗುಹಾಂತರ ದೇವಾಲಯಗಳು. 8 ಮಂಟಪಗಳು. 9 ಪುಸ್ತಕಾಲಯಗಳು.

	ಮೇಲಿನ ಎರಡೂ ಬಗೆಯ ವಿಂಗಡಣೆಗಳಿಗಿಂತ ಉತ್ತಮವಾದ ವಿಂಗಡಣೆಯನ್ನು ಎಚ್. ಪರ್ಮೆಂಟಿಯರ್ ಮತ್ತು ಮಾರ್ಷಲ್ ಕೊಟ್ಟಿದ್ದಾರೆ. ಇವರು ಸ್ಮಾರಕಗಳನ್ನು ಸ್ತೂಪ ಮತ್ತು ಪೂಜಾ ಚೈತ್ಯಗೃಹಗಳೆಂದು ವಿಂಗಡಿಸಿ ಇವುಗಳಲ್ಲಿಯ ವಿವಿಧ ವಿನ್ಯಾಸ ಮತ್ತು ಭೇದಗಳನ್ನು ವರ್ಣಿಸಿದ್ದಾರೆ. ಅದರಂತೆ ಮೈನ್‍ಮಾರ್‍ದೇಶದ ಸ್ತೂಪಗಳನ್ನು ಭಾರತದ ಸ್ತೂಪಗಳಿಂದ ಬೇರ್ಪಡಿಸಬಹುದು. ಮೈನ್‍ಮಾರ್‍ದವುಗಳಲ್ಲಿ ಹರ್ಮಿಕ ಇಲ್ಲವೇ ಸ್ತೂಪದ ಮಧ್ಯಭಾಗದಲ್ಲಿ ಪ್ರದಕ್ಷಿಣ ಪಥ ಇರುವುದಿಲ್ಲ. ಭಾರತದವುಗಳಲ್ಲಿ ಇವೆ. ಆದರೆ ತಳಭಾಗದಲ್ಲಿ ಬರುವ ಜಗಲಿ ಭಾರತದ ವಾಸ್ತುಶಿಲ್ಪವನ್ನು ಹೋಲುತ್ತದೆ. ಮೈನ್‍ಮಾರ್‍ದಲ್ಲಿ ಅರ್ಧವೃತ್ತಾಕಾರದ ಸ್ತೂಪಗಳು ಹೆಚ್ಚಿಲ್ಲ.

	ಇವುಗಳ ಪೈಕಿ 1190ರಲ್ಲಿ ಮಾನ್ ಬೌದ್ಧಭಿಕ್ಷುಮಿನಿಂದ ನಿರ್ಮಿಸಲಾದ ಚಪಾಟ್ ಸ್ತೂಪ ಶ್ರೀಲಂಕಾಶೈಲಿಯಲ್ಲಿದೆ.

	ಪ್ರೋಮ್ ನಗರದಲ್ಲಿ ಗೋಳಾಕಾರದ ಸ್ತೂಪಗಳು ಹೆಚ್ಚಾಗಿವೆ. ಗೋಳಾಕಾರದ ತಳಭಾಗದ ಮೇಲೆ ಬರುವ ಗುಮ್ಮಟ ಅರ್ಧವೃತ್ತಾಕಾರದಲ್ಲಿಯೂ ಇರುತ್ತದೆ. ಪೆಟ್ಲೇಕ್ ಮತ್ತು ಪಗಾಸ್‍ನಲ್ಲಿರುವ ಗೋಳಾಕಾರದ ಸ್ತೂಪಗಳು ಮೇಲೆ ಹರ್ಮಿಕವನ್ನು ಹೊಂದಿದ್ದು ಅದರ ಮೇಲೆ ಛತ್ರಾವಳಿಯಿರುತ್ತದೆ. ಈ ವಿಧವಾದ ಶಿಖರ ಭಾರತದಲ್ಲಿ ಕಾಣಬರುವುದಿಲ್ಲ. ಮಹಾರಾಜ ಅನವ್ರತನಿಂದ 1059ರಲ್ಲಿ ಕಟ್ಟಲಾಯಿತೆಂದು ಹೇಳುವ, ಅನಂತರ ಮತ್ತೆ ನಿರ್ಮಿಸಲಾದ ಪಗಾನ್ ನಗರದಲ್ಲಿರುವ ಲೌಕನಿಂದ ಸ್ತೂಪವೂ ಗೋಲಾಕಾರದಲ್ಲಿದ್ದು ತಳಭಾಗ ಸ್ವಲ್ಪ ಅಗಲವಾಗಿದೆ. ಇದರ ಪುಷ್ಟಮಂಜರಿ ಒಂದರೊಳಗೊಂದರಂತೆ ನಿರ್ಮಿತವಾಗಿ ವೃತ್ತಾಕಾರಗಳಲ್ಲಿದ್ದು ಭಾರತದ ಮಾದರಿಗಳಿಗಿಂತ ಭಿನ್ನವಾಗಿದೆ. ಅಳಿದುಳಿದಿರುವ ಪಗಾನ್ ಅಥವಾ ಬುಪಾಯ ಎಂಬುದು ಸ್ತೂಪಗಳ ಪೈಕಿ ಬಹಳ ಹಳೆಯದು ಹತ್ತನೆಯ ಶತಮಾನದ್ದೆಂದು ಹೇಳುತ್ತಾರೆ. ಸಾರನಾಥದಲ್ಲಿರುವ ಧಾಮೋಕಸ್ತೂಪದ ಮಾದರಿಯ ಗೋಳಾಕಾರದ ಸ್ತೂಪಗಳ ತಳಭಾಗ ಹೆಚ್ಚು ಅಗಲವಾಗಿದ್ದು ಶಿಖರವನ್ನು ಮುಟ್ಟುವಲ್ಲಿ ಒಂದು ಬಿಂದುವಿನಲ್ಲಿ ಕೂಡುತ್ತವೆ.

	ಪಗಾನ್ ನಗರದಲ್ಲಿ ಘಂಟಿ ಆಕಾರದ ಸ್ತೂಪಗಳು ಹೆಚ್ಚಾಗಿವೆ. ಈ ಸ್ತೂಪಗಳನ್ನು ಅರ್ಧವೃತ್ತಾಕಾರ ಗುಮ್ಮಟದ ಮೇಲ್ಭಾಗ ಮತ್ತು ಗೋಳಾಕಾರದ ಕೆಳಭಾಗದಿಂದ ಕೂಡಿರುವ ಸ್ತೂಪಗಳಿಂದ ಅಳವಡಿಸಿವೆ. ಇವುಗಳ ತಳಭಾಗ ಬಹಳ ಅಗಲವಾಗಿದ್ದು ಒಂದರ ಮೇಲೆ ಒಂದರಂತೆ ನಿಮಿಸಿರುವ ಮೂರು ಚೌಕಾಕಾರದ ಜಗುಲಿಗಳ ಮೇಲೆ ಕಟ್ಟಲಾಗಿದೆ. ಈ ಜಗುಲಿಗಳನ್ನು ಹತ್ತಲು ಮೆಟ್ಟಿಲುಗಳಿವೆ. ಷ್ಟೆಜಿಗಾಂವ್ ಮತ್ತು ಸೆ ಇನ್‍ಎಟ್ (11ನೆಯ ಶತಮಾನ) ಧಮ್ಮಯಾಜಿತ (1191) ಮತ್ತು ಮಿಂಗಲ ಜೇದಿ (1274) ಸ್ತೂಪಗಳು ಈ ಮಾದರಿಯಲ್ಲಿ ಕಟ್ಟಿವೆ. ಮಹಾರಾಜ ಅನವ್ರತನಿಂದ ನಿರ್ಮಿತವೆಂದು ಹೇಳುವ ಷ್ಟೆಷನ್‍ಡೌಸ್ತೂಪ ಎಂಟು ಪಾಶ್ರ್ವಗಳುಳ್ಳ ಐದು ಜಗುಲಿಗಳ ಮೇಲೆ ನಿರ್ಮಿತವಾಗಿದ್ದು ತಟಾನ್‍ನಲ್ಲಿರುವ ಜೊಕ್‍ಥೊಕ್ ಸ್ತೂಪದಂತಿದೆ.

	ಶಂಖಾಕಾರದ ಸ್ತೂಪಗಳ ಗುಮ್ಮಟದ ಘನ ಆಕಾರ ಕಡಿಮೆಯಾಗಿರುತ್ತದೆ. ಇವುಗಳ ತಳಭಾಗ ಬಹಳ ಅಗಲವಾಗಿರುತ್ತದೆ. ಪಾಶ್ರ್ವಗಳು ಬಿಲ್ಲಿನಾಕಾರದ ಎರಡು ರೇಖೆಗಳು ಒಂದನ್ನೊಂದು ಸಂಧಿಸುವಂತಿದ್ದು ಕೊಂಬಿನಂತೆ ಕಾಣುತ್ತವೆ. ತಳಭಾಗದಲ್ಲಿರುವ ಜಗುಲಿಗಳ ಮೇಲೆ ಮೂಲಸ್ತೂಪದಂತೆಯೇ ಇರುವ ಹಲವಾರು ಸಣ್ಣ ಸಣ್ಣ ಸ್ತೂಪಗಳನ್ನು ನಿರ್ಮಿಸಲಾಗಿದೆ. ಉದಾಹರಣೆಗೆ ಪೆಗುಮಿನಲ್ಲಿರುವಷ್ಟೆ ಮೌಡೌ ಮತ್ತು ರಂಗೂನಿನಲ್ಲಿರುವ ಸ್ಪೆಡಗಾವ್ ಸ್ತೂಪಗಳು. ಮಧ್ಯದಲ್ಲಿ ಮಂದಿರದಿಂದ ಕೂಡಿದ, ಸ್ತೂಪಗಳನ್ನು ಷಗಾನ್‍ನಲ್ಲಿರುವ ಮಿಮತಾಂಗ್‍ಕ್ಯಾಮಗ್ ಸ್ತೂಪ ಪ್ರತಿನಿಧಿಸುತ್ತದೆ. ಅಲ್ಲಲ್ಲಿ ಈ ಕಟ್ಟಡಗಳಿಗೆ ಹಿಂಭಾಗದ ಬಾಗಿಲುಗಳಿರುತ್ತವೆ, (ಗೌಡೌಪಲಿನ್ ಸ್ತೂಪ, 12ನೆಯ ಶತಮಾನ). ಆಕಾರದಲ್ಲಿ ಕಡಿಮೆಯಾಗುತ್ತಾ ಹೋಗಿ ಸ್ತೂಪಗಳಿಂದ ಅಲಂಕೃತವಾದ ಕಟ್ಟಡಗಳನ್ನು ಬೆಬೆಗ್ಯಿ ಅಥವಾ ಪರ್ಗಾನಿನ ಪಯತೊಂಜು (13ನೆಯ ಶತಮಾನ) ಮತ್ತು ಪಗಾನ್‍ನಲ್ಲಿರುವ ನಂದಮನ್ನಯ ಕಟ್ಟಡಗಳಲ್ಲಿ ಕಾಣಬಹುದು.

	ಕಲ್ಲು ಮತ್ತು ಇಟ್ಟಿಗೆಗಳ ಘನಾಕಾರದ ಟೊಳ್ಳುಕಟ್ಟಡಗಳು ಗರ್ಭಗೃಹದಿಂದ ಕೂಡಿರುತ್ತವೆ. ಚಿಕ್ಕ ಚಿಕ್ಕ ಕಲ್ಲುಗಳಿಂದ ಕಟ್ಟಿರುವ ಪಗಾನ್ ನಗರದ ನಾನ್‍ಪಾಯ ಕಟ್ಟಡ ಮನಹ ಎಂಬ ಮಾನ್ ದೊರೆಯಿಂದ ನಿರ್ಮಿಸಿದ್ದು. ಈ ದೊರೆಯನ್ನು 1057ರಲ್ಲಿ ತಟಾನ್ ನಗರದಿಂದ ಖೈದಿಯಾಗಿ ಹಿಡಿದು ತರಲಾಗಿತ್ತು. ಈ ಕಟ್ಟಡದ ಒಳಭಾಗದಲ್ಲಿ ಬಲಿಷ್ಠವಾದ ನಾಲ್ಕು ಕಂಬಗಳಿವೆ. ಇವುಗಳ ಮೇಲಿರುವ ಕಮಾನುಗಳ ಮೇಲೆ ಕಟ್ಟಡದ ಮೇಲ್ಭಾಗ ನಿಂತಿದೆ. ಈ ನಾಲ್ಕು ಕಂಬಗಳ ಸುತ್ತಲೂ ಕಿಟಕಿಗಳ ಒಂದು ವರಾಂಡವನ್ನು ನಿರ್ಮಿಸಲಾಗಿದೆ. ಪ್ರೋಮ್ ನಗರದಲ್ಲಿರುವ ಲೆಮ್ಯೆಥ್ನ ಈ ಮಾದರಿಯ ಕಟ್ಟಡಗಳಲ್ಲಿ ಬಹು ಪುರಾತನವಾದುದು.

	ಹಗುರವಾದ ಪದಾರ್ಥಗಳಿಂದ ಮತ್ತು ಮರದ ವಾಸ್ತುಶಿಲ್ಪವನ್ನು ಹೋಲುವ ಇಟ್ಟಿಗೆಗಳಿಂದ ನಿರ್ಮಿತವಾದ ದೇವಾಲಯಗಳು 11ನೇಯ ಶತಮಾನದಲ್ಲಿ ಪ್ರಚುರಕ್ಕೆ ಬಂದವು. ಈ ರೀತಿಯ ನಿರ್ಮಾಣವನ್ನು ಪಗಾನ್ ನಗರದ ಹಲವಾರು ಸ್ಮಾರಕಗಳಲ್ಲಿ ಕಾಣಬಹುದು. ಮೂಲೆಗಳನ್ನು ಅಲಂಕಾರವಾಗಿ ನಿರ್ಮಿಸಿ ಹಲವಾರು ಮಕರಗಳನ್ನು ಪ್ರತಿಬಿಂಬಿಸಲಾಗಿರುವ ಈ ಶೈಲಿಯ ಹಲವಾರು ಕಟ್ಟಡಗಳಲ್ಲಿ ಒಂದಕ್ಕಿಂತ ಹೆಚ್ಚಾಗಿ ಮೇಲ್ಛಾವಣಿಗಳಿರುತ್ತವೆ. ಈ ಬಗೆಯ ವಾಸ್ತುಶಿಲ್ಪವನ್ನು ಮಾಂಡಲೆಯ ಅರಮನೆಯಲ್ಲಿ ಅಭ್ಯಸಿಸಬಹುದು. ಇಲ್ಲಿನ ಸ್ತೂಪಗಳ ಹೊರಭಾಗದಲ್ಲಿ ಎರಡು ಮೇಲ್ಛಾವಣಿಗಳ ಮಧ್ಯಭಾಗವನ್ನು ಬಿಟ್ಟು ಮಿಕ್ಕ ಎಲ್ಲಾ ಮರದ ಭಾಗಗಳನ್ನು ಅಂದವಾದ ಕೆತ್ತನೆಯಿಂದ ಅಲಂಕರಿಸಲಾಗಿದೆ. ಕಪೋತಗಳ ಮೇಲೆ ಕಮಲದ ಬಳ್ಳಿ ಎಲೆ ಮತ್ತು ಹೂಗಳ ಕೆತ್ತನೆ ವಿರಾಜಮಾನವಾಗಿದೆ. ಬಳ್ಳಿಗಳು ಮತ್ತು ಕಮಲದ ಪುಷ್ಪಗಳು ಅಂದವಾಗಿವೆ. ಕಪೋತದ ಕೆಳಭಾಗ ತಿರುಗಣಿಗಳ ಮೇಲೆ ತಯಾರಿಸಿದ ಲೋಲಾಕುಗಳಿಂದಲಂಕೃತವಾಗಿದೆ. ಮೇಲೆ ಕಳಸವಿರುವ ನವಿಲಿನ ಚಿಹ್ನೆಯನ್ನು ಸ್ಮಾರಕದ ಎಲ್ಲ ಭಾಗಗಳಲ್ಲಿಯೂ ಚಿತ್ರಿಸಲಾಗಿದೆ. ಈ ಎಲ್ಲ ಕೆತ್ತನೆಯ ಕೆಲಸಗಳನ್ನು ಬಣ್ಣಗಳಿಂದ ಮತ್ತು ಗಾಜುಗಳಿಂದ ಅಲಂಕರಿಸಿರುತ್ತಾರೆ. ಈ ಅಲಂಕಾರಗಳು ರಾಜಗೃಹಗಳು ದೇವಮಂದಿರಗಳು ಮತ್ತು ಸಾರ್ವಜನಿಕಗೃಹಗಳಲ್ಲಿ ಕಂಡು ಬರುತ್ತವೆ.

	ಮೈನ್‍ಮಾರ್‍ದ ಸ್ಮಾರಕ ಕಟ್ಟಡಗಳ ಕಾಲ ಗಮನಿಸಿದಾಗ ಪಗಾನ್ ನಗರದ ಕಟ್ಟಡಗಳು 10ನೆಯ ಶತಮಾನದಿಂದ 13ನೆಯ ಶತಮಾನದವರಿಗೆ ನಿರ್ಮಾಣವಾದವು. ಪಗಾನ್‍ದೇಶದ ಕಲೆಯ ಚರಿತ್ರೆಯನ್ನು 1044 ರಿಂದ 1133ರ ವರೆಗೆ, ಅಂದರೆ ಅನವ್ರತ ಮತ್ತು ಅವನ ಮಗ ಕ್ಯಾನ್ಜಿತ್ಥನ ಕಾಲಗಳನ್ನೊಳಗೊಂಡು ಅಲೌಂಗ್‍ಸಿಧು ದೊರೆಯ ಕಾಲದವರೆಗೆ ಮತ್ತು ಅಲೌಂಗ್‍ಸಿಧು ಕಾಲವಾದ ಮೇಲೆ ಶುರುವಾಗಿ ಮಂಗೋಲರು ಪಗಾನ್ ನಗರವನ್ನು ವಶಪಡಿಸಿಕೊಳ್ಳುವವರೆಗೆ ಅಂದರೆ 1157ರಿಂದ 1287ರ ವರೆಗೆ ಹರಡಿದೆ. ಅಲೌಂಗ್‍ಸಿಧುವಿನ (1113-67) ಕಾಲ ಈ ಕಲೆಯ ಪರಿವರ್ತನೆಯ ಕಾಲವೆಂದು ಪರಿಗಣಿಸಬಹುದು.

	ಮಾನ್‍ಪ್ರಭಾವದ ಮಂದಿರಗಳನ್ನು ಬಹಳ ಕಡಿಮೆ ಬೆಳಕನ್ನು ಚೆಲ್ಲುವ ಕಿಟಕಿಗಳಿಂದ ಕೂಡಿದ ವರಾಂಡಗಳಿಂದಲೂ ಮತ್ತು ಮಾನ್ ಬರವಣಿಗೆಯಿಂದ ಕೂಡಿರುವ ವರ್ಣಚಿತ್ರಗಳಿಂದಲೂ ಗುರುತಿಸಬಹುದೆಂದೂ ಮೈನ್‍ಮಾರ್‍ದ ಮುಖ್ಯ ದೇವಾಲಯಗಳು ಸರಳ ಭೂನಕ್ಷೆಯಿಂದ ಕೂಡಿದ್ದು ಸಾಕಷ್ಟು ಗಾಳಿ ಮತ್ತು ಬೆಳಕಿನಿಂದ ಕೂಡಿದ್ದಾಗಿರುತ್ತದೆ ಎಂದೂ ಹೇಳುವುದುಂಟು. ಪಗಾನಿನ ಕಲಾಶೈಲಿಯ ಈ ಎರಡು ಕಲಾಪರಿ ಮಿತಿ ಸರಿಯಾಗಿ ನಿರ್ಧಾರಿತವಲ್ಲವೆಂದು ಹೇಳಬಹುದು.

	ಕ್ಯಾನ್ಜಿತ್ಥನ (1084-112) ಕಾಲದಲ್ಲಿ, ಅನಂತರ ಅವನ ಪತ್ನಿ ಮತ್ತು ಮಗನ ಕಾಲದಲ್ಲಿ ನಿರ್ಮಿತವಾದ ಸ್ಮಾರಕಗಳು ಸಿಂಹಳ ಶೈಲಿಯಿಂದ ಪ್ರಭಾವಿತವಾದವು. ಆನಂದ ದೇವಾಲಯ ಕ್ಯಾನ್ಜಿತ್ಥನ ಕಾಲದ ಅತ್ಯಂತ ಸುಂದರವಾದ ದೇವಾಲಯ 1091ರಲ್ಲಿ ಕಟ್ಟಲಾಗಿರುವ ಈ ಮಂದಿರವನ್ನು ಮಾನ್ ಮತ್ತು ಮೈನ್‍ಮಾರ್ ಶೈಲಿಗಳು ಮಧ್ಯಕಾಲದ ಬದಲಾವಣೆಗೆ ಹೋಲಿಸುತ್ತಾರೆ. ಈ ಬಗೆಯ ಬದಲಾವಣೆಗೆ ಒಳಗಾದ ಅಲಂಗ್‍ಸಿಧುವಿನ (1113-67) ಕಾಲದ ಸ್ಮಾರಕಗಳು ಹೇರಳವಾಗಿವೆ.

	ಅಲಂಗ್‍ಸಿಧುವಿನ ಅನಂತರ ಬಂದ ರಾಜರ ಕಾಲದಲ್ಲಿ (12ನೆಯ ಶತಮಾನದ ಕೊನೆಯಲ್ಲಿ ಮತ್ತು 13ನೆಯ ಶತಮಾನದ ಮೊದಲು ಮೂರು ಪಾದಗಳಲ್ಲಿ) ಹಲವಾರು ದೇವಾಲಯಗಳನ್ನು ನಿರ್ಮಿಸಲಾಯಿತು. (1167 ರಿಂದ 1287ರ ವರೆಗೆ ಅಂದರೆ ಪಗಾನಿನ ಅವನತಿಯವರೆಗೆ) ನರಧು ದೊರೆಯ ಕಾಲದಲ್ಲಿ (1167-70) ಪ್ರಾರಂಭಿಸಿ ಪೂರ್ತಿಗೊಳಿಸದ ದಮ್ಮ ಯಂಗ್ಯಿ ದೇವಾಲಯದ ಒಳಭಾಗ ಪೂಜಾ ಮಂದಿರದಿಂದ ಕೂಡಿಲ್ಲ. ಆದರೂ ಅದು ಆನಂದ ದೇವಾಲಯದಿಂದ ಸ್ಫೂರ್ತಿ ಪಡೆದಿದೆ. ನರಪತಿಸಿಧು ಅರಸನ ಕಾಲದಲ್ಲಿ (1173-1210) ಕಟ್ಟಿದ ಗೌಡೌಪಲಿನ್ ಮತ್ತು ಸುಲಮನಿ (1183) ಕಟ್ಟಡಗಳ ಶಿಖರದ ಭಾರ ಕಡಿಮೆಗೊಳಿಸಿ ಅವುಗಳದೇ ಆದ ಸ್ವಂತ ಶೈಲಿಯಲ್ಲಿ ಕಟ್ಟಲಾಗಿದೆ. ಮರದ ವಾಸ್ತುಶಿಲ್ಪದಿಂದ ಪ್ರಭಾವಿತ ಗೊಂಡಿರುವ ಮಿಮ ಲೌಂಗ್‍ಕ್ಯಉಂಗ್ (1174) ಮತ್ತು ಘಂಟಾಕಾರದ ಸ್ತೂಪದಿಂದ ಕೂಡಿರುವ ಧಮ್ಮಯಜಿಕ (1196) ಮಂದಿರಗಳು ಇದೇ ರಾಜನ ಕಾಲದಲ್ಲಿ ಕಟ್ಟಿದವು.

	ದೊರೆ ಜಿಯಧೆ ಇನಹಿಕನಿಂದ (1210-34) ನಿರ್ಮಿತವಾದ ತಿಲೋಮಿನ್ ಲೋಮ್ (1218) ದೇವಾಲಯ ಎತ್ತರವಾಗಿ ಕಟ್ಟಲ್ಪಟ್ಟ ಮಂದಿರದಿಂದ ಕೂಡಿದ್ದು ಧತ್ ಬಿನ್ನು ಶೈಲಿಯಲ್ಲಿದೆ. ಬಹು ದೊಡ್ಡದಾದ ಶಿಖರವನ್ನೊಳಗೊಂಡ ಲೆಮ್ಯಥ್ನ (1222) ಮತ್ತು ಭಾರತದ ಬುದ್ಧಗಯೆಯ ದೇವಾಲಯದಂತಿರುವ ಮಹಾಭೋದಿ ಮಂದಿರಗಳು ಈ ರಾಜನ ಕಾಲದಲ್ಲಿಯೇ ಕಟ್ಟಿದವು.

	ಉಜ್ನ ದೊರೆಯ (1250-54) ವಿಧವೆ ಪತ್ನಿ ನಿರ್ಮಿಸಿದ ಥಂಬುಲಿ (1255) ದೇವಾಲಯ ಆನಂದದೇವಾಲಯವನ್ನು ಹೋಲುತ್ತದೆ. ಪಗಾನ್‍ನಗರವನ್ನು ಮಂಗೋಲರು ಗೆಲ್ಲುವುದಕ್ಕೆ ಮುಂಚೆ 1274ರಲ್ಲಿ ಆರಂಭಿಸಿದ ಮಿಂಗಲಜೇದಿ ದೇವಾಲಯ ಪಗಾನ್‍ನಗರದ ಕೊನೆಯ ದೇವಾಲಯ. ಈ ದೇವಾಲಯ ಅನವ್ರತನ ಕಾಲದಲ್ಲಿ ನಿರ್ಮಿಸಲಾದಷ್ಟೆ ಜಿಗಾನ್ ದೇವಾಲಯದಂತಿದೆ. ಇದರ ಶೈಲಿ ಗಮನಿಸಿದರೆ 13ನೆಯ ಶತಮಾನದ ಕೊನೆಯಲ್ಲಿ ನಿರ್ಮಿಸಿದ ದೇವಾಲಯಗಳು ಪುರಾತನ ಶೈಲಿಯನ್ನು ಅನುಕರಿಸಿದ್ದು ಕಾಣಿಸುತ್ತದೆ.

	ಇದಾದ ಮೇಲೆ ಸುಮಾರು ಎರಡೂವರೆ ಶತಮಾನಗಳವರೆಗೆ ಮೈನ್‍ಮಾರ್‍ದಲ್ಲಿ ಯುದ್ಧಗಳೂ, ಅಂತಃಕಲಹಗಳೂ ಆಗುತ್ತಿದ್ದು ಹೊಸ ಸ್ಮಾರಕಗಳ ನಿರ್ಮಾಣ ಕಾಣಬರುವುದಿಲ್ಲ. ಹಿಂದಿನ ಕೆಲವು ಸ್ಮಾರಕಗಳು ಮರದ ಸಾಮಾನುಗಳಿಂದ ಕಟ್ಟಲಾಗಿದ್ದು ಈಗ ನಶಿಸಿಹೋಗಿವೆ. ಸ್ಥಿರವಾದ ಪದಾರ್ಥಗಳಿಂದ ಕಟ್ಟಿದ ಸ್ತೂಪಗಳು ಮಾತ್ರ ಉಳಿದಿವೆ. ಪಗಾನಿನ ಅನಂತರ ಬೆಳಕಿಗೆ ಬಂದ ಸಗ ಇಂಗ್, ಅವ. ಪೆಗು, ಆಮರವುರ ಮೊದಲಾದ ರಾಜಧಾನಿಗಳನ್ನು ದೋಚಲಾಯಿತು. 

	ನಾಣ್ಯಗಳು: ಮೈನ್‍ಮಾರ್‍ದ ರಾಜ ಬೊದಪಾಯನ (1781-1819) ಕಾಲದಲ್ಲಿ ಮೈನ್‍ಮಾರ್‍ದ ನಾಣ್ಯಗಳನ್ನು ಮುದ್ರಿಸಲಾಯಿತು. ಇವಕ್ಕೆ ಮುಂಚೆ ಮೈನ್‍ಮಾರ್‍ದಲ್ಲಿ ಹೆಚ್ಚು ನಾಣ್ಯಗಳು ಇರಲಿಲ್ಲ. ಆದುದರಿಂದ ಮೈನ್‍ಮಾರ್‍ದ ಹಿಂದಿನ ನಾಣ್ಯಗಳು ಈಗ ಸಂಪೂರ್ಣವಾಗಿ ಕಾಣದಾಗಿವೆ. ಮೈನ್‍ಮಾರ್ ಮತ್ತು ಅರಕಾನ್ ದೇಶದ ನಾಣ್ಯಗಳನ್ನು ಜ್ಞಾಪಕಾರ್ಥವಾಗಿ ತಯಾರಿಸಲಾಗಿತ್ತು. ರಾಜರ ರಾಜ್ಯಭಾರದ ಮೊದಲನೆಯ ಸಂವತ್ಸರದಲ್ಲಿ ನಾಣ್ಯಗಳನ್ನು ಮುದ್ರಿಸಿ ಅವುಗಳನ್ನು ಪಗೋಡದಲ್ಲಿ ಆಸ್ತಿಗಳ ಜೊತೆಯಲ್ಲಿಡುತ್ತಿದ್ದರು. ನಾಣ್ಯಗಳನ್ನು ವ್ಯಾಪಾರಕ್ಕೆ ಹಣವನ್ನಾಗಿ ಉಪಯೋಗಿಸುವುದನ್ನು ಮೈನ್‍ಮಾರ್‍ದವರು ಭಾರತದಿಂದ ಕಲಿತರು.

	ಬೆ ಇಕ್ಥ್ ನೋವಿನ ಉತ್ಖನನಗಳಲ್ಲಿ ಯಾವ ಬರೆಹವೂ ಇಲ್ಲದ ನಾಣ್ಯಗಳು ಅಥವಾ ಪದಕಗಳು ದೊರೆತಿವೆ. ಶ್ರೀಕ್ಷೇತ್ರದಲ್ಲಿ ನಾಣ್ಯಗಳ ಲಕ್ಷಣಗಳನ್ನೊಳಗೊಂಡ ಮತ್ತು ಹರ್ಲಿನ್‍ಗೆ ಸಂಬಂಧಪಟ್ಟ ವಿಚಿತ್ರನಾಣ್ಯಗಳು ಇಲ್ಲಿ ದೊರಕಿವೆ. ಈ ರೀತಿಯಾದ ಬರವಣೆಗೆ ಇಲ್ಲದ ನಾಣ್ಯಗಳು ಪ್ಯೂಸಂಸ್ಕøತಿಯ ಕಾಲದ್ದೆಂದು ಹೇಳುವರು. 1404ರಿಂದ 1782ರ ವರೆಗೆ ಮುದ್ರಿಸಿರುವ ಮೈಂಕ್ ರಾಜಮನೆತನದ ಹಲವು ಅರಸರ ನಾಣ್ಯಗಳು ದೊರಕಿವೆ. ಈ ನಾಣ್ಯಗಳು ಆ ರಾಜಮನೆತನದ 20ನೆಯ ರಾಜನಿಂದ ಹಿಡಿದು 48ನೆಯ ರಾಜನ ಕಾಲದವರೆಗೆ ಹರಡಿವೆ. ಇವುಗಳಲ್ಲಿ 1652ನೆಯ ಇಸವಿಯ ಒಂದು ನಾಣ್ಯ ಈ ಮನೆತನದ 23ನೆಯ ರಾಜನಾದ ಚಂಡಸುಧಾಮನ ನಾಣ್ಯವಾಗಿದೆ. ಈ ನಾಣ್ಯಗಳು ಸಾಮಾನ್ಯವಾಗಿ ಬೆಳ್ಳಿಯಲ್ಲಿ ಮುದ್ರಿಸಲಾಗಿವೆ. ಈ ನಾಣ್ಯಗಳ ಹಿಂಭಾಗ ಮತ್ತು ಮುಂಭಾಗಗಳಲ್ಲಿ ಕತ್ತಿನ ಸುತ್ತಲೂ ಒಡವೆಗಳಿರುವ ಗೂಳಿ ಮತ್ತು ಕಲಚಂದ್ರ ಎಂಬ ಬರವಣೆಗೆ: ಹಾರ ಮತ್ತು ಲೋಲಾಕುಗಳಿಂದಲಂಕೃತವಾದ ಈಶ್ವರನ ತ್ರಿಶೂಲ ಇದರ ಮೇಲೆ ಸೂರ್ಯಚಂದ್ರರು, ಕೆಳಗಡೆ ಚಿಕ್ಕದಾಗಿ ಗುಂಡಗಿರುವ ಐದು ಚುಕ್ಕೆಗಳಿವೆ. ಎರಡೂ ಕಡೆಗಳಲ್ಲಿ ಬರವಣಿಗೆ ಇರುವ ನಾಣ್ಯಗಳೂ ಕೆಲವು ಸಿಕ್ಕಿವೆ.

	ಶಾಸನಗಳು: ಇಂಡೋ ಚೀನದ ಇತರ ದೇಶಗಳಿಗಿಂತ ಮೈನ್‍ಮಾರ್‍ದಲ್ಲಿ ಶಿಲಾಶಾಸನ ಮತ್ತು ಬೇರೆ ಶಾಸನಗಳು ಹೆಚ್ಚಾಗಿ ಕಂಡು ಬಂದಿವೆ. ಇವುಗಳಲ್ಲಿ ಬರ್ಮೀ, ತಲೈಂಗ್, ಪ್ಯೂ, ಅರ್ಕನೀಸ್ ಮತ್ತು ಸಯಾಮೀ ಶಾಸನಗಳು ಸೇರಿವೆ. ಇವು ಪಗಾನ್, ಪೆಗು ಮತ್ತು ಪ್ರೋಮ್‍ನಲ್ಲಿ ಹೆಚ್ಚಾಗಿವೆ. ಅತ್ಯಂತ ಹಳೆಯ ಕಾಲದ ಶಾಸನಗಳು ಪ್ರೋಮ್ ನಗರದಲ್ಲಿ ದೊರಕಿವೆ. ಇವುಗಳಲ್ಲಿ ಎರಡು ಪಾಲಿ ಭಾಷೆಯಲ್ಲಿಯೂ ಉಳಿದವು ಈಗ ಬಳಕೆಯಿಲ್ಲದ ಪ್ಯೂ ಭಾಷೆಯಲ್ಲೂ ಇವೆ. ಪ್ಯೂ ಶಾಸನಗಳಲ್ಲಿ ಒಂದೆರಡನ್ನು ಬಿಟ್ಟು ಮಿಕ್ಕವು ಪಯಾಗ್ಯಿ ಪಗೋಡದ ಸಮೀಪದಲ್ಲಿ ಮತ್ತು ಪ್ಯೂಸಮಾಧಿಗಳಲ್ಲಿ ದೊರಕಿವೆ. ಈ ಶಾಸನಗಳು ಚಿಕ್ಕವಾಗಿದ್ದರೂ ಮುಖ್ಯವಾದವುಗಳಾಗಿವೆ.

	ಮೈನ್‍ಮಾರ್‍ದ ಅತ್ಯಂತ ಪ್ರಾಚೀನ ಶಾಸನಗಳು ಕ್ರಿ.ಶ. 6ನೆಯ ಶತಮಾನಕ್ಕೆ ಸೇರಿದವು. ಇವು ಅರಕಾನ್ ಮತ್ತು ಮವ್ಜಾ (ಪ್ರೋಮ್) ಪ್ರದೇಶಗಳಲ್ಲಿ ದೊರಕಿವೆ. ಮವ್ಜಾ ಪ್ರದೇಶದಲ್ಲಿ ಬವ್ಬಾಗ್ಯೆ ಎಂಬಲ್ಲಿ ದೊರೆಕಿರುವ ಅನೇಕ ಶಾಸನಗಳು ಪ್ಯೂ ಲಿಪಿಯಲ್ಲಿವೆ. ಬವ್ಬಾಗ್ಯೆ ಅಕ್ಷರಗಳು ಕದಂಬ ಮತ್ತು ಚಾಲುಕ್ಯ ಶಾಸನಗಳ ಲಿಪಿಯನ್ನು ಬಹಳವಾಗಿ ಹೋಲುತ್ತವೆ. ಅ, ಣ, ಲ ಎಂಬ ಅಕ್ಷರಗಳಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಕ, ಗ, ಜ, ತ, ನ, ಪ, ಭ ಗಳು ಒಂದೇ ರೀತಿಯಲ್ಲಿವೆ. ಪ್ಯೂ ಶಾಸನಗಳ ಅಧ್ಯಯನ ಮಾಡಿರುವ ವಿದ್ವಾಂಸರಗಳು ಈ ವಿಷಯವನ್ನು ವಿಮರ್ಶಿಸಿ ಸಮಕಾಲೀನ ಪ್ಯೂ ಮತ್ತು ಕನ್ನಡ ಅಕ್ಷರಗಳ ಸಾಮ್ಯತೆಯ ಬಗ್ಗೆ ಹೇಳಿದ್ದಾರೆ, ಮಾಂಗಮ್ ಎಂಬಲ್ಲಿ ಬೌದ್ಧಧರ್ಮ ಸೂತ್ರಗಳಿರುವ ಕ್ರಿಶ 5ನೆಯ ಶತಮಾನದ ಚಿನ್ನದ ಪಟಗಳು ದೊರಕಿವೆ. ಇವು ಆಕಾರದಲ್ಲಿ ದಕ್ಷಿಣ ಭಾರತದ ವಾಲೆಗರಿಯ ಕಟ್ಟಿನಂತಿವೆ ಅಲ್ಲದೆ ಇವುಗಳಲ್ಲಿ ಉಪಯೋಗಿಸಿರುವ ಲಿಪಿ ಪುನಃ ಕದಂಬ ಚಾಲುಕ್ಯರ ಲಿಪಿಯನ್ನು ಹೋಲುತ್ತದೆ. ಕ್ರಿಶ 6-7ನೆಯ ಶತಮಾನಗಳ ಚಂದ್ರಕುಲದ ಅರಸನಿಂದ ಹೊರಡಿಸಲ್ಪಟ್ಟ ಕೆಲವು ಪ್ರಾಚೀನ ಶಾಸನಗಳು ಮೈನ್‍ಮಾರ್‍ದ ಅರಕಾನ್ ಪ್ರದೇಶದಲ್ಲಿ ಸಿಕ್ಕಿವೆ. ಈ ಶಾಸನಗಳ ರಚನಾ ಕ್ರಮ ಕರ್ನಾಟಕದ ಕದಂಬ ಅರಸುಗಳ ಶಾಸನಗಳಂತೆಯೇ ಇವೆಯೆಂಬುದು ಅವುಗಳನ್ನು ಸಂಪಾದಿಸಿರುವ ಡಾ. ಡಿ. ಸಿ. ಸರ್ಕಾರ್‍ರವರು ಅಭಿಪ್ರಾಯ ಪಟ್ಟಿದ್ದಾರೆ. ಈ ಅಂಶಗಳಿಂದ ಕರ್ನಾಟಕ ಮತ್ತು ಮೈನ್‍ಮಾರ್‍ದೇಶಕ್ಕೆ 5-6ನೆಯ ಶತಮಾನದ ಹೊತ್ತಿಗೆ ನಿಕಟ ಬಾಂಧವ್ಯವಿತ್ತೆಂದೂ, ಮೊದಮೊದಲು ಕರ್ನಾಟಕದ ಲಿಪಿ ಬಳಕೆಯಿದ್ದಿತ್ತೆಂದೂ ಇಲ್ಲಿಯ ಶಾಸನಗಳ ರಚನಾಕ್ರಮ ಸಹ ಮೈನ್‍ಮಾರ್‍ದ ಶಾಸನಗಳಿಗೆ ಮಾದರಿಯಾಗುವಷ್ಟರಮಟ್ಟಿಗೆ ಪ್ರಭಾವ ಬೀರಿತ್ತೆಂದೂ ಸುಮಾರು 1921ರಲ್ಲಿಯೇ ಮೈನ್‍ಮಾರ್‍ದ ಪ್ರಸಿದ್ಧ ಶಾಸನತಜ್ಞರಾದ ತ್ರಾಸಿಯಾನ್ ಕೊ ಅವರು ಮೈನ್‍ಮಾರ್‍ದೇಶದ ಶಾಸನಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಅದರ ಮುನ್ನುಡಿಯಲ್ಲಿ ಮೈನ್‍ಮಾರ್‍ದ ಮುಖ್ಯ ಲಿಪಿಗಳಾದ ಪ್ಯೂ, ತಲೈಂಗ್, ಬರ್ಮೀ ಮತ್ತು ಷಾನ್ ಲಿಪಿಗಳು ದಕ್ಷಿಣ ಭಾರತದ ತೆಲಗು-ಕನ್ನಡ ಲಿಪಿಗಳಿಂದ ಬೆಳೆದವುಗಳೆಂದೂ, ಅದರಲ್ಲೂ ಪ್ಯೂ, ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಕದಂಬರ ಲಿಪಿಯಿಂದ ನೇರವಾಗಿ ಬಂದುದೆಂದೂ ಸ್ಪಷ್ಟವಾಗಿ ಹೇಳಿದ್ದಾರೆ. ಉಧಮ್ಯತ್ ಎಂಬ ವಿದ್ಯಾಂಸರು ಬರ್ಮೀಭಾಷೆಯಲ್ಲಿ ಬರೆದಿರುವ ಮಾನ್-ಬರ್ಮೀ ಅಕ್ಷರಗಳ ಚರಿತ್ರೆ ಎಂಬ ಪುಸ್ತಕದಲ್ಲಿ ಈ ಬರ್ಮೀಲಿಪಿ ಹೇಗೆ ಕದಂಬರ ಕಾಲದ ಲಿಪಿಯಿಂದ ಬೆಳದಿದೆ ಎಂಬುದನ್ನು ಚಿತ್ರಗಳೊಡನೆ ವಿವರಿಸಿದ್ದಾರೆ.

	ಇದೇ ಸಂದರ್ಭದಲ್ಲಿ ಮೈನ್‍ಮಾರ್‍ದ ಶ್ರೀಕ್ಷೇತ್ರಕ್ಕೆ (ಪ್ರೋಮ್ ರಾಜ್ಯ) ವನವಾಸಿ ಎಂಬ ಹೆಸರಿತ್ತೆಂಬುದು ಗಮನಿಸಬೇಕಾದ ಅಂಶ. ಈ ವಿಷಯ ಅಲ್ಲಿಯ ಬೌದ್ಧ ದೇವಾಲಯ ಒಂದರಲ್ಲಿ ಸ್ಥಾಪಿಸಿದ್ದ ಒಂದು ಬುದ್ಧನ ವಿಗ್ರಹದಲ್ಲಿರುವ ಇದಂವನವಾಸಿ ರಟ್ಟವಾಸಿನಂ ಪೂಜನೆತ್ಥಾಯ ಇದು ವನವಾಸಿ ನಿವಾಸಿಗಳ ಪೂಜೆಗಾಗಿ ಎಂಬ ಶಾಸನದಿಂದ ಖಚಿತಪಡುತ್ತದೆ. ಇದರಿಂದ ಸಾಮ್ರಾಟ್ ಅಶೋಕನ ಕಾಲದಿಂದಲೂ ಪ್ರಸಿದ್ಧವಾಗಿದ್ದ, ಕದಂಬರ ರಾಜಧಾನಿ ಬನವಾಸಿಯಿಂದಲೇ (ಇಲ್ಲಿಂದ ವಲಸೆ ಹೋದ ಜನರಿಂದಲೇ) ಈ ಮೈನ್‍ಮಾರ್‍ದ ವನವಾಸಿ ಹೆಸರು ಬಂದಿರಬೇಕೆಂದು ಊಹಿಸಬಹುದಾಗಿದೆ.

	ಹಿಂದೆ ನಮೂದಿಸಿರುವ ಪ್ಯೂ ಸಮಾಧಿಗಳಲ್ಲಿ ದೊರಕುವ ಶಾಸನಗಳು ಇಂಡೋ ಚೀನಾದ ತತ್ತ್ವಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಬಹಳ ಮುಖ್ಯವಾದವುಗಳಾಗಿವೆ-11ನೆಯ ಶತಮಾನದ ಈ ಶಾಸನಗಳು ಹಳೆಯ ಮಾನ್ ಅಥವಾ ತಲೈಂಗೆ ಶೈಲಿಯಲ್ಲಿವೆ, ಪಗಾನ್ ಸಮೀಪದಲ್ಲಿ ಶಿಥಿಲವಾದ ಪುರಾತನ ಆಯಾಕಾರದ ಮಿಯಜೇದಿ ಪಗೋಡದ ಸಮೀಪದಲ್ಲಿ ಎರಡು ಶಾಸನ ಸ್ತಂಭಗಳು ದೊರಕಿವೆ. ಈ ಸ್ತಂಭಗಳ ನಾಲ್ಕು ಪಕ್ಕಗಳಲ್ಲೂ ನಾಲ್ಕು ಭಾಷೆಗಳಲ್ಲಿ ಅಂದರೆ ಪಾಲ್, ಬರ್ಮೀ, ತಲೈಂಗ್ ಮತ್ತು ಪ್ಯೂ ಭಾಷೆಗಳಿರುವ ಶಾಸನಗಳಿವೆ. ಈ ಶಾಸನಗಳಿಂದ ದೊರೆ ಕ್ಯಾನ್ಜಿತ್ತನ ಸಿಂಹಾಸನಾರೋಹಣ ಕಾಲವನ್ನು ಖಚಿತವಾಗಿ ಹೇಳಲು ಅನುಕೂಲವಾಗಿದೆಯಲ್ಲದೆ ಅವನಾದ ಮೇಲೆ ಅಧಿಕಾರಕ್ಕೆ ಬಂದ ಅಲಂಗಸಿಂಧು, ಅನವ್ರತ ಮತ್ತು ಸವ್‍ಲುರವರ ಕಾಲವನ್ನು ಸಹ ಖಚಿತಪಡಿಸುತ್ತದೆ.

	ಇದಲ್ಲದೆ ಮೈನ್‍ಮಾರ್‍ದ ರೊಸೆಟ್ಟ ಕಲ್ಲು ಶಾಸನ ಸಹ ಒಂದು ಸ್ತಂಭದ ಮೇಲೆ ಪ್ಯೂ, ಮಾನ್, ಬರ್ಮೀ ಮತ್ತು ಪಾಲ್ ಭಾಷೆಗಳಲ್ಲಿ ಕೆತ್ತಲಾಗಿವೆ. ಇದು ಕ್ಯಾನ್ಜಿತ್ತನ ಮಗ ರಾಜಕುಮಾರ ಬರೆಸಿದ್ದು. ಕ್ಯಾನ್ಜಿತ್ತನ ಅವಸಾನ ಕಾಲದಲ್ಲಿ ರಾಜಕುಮಾರ ತಾನು ರಾಜ್ಯಭಾರವನ್ನು ಒಪ್ಪಿಕೊಂಡುದಕ್ಕೆ ಜ್ಞಾಪಕಾರ್ಥವಾಗಿ ತನ್ನ ತಂದೆಗೆ ಬುದ್ಧನ ಒಂದು ವಿಗ್ರಹವನ್ನು ಕೊಟ್ಟ ವಿವರಗಳು ಈ ಶಾಸನಗಳಿಂದ ತಿಳಿದು ಬರುತ್ತದೆ.

	ಸಾಮಾನ್ಯವಾಗಿ ಈ ಶಾಸನಗಳಲ್ಲಿ ದೇವಾಲಯ ಮತ್ತು ವಿಹಾರಗಳ ನಿರ್ಮಾಣ, ವಿಗ್ರಹಗಳ, ಪುಸ್ತಕಾಲಯಗಳ ಸ್ಥಾಪನೆ, ಬಾವಿಗಳನ್ನು ತೋಡುವುದು, ಮರಗಳನ್ನು ನೆಡುವುದು, ಶೀಥಿಲವಾದ ಸ್ಮಾರಕಗಳ ರಿಪೇರಿ, ಧರ್ಮ ಸಂಬಂಧವಾದ ಭವನಗಳ ನಿರ್ಮಾಣ, ಎಲ್ಲ ರೀತಿಯ ಧರ್ಮ ಸಂಸ್ಥೆ ಮತ್ತು ಕಟ್ಟಡಗಳಿಗೆ ಜಮೀನುಗಳ, ಉದ್ಯಾನವನಗಳ, ದನಗಳ ಮತ್ತು ಸೇವಕರ ದಾನಗಳನ್ನು ಸಾರುತ್ತವೆ. ರಾಜರು, ರಾಣಿಯರು, ಮಂತ್ರಿಗಳು ಅರಮನೆಯ ಅಧಿಕಾರಿಗಳೇ ಅಲ್ಲದೆ ಸಾಮಾನ್ಯ ಜನರೂ ದಾನಿಗಳಾಗಿದ್ದರೆಂಬುದು ಈ ಶಾಸನಗಳಲ್ಲಿ ತಿಳಿದು ಬರುವ ಮುಖ್ಯ ಅಂಶವಾಗಿದೆ. 	

	(ಸಿ.ಕೆ.ಎಂ.)

	ಇತಿಹಾಸ: ಮೈನ್‍ಮಾರ್‍ದ ಭೂಶೋಧನೆಯಲ್ಲಿ ದೊರೆತ ಪ್ರಾಚೀನ ಅವಶೇಷಗಳು ಈ ಭೂಭಾಗ ಪುರಾತನ ಮಾನವ ನಿವೇಶನವಾಗಿದ್ದಿತೆಂದು ಸ್ಪಷ್ಟಪಡಿಸುತ್ತವೆ. ಮೈನ್‍ಮಾರ್‍ದ ಹಳೆಯ ಶಿಲಾಯುಗದ ಸಂಸ್ಕøತಿಯನ್ನು ಅನ್ಯಾಥಿಯಾನ್ ಸಂಸ್ಕøತಿಯೆಂದು ಕರೆಯಲಾಗಿದೆ. ಮಾಗ್ವೆ ಮತ್ತು ನ್ಯಾವುಂಗು, ಅನ್ಯಾಥಿಯನ್ ನವ ಶಿಲಾಯುಗದ ಮುಖ್ಯ ನಿವೇಶನಗಳು. ಇವು ಇರವಾಡೀ ನದಿಯ ಸಾಲಿನಲ್ಲಿವೆ. ಮೈನ್‍ಮಾರ್‍ದಲ್ಲಿ ದೊರೆತಿರುವ ಪುರಾತನ ವಸ್ತುಗಳಲ್ಲಿ ಗೊಳೀಯ ಆಕೃತಿ ಮತ್ತು ಅರಕಾನ್‍ನಲ್ಲಿ ದೊರೆತಿರುವ ತ್ರಿಭುಜಾಕೃತಿ ನಾಣ್ಯಗಳು ಪ್ರಸಿದ್ಧವಾದವು. ನಾಣ್ಯಗಳಲ್ಲಿ ಕೆಲವು ರಾಜರುಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಈಗಿನ ಮ್ರೊಹಾಂಗ್ ಪಟ್ಟಣದ ಶಿತ್‍ಹಾಂಗ್ ಪಗೋಡದಲ್ಲಿರುವ ಅನಂದಚಂದ್ರ ಶಾಸನ ಅರಕಾನಿನಲ್ಲಿ ದೊರೆಕಿರುವ ನಾಣ್ಯಗಳ ಮೇಲೆ ಉಲ್ಲೇಖಿಸಲಾಗಿರುವ ರಾಜರುಗಳ ಹೆಸರುಗಳನ್ನು ಪುನರುಚ್ಚರಿಸುತ್ತದೆ. ಲಿಪಿಶಾಸ್ತ್ರದ ಆಧಾರದ ಮೇಲೆ ಈ ಶಾಸನವನ್ನು ಎಂಟನೆಯ ಶತಮಾನದ್ದೆಂದು ಪರಿಗಣಿಸುವುದಾದರೆ, ಅರಕಾನಿನ ನಾಣ್ಯಗಳು 4ರಿಂದ 8ನೆಯ ಶತಮಾನಕ್ಕೆ ಸೇರಿದವೆಂದು ಹೇಳಬಹುದಾಗಿದೆ. ಅರಕಾನಿನಲ್ಲಿ ದೊರೆತಿರುವ ಇತರ ಶಾಸನಗಳು ಮತ್ತು ಬೌದ್ಧಗ್ರಂಥಗಳು ಕಾಲದೈಷ್ಟಿಯಿಂದ 7ರಿಂದ 10ನೆಯ ಶತಮಾನಗಳಿಗೆ ಸಂಬಂಧಿಸಿವೆ, ಇಲ್ಲಿ ದೊರೆತಿರುವ ಕಲಾಕೃತಿಯ ಚೂರುಗಳೂ ಹಾಗೂ ಇತರ ಆಧಾರಗಳು ಬೌದ್ಧ ಮತ್ತು ಶೈವಧರ್ಮಗಳು ಆ ಕಾಲದಲ್ಲಿ ಮೈನ್‍ಮಾರ್‍ದ ಪ್ರಮುಖ ಧರ್ಮಗಳಾಗಿದ್ದುವೆಂದು ತಿಳಿಸುತ್ತವೆ. ಶಿತ್ತಲುಂಗ್ ಪಗೋಡದಲ್ಲಿ ಕಂಡುಬರುವ ವಿಷ್ಣು ಗರುಡ ಮತ್ತು ಬುದ್ಧನ ಚಿತ್ರಗಳು ಅನಂತರದ ಕಾಲಕ್ಕೆ ಸಂಬಂಧಿಸಿದವು. ಮ್ರೊಹಾಂಗಿನ ನೈಋತ್ಯಕ್ಕೆ 12.8 ಕಿಮೀ ದೂರದಲ್ಲಿರುವ ವೆತಾಲಿಯಲ್ಲಿ ಕಂಡುಬುರವ ಶಿಥಿಲ ಕೋಟೆ ಕಂದಕ, ನಾಣ್ಯಗಳು ಮತ್ತು ಒಂದು ಶಾಸನ ಇವುಗಳಿಂದ ಇದು ಚಂದ್ರವಂಶದ ರಾಜರ ರಾಜಧಾನಿಯಾಗಿದ್ದಿತೆಂದು ತಿಳಿದುಬರುತ್ತದೆ.

	ಮೈನ್‍ಮಾರ್‍ವನ್ನು ಅನೇಕ ರಾಜಾವಂಶಗಳು ಆಳಿವೆ. ಅವುಗಳಲ್ಲಿ ಮುಖ್ಯವಾದವು ಮಾನ್ ಸಂತತಿ, ಟಿಬೆಟೊ-ಮೈನ್‍ಮಾರ್‍ನ್ ಬುಡಕಟ್ಟಿನ ಪಗಾನ್‍ನ ಸಂತತಿ ಟೂಉಂಗೂ ಮತ್ತು ಕೊನ್ ಬಉಂಗ್ ಸಂತತಿ. ಮೈನ್‍ಮಾರ್‍ದ ಇತಿಹಾಸದ ಮೊದಲ ಹಂತವನ್ನು ಐದು ಭಾಗಗಳಾಗಿ ವಿಂಗಡಿಸಬಹುದು: (1) ಕ್ರಿ.ಶ. 1077ರ ತನಕ ಮೂಲವಾಸಿಗಳು ಮತ್ತು ಸಾಮ್ರಾಜ್ಯ ಸ್ಥಾಪನೆ, (2) 1133ರ ತನಕ ಮಾನ್ ಸಂಸ್ಕøತಿಯ ಪರ್ವಕಾಲ, (3) 1174ರ ತನಕ ಮಾನ್ ಸಂಸ್ಕøತಿಯಿಂದ ಮೈನ್‍ಮಾರ್‍ನ್ ಸಂಸ್ಕøತಿಯಿಂದ ಮೈನ್‍ಮಾರ್‍ನ ಸಂಸ್ಕøತಿಗೆ ಮಾರ್ಪಾಡಾದ ಕಾಲ, (4) 1287ರ ತನಕ ಮೈನ್‍ಮಾರ್‍ನ್ನರ ಕಾಲ, (5) ಮೈನ್‍ಮಾರ್‍ನ್ನರ ಅಧಿಕಾರ ಗ್ರಹಣ ಕಾಲ, ಮೈನ್‍ಮಾರ್‍ದ ಈ ಸಾಮ್ರಾಜ್ಯಗಳ ಇತಿಹಾಸ ಮುಖ್ಯವಾಗಿ ಪಗಾನ್ ಸ್ಮಾರಕಗಳಲ್ಲಿ ಸಂಗ್ರಹಿಸಿದ ಶಾಸನಗಳನ್ನು ಆಧರಿಸಿವೆ.

	ಮಾನರು ಮತ್ತು ಪ್ಯೂಗಳು: ಮಾನರು ಆಸ್ಟ್ರೊ-ಏಷಿಯನ್ ಭಾಷಾಬುಡಕಟ್ಟೆಗೆ ಸೇರಿದವರು. ಇವರು ಕ್ರಿ.ಪೂದಲ್ಲಿ ದಕ್ಷಿಣ ಚೀನಾದ ಮೂಲಕ ಕೆಳಮೈನ್‍ಮಾರ್ ಪ್ರವೇಶಿಸಿ ಮೊದಲು ತೇಟನಿನಲ್ಲಿ ನೆಲಸಿದರು. ಆನಂತರ ಕೋಸ್ಮ ಮತ್ತು ಪೆಗು ಪ್ರದೇಶಗಳಲ್ಲಿ ಹರಡಿದರು. ಪೂರ್ವ ಪಗಾನ್ ಯುಗದ ಬಹುಭಾಗದಲ್ಲಿ ಮಾನರು ಕೆಳ ಮೈನ್‍ಮಾರ್‍ದ ಒಡೆಯರಾಗಿದ್ದುವು. ತೇಟನ್, ಕೋಸ್ಮ, ಮತ್ತು ಪೆಗು ಇವರ ಪ್ರಮುಖ ರಾಜಕೀಯ ಕೇಂದ್ರಗಳಾಗಿದ್ದವು. ಇವರು ಶಿತ್ಹಾಂಗ್ ಕಣಿವೆಯನ್ನು ಪೂರ್ಣವಾಗಿ ಆಕ್ರಮಿಸಿಕೊಂಡು ಅನಂತರ ತಮ್ಮ ಪ್ರಭಾವವನ್ನು ಉತ್ತರದ ಕಡೆಗೆ ಹರಡಿ ಚೌಕ್ಸೇ ನೀರಾವರಿ ಪ್ರದೇಶವನ್ನು ತಮ್ಮ ಹತೋಟಿಗೆ ಒಳಪಡಿಸಿಕೊಂಡು ಈ ಪ್ರದೇಶವನ್ನು ಮೈನ್‍ಮಾರ್‍ದ ಆಹಾರ ಕಣಜವಾಗಿ ಮಾರ್ಪಡಿಸಿದರು. ಇರವಾಡಿಯ ತಗ್ಗುಪ್ರದೇಶ ಮತ್ತು ಅದರ ಪಶ್ಚಿಮದ ಪ್ರಸ್ಥಭೂಮಿಯ ಮೇಲೆ ಮಾನರು ಸ್ಥಾಸಿದದ್ದ ಹಿಡಿತ ಅನೇಕ ಶತಮಾನಗಳ ತರುವಾಯ ಇಲ್ಲಿಗೆ ಬಂದು ಟಿಬೆಟೊ-ಮೈನ್‍ಮಾರ್‍ನ್ನರ ದಾಳಿಯಿಂದಾಗಿ ತಾತ್ಕಾಲಿಕವಾಗಿ ಮುರಿದುಹೋಯಿತು. ಈ ಟಿಬೆಟೊ-ಮೈನ್‍ಮಾರ್‍ನ್ನರನ್ನು ಪ್ಯೂಗಳೆಂದು ಕರೆಯಾಲಾಗುತ್ತಿತ್ತು. ಶ್ರೀಕ್ಷೇತ್ರ ಪ್ಯೂಪಂಗಡದವರ ರಾಜಧಾನಿ. ಕ್ರಿ.ಶ. 638ರಲ್ಲಿ ಇದನ್ನು ಸ್ಥಾಪಿಸಲಾಯಿತೆಂದು ನಂಬಲಾಗಿದೆ. ಪ್ಯೂ ಸಂಸ್ಥಾನ ಮೂರು ನಾಲ್ಕನೆಯ ಶತಮಾನಗಳಲ್ಲಿ ಚೀನ ಮತ್ತು ಭಾರತಗಳ ವ್ಯಾಪಾರಕ್ಕೆ ಭೂ-ಮಾರ್ಗದ ಕೊಂಡಿಯಾಗಿತ್ತು. ಪ್ಯೂ ರಾಜ್ಯ ಅರಕಾನ್ ತೀರ ಪ್ರದೇಶ ಮತ್ತು ಬಂಗಾಳಕೊಲ್ಲಿಯ ಮೂಲಕ ಭಾರತದೊಡನೆ ವ್ಯಾಪಾರ ಸಂಬಂಧ ಹೊಂದಿತ್ತು. ಕ್ರಿ.ಶ. 638ರಿಂದ ಒಂದೂವರೆ ಶತಮಾನಗಳ ಕಾಲ ಪ್ಯೂಗಳು ಕೆಳಮೈನ್‍ಮಾರ್‍ದ ಹತೋಟಿಗಾಗಿ ಮಾನರೊಡನೆ ಪೈಪೋಟಿಯಲ್ಲಿ ತೊಡಗಿದ್ದರು. ಮಾನ್ ಮತ್ತು ಪ್ಯೂಗಳು ಅನೇಕ ಸಾಂಸ್ಕøತಿಕ ವಿಚಾರಗಳಲ್ಲಿ ಸಾಮ್ಯ ಹೊಂದಿದ್ದರು. ಈ ಎರಡು ಸಂಸ್ಕøತಿಗಳ ಮೇಲೆ ಗುಪ್ತರ ಪ್ರಭಾವ ಗಣನೀಯವಾಗಿದ್ದುದು ಕಂಡುಬರುತ್ತದೆ.

	ಪ್ಯೂ ಜನ ಭಾರತದ ವಿಷ್ಣು ಪಂಥ ಮತ್ತು ಬೌದ್ಧ ಧರ್ಮಗಳೊಡನೆ ಹೊಂದಿದ್ದ ನಿಕಟ ಸಂಬಂಧವನ್ನು ಶ್ರೀಕ್ಷೇತ್ರ ನಗರದ ಸುತ್ತಮುತ್ತಲಿನ ಕೋಟೆ. ಹೆಬ್ಬಾಗಿಲು ಮತ್ತು ಮೂರು ಬೃಹತ್ ಸ್ತೂಪಗಳನ್ನೊಳಗೊಂಡು ಭಗ್ನಾವಶೇಷಗಳು ಪ್ರತಿ ಬಿಂಬಿಸುತ್ತಿವೆ. ಪ್ಯೂಗಳು ಸತ್ತವರ ಸುಟ್ಟ ಬೂದಿಯನ್ನು ಮಡಕೆಗಳಲ್ಲಿ ತುಂಬಿ ಹೂಳುತ್ತಿದ್ದರು. ಮಾನರು ಮತ್ತು ಪ್ಯೂಗಳು ವ್ಯಾಪಾರದಲ್ಲಿ ಆಸಕ್ತಿ ಹೊಂದಿದ್ದರು. ಮಾನರು ಸಮುದ್ರದ ಮೇಲಿನ ವ್ಯಾಪಾರದಲ್ಲಿ ನಿರತರಾಗಿದ್ದರೆ, ಪ್ಯೂಗಳು ಇರವಾಡೀ ನದಿಯ ಮೂಲಕ ಪಶ್ಚಿಮ ಚೀಣಾದೊಂದಿಗೆ ವ್ಯಾಪರ ಸಂಪರ್ಕ ಏರ್ಪಡಿಸಿಕೊಂಡಿದ್ದರು. ಭಾರತೀಯರ ಅನೇಕ ವಾಣಿಜ್ಯ ನೆಲೆಗಳು ಇರವಾಡೀ ನದಿಯ ಮುಖಜ ಭೂಮಿಯ ಬಂದುರುಗಳಲ್ಲಿ ಮತ್ತು ಅಕ್ಯಾಬ್ ಕರಾವಳಿಯಲ್ಲಿ ಸ್ಥಾಪಿಸಲ್ಪಟ್ಟಿದ್ದುವು. ಮೊದಮೊದಲು ಸಂಸ್ಕøತ ಸಾಹಿತ್ಯ ಗ್ರಂಥಗಳು, ಭಾಷೆ ಮತ್ತು ವೈಷ್ಣವ ಪಂಥಗಳು ಪ್ಯೂಗಳ ಮೇಲೆ ಹೆಚ್ಚಿನ ಪ್ರಭಾವ ಹೊಂದಿದ್ದು, ಅನಂತರ ಪಾಲಿ ಗ್ರಂಥಗಳು ಮತ್ತು ಹೀನಯಾನ ಬೌದ್ಧಧರ್ಮ ಅವುಗಳ ಸ್ಥಾನ ಪಡೆದುಕೊಂಡವು. ಮಹಾಯಾನ ಬೌದ್ಧಧರ್ಮವು ಸ್ವಲ್ಪ ಮಟ್ಟಿಗೆ ಆಚರಣೆಯಲ್ಲಿತ್ತು. ಶೈವಧರ್ಮ ಜೆರಕಾನಿನಲ್ಲಿ ಮಾತ್ರ ಪ್ರಚಲಿತವಾಗಿತ್ತು. ಪ್ರಾರಂಭದಲ್ಲಿ ಮಾನರಿಗೆ ಭಾರತದ ಜೊತೆ ಇದ್ದ ವ್ಯಾಪಾರ ಹಾಗೂ ಸಾಂಸ್ಕøತಿಕ ಸಂಪರ್ಕ ಒರಿಸ್ಸಾ ಮತ್ತು ಆಂಧ್ರದ ತೆಲಂಗಾಣ ಜಿಲ್ಲೆಗಳಿಗೆ ಕೇಂದ್ರೀಕೃತವಾಗಿದ್ದುವು. ಅನಂತರ ಮಾನರು ತಮ್ಮ ಧಾರ್ಮಿಕ ಸಂಪರ್ಕವನ್ನು ಸಿಲೋನಿನೊಂದಿಗೆ ಬೆಳಸಿಕೊಂಡರು. ಮಾನರ ಕಾಲದ ಭಗ್ನಕಟ್ಟಡಗಳು ಇಂದಿಗೂ ಉಳಿದಿವೆ. ಪ್ಯೂಗಳ ಶ್ರೀಕ್ಷೇತ್ರದಲ್ಲಿ ಸುಮಾರು 46 ಮೀಟರ್ ಎತ್ತರದ ಸ್ತೂಪವೊಂದು ಇದೆ. ಪ್ಯೂಗಳ ಕಟ್ಟಡ ನಿರ್ಮಾಣ ಕಲೆ ಮುಂದಿನ ಪೆಗಾನರಿಗೆ ಮಾರ್ಗದರ್ಶಿಯಾಗಿದ್ದಿತು.

	ಎಂಟನೆಯ ಶತಮಾನದಲ್ಲಿ ಕರೆನ್ ಪಲಉಂಗ್ ಗುಂಪಿನವರು ಪ್ಯೂಗಳನ್ನು ಕೆಳಮೈನ್‍ಮಾರ್‍ದಿಂದ ಓಡಿಸಿದರು. ಇದರಿಂದಾಗಿ ಪ್ಯೂ ಬುಡಕಟ್ಟಿನವರು ಉತ್ತರದ ಕಡೆಗೆ ಬಂದು ತಮ್ಮ ರಾಜಧಾನಿಯನ್ನು ಮೇಲಣ ಮೈನ್‍ಮಾರ್‍ದ ಈಗಿನ ಶ್ವೇಬೋದ ಹತ್ತಿರವಿರುವ ಹಾಲಿಂಗಿಗೆ ತಾತ್ಕಾಲಿಕವಾಗಿ ವರ್ಗಾಯಿಸಿದರು. ಇಲ್ಲಿಂದ ಪ್ಯೂಗಳು ಟ್ಯಾಂಗ್ ಚೀನಾದೊಂದಿಗೆ ಭೂ ಮಾರ್ಗವಾಗಿ ವ್ಯಾಪಾರ ಸಂಪರ್ಕವನ್ನು ಪುನಸ್ಥಾಪಿಸಿದರು.

	ಕ್ರಿ.ಶ. 800ರ ಅನಂತರ ಮೈನ್‍ಮಾರ್‍ದ ರಾಜಕೀಯ ಘಟನೆಗಳು ಬಹಳ ಬಿರುಸಾಗಿದ್ದವು. 832ರಿಂದ 835ರ ಅವಧಿಯಲ್ಲಿ ಹಾಲುಗಿಯನ್ನೊಳಗೊಂಡಂತೆ ಮಾನರ ಅನೇಕ ಪಟ್ಟಣಗಳು ಪಶ್ಚಿಮ ಯುನಾನ್‍ನ ನಾನ್ ಚಾವೂ ಸಂಸ್ಥಾನದ ಗುಡ್ಡಗಾಡಿನ ಬುಡಕಟ್ಟೆನವರ ಧಾಳಿಗೆ ತುತ್ತಾಗಿನಾಶವಾದವು. ಹನಾಯ್ ಮೇಲೆ ನಡೆಸಿದ ದಾಳಿಗಳಲ್ಲಿ ಪ್ಯೂ ಸೆರೆಯಾಳುಗಳನ್ನು ಬಳಸಿಕೊಳ್ಳಲಾಗಿತ್ತು.

	ಪಗಾನ್ ಸಂತತಿ: ಇರವಾಡೀ ಕಣಿವೆಯ ಮೇಲೆ ನಾನ್‍ಚಾವೂ ನಡೆಸಿದ ಧಾಳಿಗಳು ನಿಂತ ಸುಮಾರು ಎರಡು ಮೂರು ದಶಕಗಳನಂತರ ಟಿಬೆಟೊ-ಮೈನ್‍ಮಾರ್‍ನ್ ಬುಡಕಟ್ಟಿಗೆ ಸೇರಿದ ಅರೆನಾಗರಿಕ ಗುಂಪೊಂದು ನಾನ್‍ಚಾವೊ ಹತೋಟಿಯಲ್ಲಿದ್ದ ಪಶ್ಚಿಮ ಯುನಾನಿನ ಮೂಲಕ ತಪ್ಪಿಸಿಕೊಂಡು ದಕ್ಷಿಣದ ಕಡೆಗೆ ನಡೆದು ಮೈನ್‍ಮಾರ್‍ದ ಷಾನ್ ಪ್ರಸ್ಥಭೂಮಿ ಪ್ರವೇಶಿಸಿ ನೀರಾವರಿ ಸೌಲಭ್ಯ ಹೊಂದಿದ್ದ ಚೌಕ್ಸೀ ಪ್ರದೇಶವನ್ನು ವಶಪಡಿಕೊಂಡಿತು. ಈ ಟಿಬೆಟೊ-ಮೈನ್‍ಮಾರ್‍ನ್ ಬುಡಕಟ್ಟಿನವರೇ ಮೈನ್‍ಮಾರ್‍ದ ನಿಜವಾದ ನಿರ್ಮಾಪಕರು. ಈ ಮೈನ್‍ಮಾರ್‍ನ್ನರು ಪ್ರಮುಖಬೇಸಾಯ ಯೋಗ್ಯ ಪ್ರದೇಶಗಳಾದ ಚೌಕ್ಸೇ ಮಾಗ್ವೆ, ಮಿನ್ಬು, ಶ್ವೇಬೋಗಳ ಮೇಲೆ ಭದ್ರಹತೋಟಿ ಸ್ಥಾಪಿಸಿದರು. ಇವರ ಒತ್ತಡದಿಂದಾಗಿ ಮಾನರು ಇನ್ನೂ ದಕ್ಷಿಣಕ್ಕೆ ಸರಿದರು. ಮೈನ್‍ಮಾರ್‍ನ್ನರು ಆಕ್ರಮಿತ ಪ್ರದೇಶದ ಇತರ ಬುಡಕಟ್ಟಿನವರನ್ನು ಅದರಲ್ಲೂ ಮುಖ್ಯವಾಗಿದ್ದ ಪ್ಯೂಗಳನ್ನು ಸೋಲಿಸಿ ತಮ್ಮೊಡನೆ ವಿಲೀನವಾಗಿಸಿಕೊಂಡರು. ಮಾನರ ರಾಜಕೀಯ ವ್ಯವಸ್ಥೆ ಅನುಸರಿಸಿ ಒಂದು ಪ್ರಬಲ ಸಾಮ್ರಾಜ್ಯ ಕಟ್ಟಿದರು. ಇರವಾಡೀ ನದಿಯ ಎಡದಂಡೆಯ ಮೇಲೆ ಚೌಕ್ಸೇ ಮತ್ತು ಮಿನ್ಬು ನಡುವೆ ಇದ್ದ ಪಗಾನ್ ಅವರ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದ್ದಿತು. ಒಂಬತ್ತನೆಯ ಶತಮಾನದ ಕೊನೆಯವೇಳೆಗೆ ಮೈನ್‍ಮಾರ್‍ನ್ನರು ಪಗಾನಿನಲ್ಲಿ ತಮ್ಮ ರಾಜಧಾನಿ ನಿರ್ಮಿಸಿದರು. 850ರಿಂದ 1150ರ ನಡುವಿನ ಮೂರು ಶತಮಾನಗಳ ಅವಧಿಯಲ್ಲಿ ಟಿಬೆಟೊ-ಮೈನ್‍ಮಾರ್‍ನ್ನರು ತಮ್ಮ ಮಧ್ಯ ಮೈನ್‍ಮಾರ್‍ದ ಮೇಲಿನ ಹತೋಟಿಯ ಕಾಲದಲ್ಲಿ ಮಾನರಿಂದ ಅನೇಕ ವಿಷಯಗಳಲ್ಲಿ ಪ್ರಭಾವಿತರಾದರು. ಕ್ರಮೇಣ ಮೈನ್‍ಮಾರ್‍ನ್ನರು ವ್ಯಾಪಾರ ಮತ್ತು ವಾಣಿಜ್ಯದ ಮಹತ್ತ್ವ ಅರಿತು ಅದನ್ನು ಪ್ರೋತ್ಸಾಹಿಸಿದರು. ಮಾನರ ಸಂಸ್ಕøತಾಧಾರಿತ ಬರವಣೆಗೆಯನ್ನು ಮೈನ್‍ಮಾರ್‍ನ್ನರು ಅಳವಡಿಸಿಕೊಂಡರು ಮತ್ತು ಕ್ರಮೇಣ ಮಾನ್ ಮಾದನಿಯ ಕಲೆ, ವಾಸ್ತುಶಿಲ್ಪ ಮತ್ತು ಧರ್ಮಗಳನ್ನು ತಮ್ಮದಾಗಿಸಿಕೊಂಡರು. ಮೈನ್‍ಮಾರ್‍ನ್ನರ ಪ್ರಸಿದ್ಧ ದೊರೆ ಅನಿರುದ್ಧ ಅನವ್ರತ (1044-1077). ಇವನ ಕಾಲದಲ್ಲಿ ಮೈನ್‍ಮಾರ್‍ನ್ನರು ಮಾನರ ಮೇಲೆ ರಾಜಕೀಯ ಪ್ರಾಬಲ್ಯಗಳಿಸಿಕೊಂಡರು. ಅನಿರುದ್ಧನ ನೇತೃತ್ವದಲ್ಲಿ ಮೈನ್‍ಮಾರ್‍ನ್ನರು ಉತ್ತರದಿಕ್ಕಿನಲ್ಲಿ ಇರವಾಡೀ ಸ್ವೆಲೀನದಿ ಕೂಡುವ ಪ್ರದೇಶದವರೆಗೆ ಮುನ್ನುಗ್ಗಿದ್ದರು, ದಕ್ಷಿಣದಲ್ಲಿ ಅವರು ಮಾನರಿಂದ ಕೆಳಮೈನ್‍ಮಾರ್‍ವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡರು. ಸಿಂಹಳೀಯರ ಬೇಡಿಕೆಯ ಮೇರೆಗೆ ಚೋಳರನ್ನು ಸಿಂಹಳದಿಂದ ಓಡಿಸಲು ಅನಿರುದ್ಧ 1060ರಲ್ಲಿ ತನ್ನ ಸೈನ್ಯ ಕಳುಹಿಸಿದ್ದ, ಅನಿರುದ್ಧನ ಮರಣಾನಂತರ ಮಾನರು ಮೈನ್‍ಮಾರ್‍ನ್ನರ ವಿರುದ್ಧ ದಂಗೆಯೆದ್ದರು. 1084ರಲ್ಲಿ ದೊರೆಯಾಗಿ ಆರಿಸಲ್ಪಟ್ಟ ಕ್ಯಾನ್ಜಿತ್ಥ ಮಾನರಲ್ಲಿ ಶಾಂತಿ ಮೂಡಿಸಿದ. ಮಾನರ ಸಂಸ್ಕøತಿ ಆಧರಿಸಿ ಮೈನ್‍ಮಾರ್‍ವನ್ನು ಒಂದು ಗೂಡಿಸುವುದು ಕ್ಯಾನ್ಜಿತ್ಥನ ಅಭಿಲಾಷೆಯಾಗಿತ್ತು. ಕ್ಯಾನ್ಜಿತ್ಥ ತೇಟನ್ ಮಾನರ ರಾಜಸಂತತಿಯ ಮೂಲಕ್ಕೆ ಸೇರಿದ ತನ್ನ ಮಗಳ ಮಗನನ್ನು ತನ್ನ ಉತ್ತರಾಧಿಕಾರಿಯಾಗಿ ನಾಮಕರಣ ಮಾಡಿದ್ದ. ತಿಲಿಅನ್ ಮಾನನ (ಕ್ಯಾನ್ಜಿತ್ಥ) ಆಡಳಿತ ಕಾಲದಲ್ಲಿ ಪಗಾನ್ ಆಸ್ಥಾನದ ಮೇಲೆ ಮಾನರ ಸಾಂಸ್ಕøತಿಕ ಪ್ರಭಾವ ಅವಿರೋಧವಾಗಿ ವ್ಯಾಪಕವಾಗಿತ್ತು. ಅದು ಆತನ ಉತ್ತರಾಧಿಕಾರಿಗಳ ಕಾಲದಲ್ಲಿಯೂ ಮುಂದುವರಿಯಿತು, ಆಡಳಿತದ ಎಲ್ಲಾ ವ್ಯವಹಾರಗಳಲ್ಲಿ ಮತ್ತು ಶಾಸನಗಳಲ್ಲಿ ಮಾನ್ ಭಾಷೆ ಮತ್ತು ಲಿಪಿ ಬಳಸಲಾಗುತ್ತಿತ್ತು. ಮಾನ್ ಬುಡಕಟ್ಟಿಗೆ ಸೇರಿದ ಷಿನ್ ಅರಹನ್ ಎಂಬ ವಿದ್ವಾಂಸ ದೊರೆಯ ಮಾರ್ಗದರ್ಶಿಯಾಗಿದ್ದ. 

	ತಿಲಿಅನ್ ಮಾನನ ಆಡಳಿತ ಕಾಲ ಅನೇಕ ಸಾಧನೆಗಳಿಗೆ ಹೆಸರುವಾಸಿಯಾಗಿತ್ತು. ಆತ ಆನಂದದೇವಾಲಯದ ಯೋಜನೆ ಮತ್ತು ನಿರ್ಮಾಣ ಕೈಗೊಂಡ. ರಾಜ ಮಾನರೊಡನೆ ಶಾಂತಿ ಉಂಟುಮಾಡಲು ತನ್ನ ಮಗನನ್ನು ಬಿಟ್ಟು ಮಾನ್ ಸಂತತಿಯವನಾದ ತನ್ನ ಮಗಳ ಮಗನನ್ನು 1084ರಲ್ಲಿ ಉತ್ತರಾಧಿಕಾರಿಯಾಗಿ ನೇಮಿಸಲಾಗಿ, ತನ್ನ ದುಃಖತಪ್ತ ಮಗನನ್ನು ಸಂತೈಸುವ ಕಥೆಯನ್ನೊಳಗೊಂಡಿರುವ ಮ್ಯಾಜಿದಿ ಶಾಸನ ಕೆತ್ತಿಸಿದ. ಕ್ಯಾನ್ಚಿತ್ಥನನ್ನು ಆತನ ಮರಣಾನಂತರ ವಿಷ್ಣುವಿನ ಅವತಾರವೆಂದು ಘೋಷಿಸಲಾಯಿತು.

	ಬೌದ್ಧಧರ್ಮ ಮತ್ತು ಬೌದ್ಧ ಭಿಕ್ಷುಗಳ ಸಂಘಗಳು ಪಗಾನ್ ಸಾಮ್ರಾಜ್ಯ ಕಾಲದ ಮೈನ್‍ಮಾರ್ ಇತಿಹಾಸದಲ್ಲಿ ಮುಖ್ಯ ಪಾತ್ರ ನಿರ್ವಹಿಸಿರುವುವು. ಅಧಿಕಾರ ಚಲಾಯಿಸುವಲ್ಲಿ ಧರ್ಮ ತನ್ನ ಪ್ರಭಾವ ಬೀರಿತ್ತು. ಬೌದ್ಧ ಭಿಕ್ಷುಗಳು ಪ್ರಾಥಮಿಕ ಹಂತದಲ್ಲಿ ಯುವ ಜನಾಂಗಕ್ಕೆ ಬೋಧನೆ ಮಾಡುತ್ತಿದ್ದರು. ಬೌದ್ಧಸಂಘಗಳು ಅಪಾರ ಸಂಪತ್ತನ್ನು ದನದ ರೂಪದಲ್ಲಿ ಪಡೆದು ಪಗಾನ್ ಸಂಸ್ಥಾನದಲ್ಲಿ ಸಾವಿರಾರು ಪಗೋಡಗಳನ್ನು ಕಟ್ಟಲು ವಿನಿಯೋಗಿಸಿದುವು. ತಿಲುಅನ್ ಮಾನನ ಮೊಮ್ಮಗನಾದ ಒಂದನೆಯ ಕಾನ್ಸುವಿನ ಆಡಳಿತ ಕಾಲದಲ್ಲಿ ಮೈನ್‍ಮಾರ್‍ದ ಸಂಸ್ಕøತಿ ಮತ್ತು ಭಾಷಾಬೆಳೆವಣಿಗೆಗೆ ಹೊಸ ತಿರುವು ನೀಡಲಾಯಿತು. ಇವನ ಆಳ್ವಿಕೆಯ ಕೊನೆಯ ಶತಕಗಳ ಮೈನ್‍ಮಾರ್‍ನ ಪಕ್ಷಪಾತಿಗಳು ಮಾನ್ ಸಂಸ್ಕøತಿಯ ಪ್ರಾಬಲ್ಯ ಸಹಿಸಲಾಗದೆ ರಾಜಕೀಯ ಒಳಸಂಚು ನಡೆಸಲಾರಂಭಿಸಿದರು. ಒಂದನೆಯ ಕಾನ್ಸುವಿನ ಮಗ ಇನ್ತಸ್ಯಾನ್ 1167ರಲ್ಲಿ ಅಧಿಕಾರಕ್ಕೆ ಬಂದ ಅನಂತರ ಅರಾಜಕತೆ ತಳೆದೋರಿತು. ಈತ ದುರ್ಬಲ ರಾಜನಾಗಿದ್ದುದರಿಂದ ಅನಿರುದ್ಧೀನನ ಸಾಲಿಗೆ ಸೇರಿದ ಎರಡನೆಯ ಕಾನ್ಸು 1174ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅರಾಜಕತೆ ಕೊನೆಗೊಂಡಿತು. ಇವನ ತನ್ನ ಆಸ್ಥಾನದಲ್ಲಿ ಮಾನ ಸಂಪ್ರದಾಯ ಮತ್ತು ಭಾಷೆಯ ಬಳಕೆ ನಿಷೇಧಿಸಿದ.

	ಪಗಾನ್ ನಗರದ ಇವರ ಕಾಲದಲ್ಲಿ ಅನೇಕ ಸುಪ್ರಸಿದ್ಧ ಕಟ್ಟಡಗಳಿಂದ ಶೋಭಿಸುತ್ತಿತ್ತು. ಪಗಾನ್ ನಗರದ ಸುಮಾರು 52 ಚ. ಕಿಮೀ ಪ್ರದೇಶ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ಬೇರೆ ಬೇರೆ ಗಾತ್ರದ ಮತ್ತು ಮಾದರಿಯ ಅನೇಕ ಶಿಥಿಲ ಪಗೋಡಗಳನ್ನು ಇಂದಿಗೂ ಕಾಣಬಹುದು. ಆ ಕಾಲದ ಪ್ರಸಿದ್ಧ ಧಾರ್ಮಿಕ ಕಟ್ಟಡವೆಂದರೆ ಸೈಜಿಗಾನ್ ಪಗೋಡ. ಇಂದಿಗೂ ಪೂಜೆ ಮುಂತಾದ ಧಾರ್ಮಿಕ ವಿಧಿಗಳು ಇಲ್ಲಿ ಜರುಗುತ್ತಿದ್ದು ಇದೊಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಬುದ್ಧನ ಹಲ್ಲನ್ನು ಇಡಲು ಈ ಪಗೋಡವನ್ನು ಅನವ್ರತ ಪಾರ್ರಂಭಿಸಿದ್ದ. ಹನ್ನೊಂದನೆಯ ಶತಮಾನದಿಂದ ಹದಿಮೂರನೆಯ ಶತಮಾನದ ತನಕವೂ ಭಾರತೀಯ ಪ್ರಭಾವ ಮತ್ತು ಮಾನರ ಮತ್ತು ಮೈನ್‍ಮಾರ್‍ನ್ನರ ಕೌಶಲ್ಯ ಒಳಗೊಂಡ ಅನೇಕ ಕಟ್ಟಡಗಳು ನಿರ್ಮಿಸಲ್ಪಟ್ಟವು. ತಿಲುಇನ್ ಮಾನನಿಂದ ನಿರ್ಮಿಸಲ್ಪಟ್ಟ ಸುಂದರವಾದ ಆನಂದದೇವಾಲಯ ವಿನ್ಯಾಸ ಮತ್ತು ಅಲಂಕರಣದಲ್ಲಿ ಮೂಲತಃ ಮಾನ್ ಮತ್ತು ಭಾರತೀಯ ವೈಶಿಷ್ಟ್ಯವನ್ನು ಹೊಂದಿದೆ: ಆಕರ್ಷಣೀಯವಾಗಿರುವ ಮಹಾಬೋಧಿ ಮತ್ತು ತಿಲೊಮಿನ್ಲೋ ದೇವಾಲಯಗಳು ಈ ಕಾಲದಲ್ಲಿ ಪ್ರಾರಂಭವಾದುವು. ತಾಟಪಿನ್ಯು. ಗಡಾಪಾಲಿನ್ ಮತ್ತು ಮಿಂಗಲ್ ಜೇದಿ ಈ ಕಾಲದ ಇತರ ಪ್ರಸಿದ್ಧ ದೇವಮಂದಿರಗಳು, ಅನವ್ರತನ ಸಂತತಿಯ ಕಾಲ ಮೈನ್‍ಮಾರ್‍ದ ಕಲೆ ಮತ್ತು ವಾಸ್ತು ಶಿಲ್ಪಗಳ ಉಗಮ ಕಾಲವಾಗಿದ್ದು ಮೈನ್‍ಮಾರ್‍ದ ಸುವರ್ಣ ಕಾಲವಾಗಿತ್ತು.

	ಉತ್ತರ ಮೈನ್‍ಮಾರ್‍ದ ವಾ-ಪಾಲಉಂಗ್ ಬುಡಕಟ್ಟು ಜನರ ಮೇಲೆ ಪಗಾನರು ದಾಳಿಮಾಡಿದರು. ಇದರಿಂದಾಗಿ ಅವರು ಪಗಾನರ ವಿರುದ್ಧ ಮಂಗೋಲ ಚಕ್ರವರ್ತಿ ಸಹಾಯ ಕೋರಿದರು. 1273ರಲ್ಲಿ ಕುಬ್ಲೈಖಾನ್, ಪಗಾನರು ತನಗೆ ಶರಣಾಗಿ ಚೀನದ ಸಾರ್ವಭೌಮತ್ವವನ್ನು ಗೌರವಿಸುವಂತೆ ಕೇಳಿ ಮೂವರು ರಾಯಭಾರಿಗಳನ್ನು ಕಳುಹಿಸಿದ. ಇವರು ಯಾರೂ ಹಿಂದಿರುಗಲಿಲ್ಲ. ಆದ್ದರಿಂದ ಮಂಗೋಲ್ ಸೈನ್ಯ ಮೈನ್‍ಮಾರ್‍ದ ಮೇಲೆ ಆಕ್ರಮಣ ನಡೆಸಿ 1287ರಲ್ಲಿ ಪಗಾನ್ ನಗರವನ್ನು ವಶಪಡಿಸಿಕೊಂಡಿತು. ಇದರೊಂದಿಗೆ ಪಗಾನ್ ಸಾಮ್ರಾಜ್ಯ ಕೊನೆಗೊಂಡಿತು.

ಷಾನ್ ಸಂತತಿಯ ಕಾಲ: 1287-1531. ಕುಬ್ಲೈಖಾನ್ 1294ರಲ್ಲಿ ಮರಣ ಹೊಂದಿದ ಬಳಿಕ ಮೈನ್‍ಮಾರ್‍ದ ಮೇಲೆ ಮಂಗೋಲರ ಹತೋಟಿ ಸಡಿಲಿಸಿತು. ಚೀಣಿ ಪಡೆಗಳು ಮಧ್ಯ ಮೈನ್‍ಮಾರ್‍ದ ಮೇಲೆ ತಮ್ಮ ಹಿಡಿತ ಉಳಿಸಿಕೊಳ್ಳಲು ನಡೆಸಿದ ಎರಡು ದಾಳಿಗಳು ಯಶಸ್ವಿಯಾಗಲಿಲ್ಲ. ಮಂಗೋಲರ ದಾಳಿಗಳ ನಂತರ ಮೈನ್‍ಮಾರ್ ಅನೇಕ ಸಣ್ಣ ಸಂಸ್ಥಾನಗಳಾಗಿ ಒಡೆದು ಚೌಕ್ಸೇ ಗುಡ್ಡಪ್ರದೇಶಕ್ಕೆ ಸೇರಿದ ಷಾನ್ ಸಂತತಿಯ ರಾಜಕುಮಾರರ ಕೈಸೇರಿತು. ಇವರು ಪಗಾನ್ ರಾಜಸಂತತಿಗೆ ಅಪಾರ ಸೇವೆ ಸಲ್ಲಿಸಿದ್ದು, ಮಂಗೋಲರ ದಾಳಿಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಷಾನ್ ಸಂತತಿಯ ಮೂವರು ಸಹೋದರರ ಪೈಕಿ ಕಿರಿಯವನು 1324ರ ತನಕ ಆಳಿದ.

ಏತನ್ಮಧ್ಯೆ ಮಾನರೇ ಅಧಿಕ ಸಂಖ್ಯೆಯಲ್ಲಿದ್ದ ಕೆಳಮೈನ್‍ಮಾರ್‍ದಲ್ಲಿ ವರೇರು ಎಂಬ ಸಾಹಸಿ ಸೈನಿಕನೊಬ್ಬ 1280ರ ಹೊತ್ತಿಗೆ ತನ್ನ ಅಧಿಕಾರ ಸ್ಥಾಪಿಸಿದ, ಮಾರ್ಟಬಾನ್ ಇವನ ತಾತ್ಕಾಲಿಕ ರಾಜಧಾನಿ. ಈ ಹೊಸ ಮಾನ್ ರಾಜ್ಯ ಸಿಯಾಮಿನ, ಸುಕತಿ ರಾಜ್ಯದ ಅಧೀನ ರಾಜ್ಯವಾಗಿದ್ದು, ಕ್ರಮೇಣ ತನ್ನ ವ್ಯಾಪ್ತಿಯನ್ನು ಪೆಗು ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಿಗೆ ಹರಡಿ ಸಮುದ್ರ ಮೇಲಿನ ವ್ಯಾಪಾರ ಪ್ರಾರಂಭಿಸಿತು. ಈ ಕಾಲದಲ್ಲಿ ಮಾನರು ಹಡಗು ನಿರ್ಮಾಣಕ್ಕೆ ಪ್ರಸಿದ್ಧರಾಗಿದ್ದರು ಮತ್ತು ತಮ್ಮ ಅನೇಕ ಉತ್ಪನ್ನಗಳನ್ನು ಮುಸ್ಲಿಮ್ ರಾಜ್ಯವಾದ ಮಲಕ್ಕದಲ್ಲಿ ಮಾರಾಟ ಮಾಡುತ್ತಿದ್ದರು. ಹದಿನಾರನೆಯ ಶತಮಾನದ ಉತ್ತರಾರ್ಧ ತನಕ ಮೈನ್‍ಮಾರ್‍ನರಿಗೆ ರಾಜಕೀಯ ಪ್ರಾಬಲ್ಯ ಸಾಧಿಸಲಾಗಲಿಲ್ಲ. ಸಿತಾನ್ ಕಣಿವೆಯ ತೋವುಂಗನ್ನು ರಾಜಧಾನಿಯಾಗಿರಿಸಿಕೊಂಡ ಹೊಸ ರಾಜ್ಯವೊಂದು ಈ ವೇಳೆಗೆ ತಲೆಯೆತ್ತಿತ್ತು. ಈ ತನಕ ಭಾರತೀಯರು ಮತ್ತು ಅರಬ್ಬರು ಮೈನ್‍ಮಾರ್‍ದ ಸಾಗರಿಕ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದರು. ನೌಕೆಗಳ ಅಭಾವ ಅಥವಾ ಇಲ್ಲದಿರುವಿಕೆ ಮೈನ್‍ಮಾರ್‍ದ ಈ ಪರಿಸ್ಥಿತಿಗೆ ಕಾರಣವಾಗಿದ್ದಿತು. 1511ರಲ್ಲಿ ಪೋರ್ಚುಗೀಸರು ಮೈನ್‍ಮಾರ್‍ವನ್ನು ಪ್ರವೇಶಿಸಿದರು. ಇವರ ಆಸಕ್ತಿ ವ್ಯಾಪಾರದಲ್ಲಿದ್ದರೂ, ಇವರು ಮೈನ್‍ಮಾರ್‍ದ ದೊರೆ ಬಾಯಿನ್ನ ಉಂಗನಿಗೆ ಸೈನಿಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪೋರ್ಚುಗೀಸರ ಸಿಡಿಮದ್ದಿನ ಶಸ್ತ್ರಾಸ್ತ್ರಗಳು ಉಂಗನ ಜಯಗಳಿಗೆ ಕಾರಣವಾಗಿದ್ದು ಅವನ ವಿಶ್ವಾಸಗಳಿಸಲು ಸಾಧ್ಯವಾಯಿತು.

	ಟೂಉಂಗೊ ಸಂತತಿ: 1531-1752. ಪಗಾನ್ ಸಾಮ್ರಾಜ್ಯ ಅವನತಿ ಹೊಂದಿದ ಅನಂತರ ಸಿತಾನ್ ಕಣಿವೆಯ ಟೂಉಂಗೊ ಮೈನ್‍ಮಾರ್‍ದ ಹೊಸ ರಾಜಕೀಯ ಕೇಂದ್ರವಾಯಿತು ಪಾನರು 1527ರಲ್ಲಿ ಅವರು ಗೆದ್ದುಕೊಂಡ ಬಳಿಕ ಆ ಪ್ರದೇಶದಲ್ಲಿದ್ದ ಅನೇಕ ಮೈನ್‍ಮಾರ್ ಸಾಮಂತರು ಟಿೂಉಂಗೊವಿನಲ್ಲಿ ಆಶ್ರಯ ಪಡೆದರು. ಕ್ರಮೇಣ ಅವರು ಇಡೀ ದೇಶವನ್ನು ಮೈನ್‍ಮಾರ್‍ನ್ನರ ಅಧೀನಕ್ಕೆ ಒಳಪಡಿಸಿದರು. ಈ ವಂಶದ ಪ್ರಮುಖ ಹಾಗೂ ಪ್ರಥಮ ದೊರೆಯಾದ ತ್ಯಾಬೆನ್ ಶ್ವತಿ (1531-50) ಮಾನರ ಸಂಪದ್ಭರಿತ ಪೆಗು ರಾಜ್ಯ ಹಾಗೂ ಮಧ್ಯ ಮೈನ್‍ಮಾರ್‍ದ ಬಹುಭಾಗ ಗೆದ್ದುಕೊಂಡು ಪೆಗುವಿನಲ್ಲಿ ತನ್ನ ರಾಜಧಾನಿ ಸ್ಥಾಪಿಸಿದ, ಆದರೆ ಮಾನರು ದಂಗೆಯೆದ್ದು ಅವನನ್ನು ಕೊಂದರು. ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ತ್ಯಾಬೆನ್ ಶ್ವೆತಿಯ ಭಾವಬಾಯಿನ್ನ ಉಂಗ್ ಮಾನರ ದಂಗೆ ಅಡಗಿಸಿ 1551ರಲ್ಲಿ ದೊರೆಯಾದ. ಈತನ ವಿಜಯಗಳು ಬಹುಶಃ ಮೈನ್‍ಮಾರ್‍ದ ಇತಿಹಾಸದಲ್ಲೇ ಅಪೂರ್ವವಾದವು. ಷಾನರ ಆವ ಪ್ರದೇಶವನ್ನು ದೊಡ್ಡ ಸಂಸ್ಥಾನವಾದ ಷಾನ್ ಪ್ರಾಂತ್ಯವನ್ನೂ ಅಧೀನಪಡಿಸಿಕೊಂಡು ಮೈನ್‍ಮಾರ್‍ನ್ನರ ಸಾರ್ವಭೌಮತ್ವ ಸ್ಥಾಪಿಸಿದ. ಜೀಯೂನ್ ಮೈ ಮತ್ತು ಲಾಉಂಗ್ ಪ್ರಉಂಗ್ ಪ್ರದೇಶಗಳನ್ನು ಈತ ಗೆದ್ದುಕೊಂಡ. ಕಡೆಯದಾಗಿ ಆಯುತ್ತಾಯವನ್ನು ರಾಜಧಾನಿಯಾಗಿ ಹೊಂದಿದ್ದ ಥೈಲೆಂಡ್ ಮತ್ತು ಅದರ ಸಂಪದ್ಭರಿತ ಎಲ್ಲ ಸಂಸ್ಥಾನಗಳೂ ಈತನ ಅಧೀನಕ್ಕೆ ಒಳಪಟ್ಟವು. 1750ರ ದಶಕದಲ್ಲಿ ಬಾಯಿನ್ನುಉಂಗನು ಲಾವೋಸ್ ಪ್ರಾಂತ್ಯಗಳ ದಂಗೆ ಅಡಗಿಸುವಲ್ಲೆ ತನ್ನೆಲ್ಲ ಶಕ್ತಿ ವಿನಿಯೋಗಿಸ ಬೇಕಾಯಿತು. ಇವನು ತನ್ನ ಕೊನೆಯ ದಿನಗಳ ಅವಧಿಯಲ್ಲಿ ಬಂಗಾಲಕ್ಕೆ ಹೊಂದಿಕೊಂಡಂತಿದ್ದ ಅರಕಾನ್ ತೀರಪ್ರದೇಶವನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದ. ಆದರೆ ಈ ವಿಸ್ತಾರ ರಾಜ್ಯ ಇವನ ಮರಣಾನಂತರ ಹೆಚ್ಚು ಕಾಲ ಉಳಿಯಲಿಲ್ಲ. ಬರ್ಮಿಯರ ಉಪಟಳ ತಾಳಲಾರದೆ ಥೈಲೆಂಡಿಗೆ ಪಲಾಯನ ಮಾಡಿದ ಮಾನರು ಮೈನ್‍ಮಾರ್‍ದ ವಿರುದ್ಧ ಸಂಚು ನಡೆಸಿದರು. ಬಾಯಿನ್ನಉಂಗ್‍ನ ಮಗ ನಂದ ಬಾಯಿನ್ನನ ಆಡಳಿತ ಕಾಲದಲ್ಲೆ ಫ್ರಾ ನಾರೆತ್‍ನ ಮುಂದಾಳುತನ ಪಡೆದ ಥೈಲೆಂಡ್ ಸ್ವತಂತ್ರವಾಯಿತು. ಆಂತರಿಕ ದಂಗೆಗಳು ತಲೆದೋರಿದವು, ಇವುಗಳ ಜೊತೆಗೆ ಥೈಲೆಂಡ್ ಮತ್ತು ಅರಕಾನ್ ಮೈನ್‍ಮಾರ್‍ದ ಮೇಲೆ ಧಾಳಿಪ್ರಾರಂಭಿಸಿದುವು. ಪ್ರಬಲವಾದ ಆಡಳಿತ ಅಭಾವದಿಂದಾಗಿ ಮೈನ್‍ಮಾರ್ ಛಿದ್ರವಾಗಿ ಒಡೆದು ಹೋಯಿತು. 1599ರ ಅನಂತರ ಒಂದು ದಶಕದ ತನಕ ಕೆಳ ಮೈನ್‍ಮಾರ್‍ದಲ್ಲೆ ಉಂಟಾದ ಅಸ್ತವ್ಯಸ್ತ ಪರಿಸ್ಥಿತಿಯ ಸದುಪಯೋಗ ಪಡೆದು ರಿಬೇರೊ-ಡಿ-ಸೌಜ ಮತ್ತು ಫಿಲೆಪ್-ಡಿ-ಬ್ರೆಟೋ ಎಂಬ ಇಬ್ಬರು ಪೋರ್ಜುಗೀಸ್ ಮುಖಂಡರು, ಬರ್ಮೀಯರ ಹಿತರಕ್ಷಕರೆಂಬ ನೆಪದಿಂದ ಮಾನ್ ಪ್ರಾಂತ್ಯದ ಮೇಲೆ ತಮ್ಮ ಅಧಿಕಾರ ಸ್ಥಾಪಿಸಿ 1613ರ ತನಕ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. ಆದರೆ 1613ರಲ್ಲೆ ಬಾಯಿನ್ನಉಂಗ್‍ನ ಮೊಮ್ಮಗ ಅನ್‍ಉಕ್‍ಫೆಟ್ಲಾನನು ಮೈನ್‍ಮಾರ್‍ವನ್ನು ಪುನರ್‍ಸಂಘಟಿಸಿದ, ಪೆಗು ಈತನ ರಾಜಧಾನಿಯಾಗಿತ್ತು. ಜೀಯಾನ್ ಮೈಯನ್ನು ಪುನಃ ವಶಪಡಿಸಿಕೊಂಡರು, ಥೈಲೆಂಡಿನ ಮೇಲೆ ಆಕ್ರಮಣ ಮಾಡಲು ಉದ್ದೇಶಿಸಿದ. ಈ ವೇಳೆಗೆ ಆತನನ್ನು ಪದಚ್ಯುತಿಗೊಳಿಸಿ ಆತನ ಸಹೋದರ ತಾಲೂನ್ ಬಂದ ತಾಲೂನ್‍ರಾಜ್ಯ ವಿಸ್ತರಣ ನೀತಿ ಕೈಬಿಟ್ಟು, ರಾಜ್ಯದ ರಾಜಧಾನಿಯನ್ನು ಮೈನ್‍ಮಾರ್‍ದ ಸುರಕ್ಷಿತ ಸ್ಥಳವಾದ ಆವಕ್ಕೆ ವರ್ಗಾಯಿಸಿದ. ಇವನು ಮೈನ್‍ಮಾರ್‍ನ್ನರ ಸಂಪ್ರದಾಯ ಮತ್ತು ಪ್ರತ್ಯೇಕತಾ ನೀತಿಯನ್ನು ಪುನಃಶ್ಚೇತನಗೊಳಿಸಿದ. ಮಾನರ ಆಶ್ರಯದಾಣ ಕೆಳಮೈನ್‍ಮಾರ್‍ವನ್ನು 1852ರಲ್ಲೆ ಬ್ರಿಟಿಷರು ವಶಪಡಿಸಿಕೊಳ್ಳುವ ತನಕ ದುಃಸ್ಥಿತಿಯಲ್ಲೇ ಉಳಿಯಿತು. ಆವದ ರಾಜರು 1659-61ರ ಮಂಚುವಿನ ಉತ್ತರಾಧಿಕಾರಿಗಳ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಚೀನದೊಂದಿಗೆ ಯುದ್ಧದಲ್ಲಿ ತೊಡಗಿದರು. ಇದು ಅವರ ಸಂತತಿಯ ಅವಸಾನಕ್ಕೆ ನಾಂದಿಯಾಯಿತು. ಮಾನರ ರಾಷ್ಟ್ರೀಯ ಪ್ರಜ್ಞೆ 1740ರ ಅನಂತರ ಮತ್ತೆ ಪ್ರಬಲವಾಗತೊಡಗಿತು. ಈ ನಡುವೆ ಆವ ರಾಜಧಾನಿಯಾಗಿದ್ದ ಮೈನ್‍ಮಾರ್‍ನ್ ರಾಜ್ಯ ಯಾವ ಪ್ರಗತಿಯನ್ನೂ ಕಾಣಲಿಲ್ಲ. 1740ರಲ್ಲಿ ಮಾನರು ಬರ್ಮೀಯರ ದಾಸ್ಯದಿಂದ ಬಿಡುಗಡೆಯಾಗಿ ಸ್ವತಂತ್ರರಾದರು. ಪೆಗು ಮತ್ತೊಮ್ಮೆ ಇವರ ರಾಜಧಾನಿಯಾಯಿತು. 1752ರಲ್ಲಿ ಅವರು ಅವವನ್ನು ಆಕ್ರಮಿಸಿಕೊಂಡು ಟೂಉಂಗೂ ಸಂತತಿಯನ್ನು ಕೊನೆಗಾಣಿಸಿದರು.

	ಈ ವೇಳೆಗೆ ಭಾರತದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಡಚ್ಚರು ಮೈನ್‍ಮಾರ್‍ದ ತಾಲೂನ್‍ನ ಪ್ರಾಂತ್ಯದಲ್ಲಿ ತಮ್ಮ ವ್ಯಾಪಾರ ಕೇಂದ್ರ ತೆರೆದರು. ಮೊದಮೊದಲು ಅವರು ತಮ್ಮ ವ್ಯಾಪಾರದಲ್ಲಿ ಯಾವ ಪ್ರಗತಿಯನ್ನೂ ಕಾಣಲಿಲ್ಲ. ಆದರೆ ಹದಿನೇಳನೆಯ ಶತಮಾನದ ಕೊನೆಯ ವೇಳೆಗೆ ಇಂಗ್ಲಿಷರು ಸಿರಿಯಾಮ್‍ನಲ್ಲಿ ತಮ್ಮ ನೌಕೆಗಳ ದುರಸ್ತಿಗೆ ಒಂದು ಕೇಂದ್ರ ತೆರೆದರು. ಜೋಸೆಫ್ ಡ್ಯೂಪ್ಲೆಯ ಪ್ರೇರಣೆಯಿಂದಾಗಿ ಪಾಂಡಿಚೆರಿಯಲ್ಲಿದ್ದ ಫ್ರೇಂಚರೂ ಬ್ರಿಟಿಷರ ಹಾದಿ ಅನುಸರಿಸತೊಡಗಿದರು. 1730ರ ವೇಳೆಯಲ್ಲಿ ಇಂಗ್ಲಿಷ್ ಮತ್ತು ಫ್ರೆಂಚರು ಮೈನ್‍ಮಾರ್‍ದಲ್ಲಿ ತೇಗದ ಮರ ಬಳಸಿ ಹಡಗುಗಳನ್ನು ಕಟ್ಟಲು ಪ್ರಾರಂಭಿಸಿದರು. ಆದರೆ ಈ ವೇಳೆಗೆ ಉಂಟಾದ ಮಾನ್ ದಂಗೆಗಳ ಅವರ ಇಂಥ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡಿದವು. ಪಾಂಡಿಚೇರಿಯ ಗೌರ್ನರ್ ಆಗಿದ್ದ ಡೂಪ್ಲೆ ಮಾನರ ದಂಗೆಯಿಂದ ಉಂಟಾದ ಪರಿಸ್ಥಿತಿಯ ಉಪಯೋಗ ಪಡೆಯಲು ಪ್ರಯತ್ನಿಸಿದ. ಮಾನರ ದಂಗೆಗಳನ್ನು ಹತ್ತಿಕ್ಕಲು ಮೈನ್‍ಮಾರ್‍ನ್ನರಿಗೆ ನೆರವು ನೀಡುವ ನೆಪದಲ್ಲಿ ಮೈನ್‍ಮಾರ್‍ದಲ್ಲಿ ತಮ್ಮ ಪ್ರಾಬಲ್ಯ ಬೆಳಸಲು ಯೋಜಿಸಲಾಗಿತ್ತು. ಈ ಹಿನ್ನಲೆಯಲ್ಲಿ ತಮ್ಮ ಪ್ರತಿನಿಧಿಯೊಬ್ಬನನ್ನು ಪೆರ್ಗುನಲ್ಲಿ ನೆಲೆಗೊಳಿಸುವ ಏರ್ಪಾಟು ಮಾಡಿದ. ಇದಕ್ಕೆ ಪ್ರತಿಯಾಗಿ ಬ್ರಿಟಿಷರು 1753ರಲ್ಲಿ ಬೆಸಿನ್ ನದಿಯ ಮುಖಜ ಭೂಮಿಯ ಮೇಲಿನ ನಗ್ರೈಸನ್ನು ಅತಿಕ್ರಮಿಸಿದರು. ಮೇಲಣ ಮೈನ್‍ಮಾರ್‍ದ ಮೇಲೆ ಮಾನರು ಹೊಂದಿದ್ದ ಹತೋಟಿ ಕ್ಷೀಣಿಸತೊಡಗಿದ್ದ 1754ರ ವೇಳೆಗೆ ಬರ್ಮೀಯರ ವಿರೋಧ ತಪ್ಪಿಸಿಕೊಳ್ಳಲು ಅಲ್ಲಿಂದ ಪಲಾಯನ ಮಾಡತೊಡಗಿದ್ದರು. ಬರ್ಮೀಯರು ತಮ್ಮ ಹೊಸ ನಾಯಕ ಅಲವುಂಗ್‍ಪಾಯ ಎಂಬವನ ಮುಂದಾಳುತನದಲ್ಲಿ 1755ರಲ್ಲಿ ಮಾನರ ಮೇಲೆ ನಡೆಸಿದ ಬಿರುಸಿನ ಆಕ್ರಮಣದಲ್ಲಿ ಮೀನುಗಾರಿಕೆ ಕೇಂದ್ರವಾಗಿದ್ದ ದೇಗನ್ ಎಂಬ ಹಳ್ಳಿಯನ್ನು ವಶಪಡಿಸಿಕೊಂಡು ಅಲ್ಲೆ ರಂಗೂನ್ ಎಂಬ ಹೆಸರಿನ ನೌಕಾಬಂದರೊಂದನ್ನು ಸ್ಥಾಪಿಸಿದ. ನಗ್ರೈಸ್‍ನಲ್ಲಿ ನೆಲಸಿದ್ದ ಬ್ರಿಟಿಷರನ್ನು ಶಸ್ತ್ರಾಸ್ತ್ರಾ ಒದಗಿಸುವಂತೆ ಒತ್ತಾಯಿಸಿದ. 1756ರಲ್ಲಿ ಫ್ರೆಂಚ್ ಅಧಿಕಾರಿ ಬುನೊವನ್ನು ಕೊಂದು ಸಿರಿಯಾಮ್ ಅನ್ನು ನಾಶಮಾಡಿ ಪಾಂಡಿಚೇರಿಯಿಂದ ಅಲ್ಲಿಗೆ ಬಂದಿದ್ದ ಅನೇಕ ಫ್ರೆಂಚ್ ಹಡುಗಗಳಿಂದ ಶಸ್ತ್ರ್ತಾಸ್ತ್ರಗಳನ್ನು ವಶಪಡಿಸಿಕೊಂಡ. ಪೆಗುವನ್ನೊಳಗೊಂಡ ಮಾನರ ರಾಜ್ಯ ಮುಂದಿನ ವರ್ಷ ಈತನ ಕೈಸೇರಿತು.

	ಅಲವುಂಗ್ ಪಾಯಸಂತತಿ: 1752-1885. ಅಲವುಂಗ್‍ಪಾಯನು ಮೈನ್‍ಮಾರ್‍ದ ಕೊನೆಯ ರಾಜಸಂತತಿಯ ಸ್ಥಾಪಕ. ಈ ಮುಂಚೆ ತಾಉಂಗೂ ಸಂತತಿಯ ಅಧೀನದಲ್ಲಿದ್ದ ಎಲ್ಲ ಪ್ರದೇಶದ ಮೇಲೂ ತನ್ನ ಪ್ರಭುತ್ವ ಸ್ಥಾಪಿಸಿದ. ಮೈನ್‍ಮಾರ್‍ದ ಮೇಲೆ ಆಕ್ರಮಣ ನಡೆಸುತ್ತಿದ್ದ ಮಿತಿಗಳನ್ನು ಕ್ರೂರವಾಗಿ ಶಿಕ್ಷಿಸಿದ. ಟೂನ್ ದಂಗೆಕೋರರಿಗೆ ಸಹಾಯಮಾಡಿದರೆಂಬ ವದಂತಿಯ ಮೇರಿಗೆ ನಗ್ರೈಸ್‍ನಲ್ಲಿಯ ಬ್ರಿಟಷ್ ನೆಲೆಯನ್ನು ನಾಶಗೊಳಿಸಿದ, ಆಗ ಈಸ್ಟ್ ಇಂಡಿಯಾ ಕಂಪನಿ ಮೈನ್‍ಮಾರ್‍ದಲ್ಲಿದ್ದ ತನ್ನ ಎಲ್ಲ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತು. ಇಂಪಾಲವನ್ನು ಆಕ್ರಮಿಸಿಕೊಂಡು ಅಲ್ಲಿಯ ಸಾವಿರಾರು ನಿವಾಸಿಗಳನ್ನು ತನ್ನ ರಾಜ್ಯಕ್ಕೆ ರವಾನಿಸಿ ಸೈನ್ಯ ಮತ್ತು ಸೇವಕವೃತ್ತಿಗಳಿಗೆ ಉಪಯೋಗಿಸಿಕೊಂಡು. ಥೈಲೆಂಡಿನ ಮೇಲೆ ಆಕ್ರಮಣ ನಡೆಸಿ ಅದರ ರಾಜಧಾನಿಯಾಗಿದ್ದ ಆಯುತ್ತಾಯವನ್ನು ಮುತ್ತಿಗೆ ಹಾಕುವಾಗ ಆದ ಆಕಸ್ಮಿಕದಿಂದಾಗಿ 1760ರಲ್ಲಿ ಸತ್ತ.

	ಅಲವುಂಗ್ ಪಾಯ ಸಂತತಿಯ ಆಡಳಿತ ಕಾಲದ ಮೈನ್‍ಮಾರ್‍ದ ವಿಸ್ತರಣೆ 1824-26ರ ಆಂಗ್ಲೋ-ಬರ್ಮೀಯರ ಯುದ್ಧದಲ್ಲಿ ಮೈನ್‍ಮಾರ್‍ದ ಸೋಲಿನೊಂದಿಗೆ ಕೊನೆಗೊಂಡಿತು. ಈ ಸಂತತಿಯ ಹಿನ್‍ಬ್ಯೂಸಿಸ್ ಥೈಲೆಂಡ್ ಮೇಲೆ ಧಾಳಿಮಾಡಿ 1767ರಲ್ಲಿ ಆಯುತ್ತಾಯವನ್ನು ನಾಶಮಾಡಿದ. ಆದರೆ ಯುನಾನ್ ಕಡೆಯಿಂದ ನಡೆಸಿದ ಚೀನ ದಾಳಿಗಳಿಂದಾಗಿ ಅವನು ಗೆದ್ದ ಪ್ರದೇಶಗಳ ಮೇಲೆ ಹತೋಟಿ ಉಳಿಸಿಕೊಳ್ಳಲಾಗಲಿಲ್ಲ. ಆದರೆ 1782-1819ರ ತನಕ ಆಳಿದ ಈತನ ಮಗನಾದ ಬೋಧಕಾಯ ಥೈಲೆಂಡಿನ ಮೇಲೆ ಮೈನ್‍ಮಾರ್‍ದ ಪ್ರಭುತ್ವ ಸ್ಥಾಪಿಸಲು ಪುನಃ ಹೋರಾಟ ಪ್ರಾರಂಭಿಸಿದ. ಆದರೆ ಯಶಸ್ವಿಯಾಗಲಿಲ್ಲ. ಇವನು ಮಾನದ ದಂಗೆಗಳನ್ನು ಅಡಗಿಸಲು ಕೈಗೊಂಡ ಕ್ರಮಗಳಿಂದಾಗಿ ಭಯಗೊಂಡ ಮಾನರು ಬಹುಸಂಖ್ಯೆಯಲ್ಲಿ ಥೈಲೆಂಡಿಗೆ ಪಲಾಯನ ಮಾಡಿದರು.

	ಆಂಗ್ಲೋ-ಬರ್ಮೀಯರ ಯುದ್ಧಗಳು: 1784-85ರ ಬೋಧಕಾಯನ ಅರಕಾನ್ ರಾಜ್ಯದ ಮೇಲಿನ ವಿಜಯ ಆಂಗ್ಲೋ-ಬರ್ಮೀಯರ ಸಂಬಂಧದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿತು. ಸಾವಿರಾರು ಅರಾಕನಿಗಳು ಬ್ರಿಟಷ್ ನಿಯಂತ್ರಿತ ಚಿತ್ತಗಾಂಗ್ ಪ್ರದೇಶಕ್ಕೆ ಪಲಾಯನ ಮಾಡಿ ಅಲ್ಲಿಂದ ತಮ್ಮ ರಾಜ್ಯವನ್ನು ಹಿಂತಿರುಗಿ ಪಡೆಯುವ ಪ್ರಯತ್ನ ಮುಂದುವರಿಸಿದರು. ಅವರಿಗೆ ಆಶ್ರಯ ನೀಡಿದ ಬ್ರಿಟಿಷರು ಬರ್ಮೀಯರ ದ್ವೇಷವನ್ನು ಬಳಸಿಕೊಳ್ಳಬೇಕಾಯಿತು. ಮೈನ್‍ಮಾರ್ 1820ರಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿದ ಭಾರತದ ಅಸ್ಸಾಮ್ ಮತ್ತು ಮಣಿಪುರಗಳ ಮೇಲೆ ಬರ್ಮೀಯರು ಹಾಕಿದ ಬೆದರಿಕೆಯಿಂದಾಗಿ ಅವರು ಬ್ರಿಟಿಷರ ನೆರವಿಗಾಗಿ ಯಾಚಿಸಿದರು. ಬ್ರಿಟಿಷರು ಕಾರ್ಯೋನ್ಮುಖರಾದರು.

	ಮೊದಲನೆಯ ಬರ್ಮೀಯರ ಯುದ್ಧದ ಪರಿಣಾಮವಾಗಿ ಅಸ್ಸಾಮ್ ಮತ್ತು ಅರಕಾನಿನ ಉದ್ದವಾದ ತೀರಪ್ರದೇಶವನ್ನು ಮೈನ್‍ಮಾರ್ ಬ್ರಿಟಷರಿಗೆ ಒಪ್ಪಿಸಬೇಕಾಯಿತು. ಮುಂಜಾಗರೂಕತೆಯ ಕ್ರಮವಾಗಿ ಬರ್ಮೀಯರ ಮಂತ್ರಿಯೊಬ್ಬ ಕಲ್ಕತ್ತದಲ್ಲಿ ನೆಲಸುವಂತೆಯು ವ್ಯವಸ್ಥೆಯಾಯಿತು. ಆದರೆ ಈ ಕರಾರಿನಿಂದ ಸಮಸ್ಯೆ ಬಗೆ ಹರಿಯಲಿಲ್ಲ. ಆವದಿಂದ ಮೈನ್‍ಮಾರ್‍ದ ಪ್ರತಿನಿಧಿಯೊಬ್ಬ ಕಲ್ಕತ್ತದಲ್ಲಿ ನೆಲಸಲು ಒಪ್ಪದೆ, ಬ್ರಿಟಿಷ್ ಪ್ರತಿನಿಧಿ ಮಾತ್ರ ಆವದಲ್ಲಿ ಇರಲು ಬರ್ಮೀಯರು ಸಮ್ಮತಿಸಿದರು. ಬ್ರಿಟಿಷ್ ಪ್ರತಿನಿಧಿ ಮೂಲಕ ಇಂಡಿಯಾದಲ್ಲಿದ್ದ ಬ್ರಿಟಿಷ್ ಸರ್ಕಾರದ ಮೇಲೆ ಒತ್ತಾಯ ಹೇರಿ ಹಿಂದಿನ ಶಾಂತಿ ಒಪ್ಪಂದದಲ್ಲಿ ಕಳೆದುಕೊಂಡಿದ್ದ ಪ್ರದೇಶಗಳನ್ನು ಪುನಃ ಪಡೆಯುವುದು ಈ ಕ್ರಮದ ಉದ್ದೇಶವಾಗಿತ್ತು. 1830-37ರ ನಡುವೆ ಅವದಲ್ಲಿದ್ದ ಬ್ರಿಟಿಷ್ ಪ್ರತಿನಿಧಿ ಹೆನ್ರಿಬರ್ನಿ ಮೈನ್‍ಮಾರ್‍ದದೊರೆ ಬಾಗ್ಯಿದ ಮತ್ತು ಆತನ ಮಂತ್ರಿಮಂಡಲದ ಜೊತೆ ಉತ್ತಮ ತಿಳುವಳಿಕೆ ಹೊಂದಲು ಪ್ರಯತ್ನಿಸಿದ. ಆದರೆ 1837ರಲ್ಲಿ ನಡೆದ ದಂಗೆಯಿಂದಾಗಿ ಈ ಸಂಬಂಧಗಳು ಮುರಿದುಬಿದ್ದವು. ತರ್ರವಾಡಿ ಎಂಬಾತ ಮೈನ್‍ಮಾರ್‍ದ ದೊರೆಯಾದ. ಈತ 1826ರಲ್ಲಿ ಬ್ರಿಟಿಷರೊಡನೆ ಮಾಡಿಕೊಂಡಿದ್ದ ಶಾಂತಿ ಒಪ್ಪಂದವನ್ನು ನೇರವಾಗಿ ಧಿಕ್ಕರಿಸಿ ಬ್ರಿಟಿಷ್ ಪ್ರತಿನಿಧಿ ಮೈನ್‍ಮಾರ್‍ದಿಂದ ಹೊರಹೋಗಲು ಒತ್ತಾಯಿಸಿದ, ಮೈನ್‍ಮಾರ್ ಮತ್ತು ಬ್ರಿಟಿಷರ ನಡುವೆ ಮತ್ತೊಮ್ಮ ಯುದ್ಧ ಅನಿವಾರ್ಯವಾಯಿತು. ಪಾಗನ್‍ಮಿನ್‍ನ ದುರ್ಬಲ ಆಡಳಿತದ ಜೊತೆಗೆ, ಬ್ರಿಟಿಷ್ ಪ್ರಜೆಗಳ ಮೇಲೆ ರಂಗೂನಿನ ರಾಜ್ಯಪಾಲ ಎಸಗಿದ ಕ್ರೌರ್ಯ ಇಂಡಿಯಾದ ಗೌರ್ನರ್ ಜನರಲ್ ಆಗಿದ್ದ ಡಾಲ್ ಹೌಸಿಯನ್ನು ಕೆಣಕಿತು. 1852ರ ಎರಡನೆಯ ಬರ್ಮೀಯರ ಯುದ್ಧದಿಂದಾಗಿ ಸಂಪದ್ಭರಿತ ಪೆಗುಪ್ರಾಂತ ಬ್ರಿಟಿಷರ ವಶವಾಯಿತು. 1853ರಲ್ಲಿ ಪಾಗನ್‍ಮಿನನನ್ನು ಅಧಿಕಾರದಿಂದಿಳಿಸಿ, ಆತನ ಸ್ಥಾನದಲ್ಲಿ ಮಿಂಡನ್‍ಮಿನ್ ಎಂಬಾತನನ್ನು ನೇಮಿಸಲಾಯಿತು. ಮಿಂಡನ್‍ಮಿನ್ ಈ ರಾಜಸಂತತಿಯ ಪ್ರಸಿದ್ಧ ದೊರೆ ಎನಿಸಿಕೊಂಡ.

	ಮೈನ್‍ಮಾರ್‍ವನ್ನು ಆಧುನಿಕರಿಸುವ ದಿಸೆಯಲ್ಲಿ ಮಿಂಡನ್‍ಮಿನ್ ಅನೇಕ ಉಪಯುಕ್ತ ಕ್ರಮಕೈಗೊಂಡ. ನಾಣ್ಯಪದ್ಧತಿಯನ್ನು ಜಾರಿಗೆ ತಂದ. ದೂರವಾಣಿ ವ್ಯವಸ್ಥೆಯನ್ನು ರೂಪಿಸಿದ. ಸುಂಕ ಪದ್ಧತಿಯಲ್ಲಿ ಸುಧಾರಣೆಮಾಡಿದ. ತನ್ನ ಹೊಸ ರಾಜಧಾನಿಯಾದ ಮಾಂಡಲೇಯಲ್ಲಿ ಪ್ರಸಿದ್ಧ ಎರಡನೆಯ ಬೌದ್ಧ ಸಮ್ಮೇಳನವನ್ನು ಉದ್ಘಾಟಿಸಿದ. ಈತನ ಆಳ್ವಿಕೆಯ ಕೊನೆಯ ಕಾಲದಲ್ಲಿ ಮೈನ್‍ಮಾರ್‍ದ ವ್ಯಾಪಾರ ಮತ್ತು ವಾಣಿಜ್ಯಗಳ ಮೇಲೆ ಪ್ರಾಬಲ್ಯ ಸ್ಥಾಪಿಸಲು ಬ್ರಿಟಿಷರು ಮಾಡಿದ ಪ್ರಯತ್ನಗಳು ಬ್ರಿಟಿಷ್ ಮತ್ತು ಮೈನ್‍ಮಾರ್‍ದ ಸಂಬಂಧಗಳಲ್ಲಿ ಬಿರುಕು ಉಂಟುಮಾಡಿದವು. 1878ರಲ್ಲಿ ಮಿಂಡನ್ ಮರಣ ಹೊಂದಿದ ಅನಂತರ ರಾಷ್ಟ್ರೀಯ ವಿರೋಧಿ ಶಕ್ತಿಗಳು ಆತನ ಕಿರಿಯ ಮಗ ತಿಬಾನನ್ನು ಅಧಿಕಾರಕ್ಕೆ ತಂದು ಆತನ ಹೆಂಡತಿ ಸುಪಯಲತಳ ಮೂಲಕ ರಾಜ್ಯದ ಆಡಳಿತ ನಿಯಂತ್ರಿಸಲು ಪ್ರಯತ್ನಿಸಿದರು. ತಿಬಾ ಬ್ರಿಟಿಷರ ವಿರುದ್ಧ ಅನುಸರಿಸಿದೆ ಮಿತ್ರ ವಿರೋಧಿ ನೀತಿಯಿಂದಾಗಿ ವಾಣಿಜ್ಯ ಸಂಬಂಧಗಳು ಮುರಿದು ಬಿದ್ದು. ಈ ಸಂಬಂಧದಲ್ಲಿ ನೇಮಿಸಿದ್ದ ಬ್ರಿಟಿಷ್ ಪ್ರತಿನಿಧಿ ಮೈನ್‍ಮಾರ್‍ದಿಂದ ವಾಪಸ್ ಆದ. ತಿಬಾ ಫ್ರೆಂಚರೊಂದಿಗೆ ನಡೆಸಿದ ಸಂಧಾನಗಳು (1883-85) ಮತ್ತು ಬಾಂಬೆ-ಮೈನ್‍ಮಾರ್ ವಾಣಿಜ್ಯ ಸಂಘಕ್ಕೆ ಸೇರಿದ ಅಪಾರ ಹಣವನ್ನು ಕಬಳಿಸಿದ್ದು ಇವು ಮೈನ್‍ಮಾರ್‍ನ್ನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬ್ರಿಟಿಷರಿಗೆ ಪ್ರೇರಣೆ ನೀಡಿದುವು. ಬ್ರಿಟಿಷರು ನೀಡಿದ ಎಚ್ಚರಿಕೆಯನ್ನು ತಿಬಾ ತಳ್ಳಿಹಾಕಿದಾಗ ಮೂರನೆ ಮೈನ್‍ಮಾರ್ ಯುದ್ಧ ಪ್ರಾರಂಭವಾಯಿತು. ನವೆಂಬರ್ 1885ರಲ್ಲಿ ಬ್ರಿಟಿಷ್ ಸೇನಾ ತುಕಡಿಯನ್ನು ಮಾಂಡಲೇಯನ್ನು ವಶಪಡಿಸಿಕೊಳ್ಳಲು ಕಳುಹಿಸಲಾಯಿತು. ತಿಬಾ ಮತ್ತು ಸೂಪಯಲತಳನ್ನು ಭಾರತಕ್ಕೆ ಕಳುಹಿಸಿ ಇಡೀ ಮೈನ್‍ಮಾರ್ ಮತ್ತು ಅದರ ರಾಜ್ಯಗಳನ್ನು ಬ್ರಿಟಿಷರ ಭಾರತ ಸಾಮ್ರಾಜ್ಯದೊಂದಿಗೆ ಸೇರಿಸಲಾಯಿತು.

	ಬ್ರಿಟಿಷ್ ಮೈನ್‍ಮಾರ್: 1862ರಲ್ಲಿ ಪೆಗು, ಅರಕಾನ್ ಮತ್ತು ತನಸರಮ್ ಒಂದುಗೂಡಿಸಿ ಬ್ರಿಟಿಷ್ ಮೈನ್‍ಮಾರ್‍ವನ್ನು ರಚಿಸಲಾಯಿತು. ರಾಷ್ಟ್ರೀಯ ಭಾವನೆ ವಿರುದ್ಧ ಬ್ರಿಟಿಷರು ಮೈನ್‍ಮಾರ್‍ದ ಉಳಿದ ಭಾಗಗಳನ್ನು 1886ರಲ್ಲಿ ವಶಪಡಿಸಿಕೊಂಡು ಶಾಂತಿ ಏರ್ಪಡಿಸಲು ಅನೇಕ ವರ್ಷಗಳೇ ಹಿಡಿದುವು. ಭಾರತದಲ್ಲಿ ರೂಪಿಸಿದ್ದ ಬ್ರಿಟಿಷ್ ಆಡಳಿತ ಮಾದರಿಯನ್ನು ಮೈನ್‍ಮಾರ್‍ದಲ್ಲಿ ಆಚರಣೆಗೆ ತರಲು ಅನೇಕ ಆಡಳಿತ ಪುನ ರಚನೆಯನ್ನು ಬ್ರಿಟಿಷರು ಕೈಗೊಂಡರು. ಚುನಾವಣೆ ತತ್ತ್ವಗಳ ಆಧಾರದ ಮೇಲೆ ಸ್ಥಳೀಯ ಸರ್ಕಾರ ಸ್ಥಾಪಿಸಲು ಪ್ರಯತ್ನ ಮಾಡಿದರು. ಆದರೆ ಈ ವ್ಯವಸ್ಥೆಯ ಕಾರ್ಯದಕ್ಷತೆ ಸಂಪೂರ್ಣವಾಗಿ ಉನ್ನತ ಅಧಿಕಾರ ವರ್ಗದ ಮೇಲೆ ಆಧಾರಗೊಂಡಿತು. 1909ರ ಮಿಂಟೊ-ಮಾರ್ಲೆ ಸುಧಾರಣಾ ನೀತಿಯನ್ನು ಅನುಸರಿಸಿ ಶಾಸಕಾಂಗ ಸಭೆಯನ್ನು ಸ್ಥಾಪಿಸುವಂತಾಯಿತು. ಆದರೆ ಮಹಾ ಚುನಾವಣಾ ಪದ್ಧತಿಯನ್ನು ಜಾರಿಗೆ ತರಲಿಲ್ಲ. ಒಂದನೆಯ ಮಹಾಯುದ್ಧದ ಕಾಲದಲ್ಲಿ ಮೈನ್‍ಮಾರ್‍ದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿಸುವುದು ಬ್ರಿಟಿಷರ ಉದ್ದೇಶವಾಗಿತ್ತೆಂದು ತಿಳಿದುಬರುತ್ತದೆ. 1919ರ ಭಾರತ ಸರ್ಕಾರದ ನಿಯಮದ ರೀತಿ ಭಾರತೀಯ ಪ್ರಾಂತ್ಯಗಳಲ್ಲಿ ದ್ವಿಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದು ಅದನ್ನು ಮೈನ್‍ಮಾರ್‍ಕ್ಕೆ ಅನ್ವಯಿಸಿದಾಗ ಅಪಾರ ವಿರೋಧ ವ್ಯಕ್ತವಾಗಿ ಆ ಪದ್ಧತಿಯನ್ನು ಮೈನ್‍ಮಾರ್‍ಕ್ಕೂ ವಿಸ್ತರಿಸಲಾಯಿತು. ದೆಹಲಿಯ ಸಭೆಯಲ್ಲಿ ಮೈನ್‍ಮಾರ್ ಐದು ಸ್ಥಾನ ಪಡೆಯಿತು. ಆ ತನಕ ಬ್ರಿಟಿಷರಿಗೆ ಮಾತ್ರವೇ ಮೀಸಲಾಗಿದ್ದ ಶ್ರೇಷ್ಠ ಸರ್ಕಾರಿ ಹುದ್ದೆಗಳಲ್ಲಿ ಅರ್ಧದಷ್ಟನ್ನು ಬರ್ಮೀಯರಿಗೂ ನೀಡಲಾಯಿತು. 1937ರಲ್ಲಿ ಮೈನ್‍ಮಾರ್‍ವನ್ನು ಭಾರತದಿಂದ ಪ್ರತ್ಯೇಕಿಸಿ ಬ್ರಿಟಿಷ್ ಪಾರ್ಲಿಮೆಂಟಿನ ನೇರ ಆಡಳಿತಕ್ಕೆ ಒಳಪಡಿಸಿ ಸ್ವಯಂ ಸರ್ಕಾರ ರಚನೆಯತ್ತ ಕ್ರಮ ಕೈಗೊಳ್ಳಲಾಯಿತು. ಎರಡು ಸದನಗಳ ಹತ್ತು ಮಂತ್ರಿಗಳನ್ನು ಒಳಗೊಂಡ ಒಂದು ಮಂತ್ರಿ ಮಂಡಲವನ್ನು ಸಾಮಾನ್ಯ ಆಡಳಿತ ನಿರ್ವಹಣೆಗೆ ನೇಮಿಸಲಾಯಿತು.

	1935ರ ಪುನರೂಪಿತ ಸಂವಿಧಾನ ಪ್ರಕಾರ ಮೈನ್‍ಮಾರ್‍ದಲ್ಲಿ ಪ್ರಥಮ ಚುನಾವಣೆ 1936ರಲ್ಲಿ ನಡೆಯಿತು. ಆದರೆ ಯಾವ ಪಕ್ಷವೂ ಸ್ಪಷ್ಟ ಬಹುಮತ ಗಳಿಸದೆ ಪಕ್ಷೇತರ ಅಭ್ಯರ್ಥಿಗಳೇ ಹೆಚ್ಚಾಗಿದ್ದು ಸಂಯುಕ್ತ ಸರ್ಕಾರ ರಚಿಸಲು ಅಗತ್ಯವಾದ ಹೊಂದಾಣಿಕೆ ಮತ್ತು ಮನೋಭಾವನೆ ಕಂಡುಬರಲಿಲ್ಲ. ಇದರಿಂದಾಗಿ, ಬುಮ ಎಂಬ ನ್ಯಾಯವಾದಿ ತನ್ನ ಕೆಲವು ಅನುಯಾಯಿಗಳು, ಅಲ್ಪಸಂಖ್ಯಾತ ಪ್ರತಿನಿಧಿಗಳು ಹಾಗೂ ಬ್ರಿಟಿಷ್ ಸದಸ್ಯರನ್ನೊಳಗೊಂಡ ಮೈನ್‍ಮಾರ್‍ದ ಪ್ರಥಮ ಮಂತ್ರಿಮಂಡಲ ರಚಿಸಿದ. ಈತ ಎರಡು ವರ್ಷಗಳು ಅಧಿಕಾರಾವಧಿಯಲ್ಲಿ ಮಾಡಿದ ಮುಖ್ಯ ಸುಧಾರಣೆಗಳಲ್ಲಿ ಭೂ ಒಡತನದು ಹಕ್ಕು. ಭೂಮಿಯನ್ನು ಪರಭಾರೆ ಮಾಡುವ ವಿಧಾನ ಮತ್ತು ಭೂ ಅಭಿವೃದ್ಧಿಗೆ ಅಗತ್ಯವಾದ ಹಣಕಾಸಿನ ನೆರವಿಗೆ ಸಂಬಂಧಪಟ್ಟವಾಗಿದ್ದುವು. 1938ರ ಮಧ್ಯಭಾಗದಲ್ಲಿ ಬಮಾನ ರಾಜಕೀಯ ವಿರೋಧಿಗಳು ಪ್ರಾರಂಭಿಸಿದ ಆಂದೋಲನ ಕೈಗಾರಿಕಾ ಚಳುವಳಿ ಹಾಗೂ ವಿದ್ಯಾರ್ಥಿ ಮುಷ್ಕರಗಳು 1939ರ ಪ್ರಾರಂಭದ ವೇಳೆಗೆ ಶಾಸಕಾಂಗದಲ್ಲಿ ಬಹುಮತವನ್ನು ಅವರು ಕಳೆದುಕೊಳ್ಳುವಂತಾಯಿತು.

	ಬಮಾನ ಅನಂತರ ಯು ಪು ಎಂಬಾತ ಮಂತ್ರಿಮಂಡಲ ರಚಿಸಿದ. ಇವನ ಆಡಳಿತ ಕಾಲದಲ್ಲಿ ಹಳ್ಳಿಗಳ ಆಡಳಿತ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆಗಳನ್ನು ಜಾರಿಗೆ ತಂದು ಪ್ರಜಾಸತ್ತಾತ್ಮಕ ಅಂಶಗಳನ್ನು ಅಳವಡಿಸಲಾಯಿತು. ಯು ಪುನ ಅಧಿಕಾರ ಅಲ್ಪಕಾಲದ್ದಾಗಿದ್ದು ತನ್ನ ಬೆಂಬಲಿಗನೇ ಆಗಿದ್ದ ಯು ಸಾ ಎಂಬ ಪತ್ರಿಕೋದ್ಯಮಿಗೆ 1940ರಲ್ಲಿ ಸ್ಥಾನ ಬಿಟ್ಟುಕೊಡಬೇಕಾಯಿತು.

	1939ರಲ್ಲಿ ಎರಡನೆಯ ಮಹಾಯುದ್ಧ ಸ್ಫೋಟಗೊಂಡ ವೇಳೆಗೆ ಉಚ್ಚಾಟಿತ ಬಮಾನ ಮುಂದಾಳುತನದ ಫ್ರೀಡಮ್ ಬ್ಲಾಕ್ ಅಸ್ತಿತ್ವಕ್ಕೆ ಬಂದಿತು. ಈ ಪಕ್ಷ ಬ್ರಿಟನ್ನಿನೊಡನೆ ಎರಡನೆಯ ಮಹಾಯುದ್ಧದಲ್ಲಿ ಸಹಕರಿಸಲು ಯುದ್ಧದ ಅನಂತರ ಬ್ರಿಟನ್ ಮೈನ್‍ಮಾರ್‍ಕ್ಕೆ ಸ್ವಾತಂತ್ರ್ಯವನ್ನು ನೀಡಬೇಕೆಂಬ ಷರತ್ತನ್ನು ಹಾಕಿತು. ಪರಿಣಾಮವಾಗಿ ಈ ಪಕ್ಷದ ಮುದಾಳುಗಳಾಗಿದ್ದ ಬುಮಾ ತಾಕಿನ್ ಮುಂತಾದವರನ್ನು ಸೆರೆಮನೆಗೆ ಕಳುಹಿಸಲಾಯಿತು. ವ್ಯತಿರಿಕ್ತನಾಗಿ ಈ ಹಿಂದೆ ಉಚ್ಛಾಟಸಲ್ಪಟ್ಟಿದ್ದ ಯು ಪು ಯಾವ ಷರತ್ತು ಇಲ್ಲದೆ ಜರ್ಮನಿಯ ನಾಟ್ಸಿಗಳ ವಿರುದ್ಧ ಬ್ರಿಟಿಷ್ ಹೋರಾಟದಲ್ಲಿ ಪಾಲ್ಗೊಳ್ಳಲು ಒಪ್ಪಿದ. ಈ ವೇಳೆಗೆ ಅಧಿಕಾರದಲ್ಲಿದ್ದ ಯು ಸಾ ತನ್ನ ಸ್ವಂತ ಹಿತದೃಷ್ಟಿಯಿಂದ ಬ್ರಿಟಿಷ್‍ರೊಡನೆ ಸಹಕರಿಸಲು ಒಪ್ಪಿದ. ಸಂದರ್ಭದ ಪ್ರಯೋಜನ ಪಡೆದು ಪತ್ರಿಕೆಗಳನ್ನು ಮಟ್ಟಹಾಕಿ ಆಂತರಿಕ ಗೊಂದಲ ಹತ್ತಿಕ್ಕುವ ಪ್ರಯತ್ನದೊಂದಿಗೆ ತನ್ನ ರಾಜಕಿಯ ವಿರೋಧಿಗಳ ಸದ್ದಡಗಿಸುವ ಪ್ರಯತ್ನವನ್ನು ಮಾಡಿದ. ಶ್ರೇಷ್ಠ ಸರ್ಕಾರಿ ಹುದ್ದೆಗಳನ್ನು ಬರ್ಮಿಯರಿಗೆ ಮೀಸಲಿಡುವ, ಉಚಿತ ಪ್ರಾಥಮಿಕ ಶಿಕ್ಷಣ ನೀಡುವ ಬೌದ್ಧ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿ ಮತ್ತು ಶಿಕ್ಷಣ ಮಾಧ್ಯಮವಾಗಿ ಇಂಗ್ಲಿಷನ್ನು ತೆಗೆದು ಹಾಕುವ ಮುಂತಾದ ಅನೇಕ ಕ್ರಮಗಳಿಂದ ಈತ ರಾಷ್ಟ್ರದ ಬೆಂಬಲವನ್ನು ಗಳಿಸಿದ. 1941 ಡಿಸೆಂಬರಿನಲ್ಲಿ ಯುದ್ಧ ಪ್ರಪಂಚದ ಎಲ್ಲ ಭಾಗಗಳಿಗೂ ವ್ಯಾಪಿಸಿದಾಗ ಯು ಸಾ ಬ್ರಿಟಿಷ್ ಪ್ರಧಾನಿ ಚರ್ಚಿಲ್ಲರನ್ನೂ ಭೇಟಿಯಾಗಿ ಯುದ್ಧದ ಅನಂತರ ಮೈನ್‍ಮಾರ್‍ಕ್ಕೆ ಸ್ವತಂತ್ರ ನೀಡುವಂತೆ ಒತ್ತಾಯಿಸಿದ. ಆದರೆ ಈ ದಿಸೆಯಲ್ಲಿ ವಿಫಲನಾಗಿ ಅಮೇರಿಕದ ಮುಂಖಾಂತರ ಮೈನ್‍ಮಾರ್‍ಕ್ಕೆ ಹಿಂತಿರುಗುವಾಗ ಬ್ರಿಟಿಷರ ವಿರುದ್ಧ ಜಪಾನಿನೊಡನೆ ಸಮಾಲೋಚನೆಯಲ್ಲಿ ತೊಡಗಿದ್ದ ಆರೋಪಕ್ಕೊಳಗಾಗಿ ಈಜಿಪ್ಟಿನಲ್ಲಿ ಬಂಧಿಸಲ್ಪಟ್ಟು ಉಂಗಾಂಡದ ಕಾರಾಗೃಹವಾಸಕ್ಕೆ ಕಳುಹಿಸಲ್ಪಟ್ಟ.

	ಎರಡನೆಯ ಮಹಾಯುದ್ಧದ ವೇಳೆ ಬ್ರಿಟಿಷ್-ಭಾರತದ ಮೇಲೆ ಜಪಾನ್ ಉದ್ದೇಶಿಸಿದ್ದ ಆಕ್ರಮಣ ಕಾರ್ಯಾನುಚರಣೆಗೆ ಮುಖ್ಯಸ್ಥಾವರವಾಗಿ ಮೈನ್‍ಮಾರ್‍ವನ್ನು ಬಳಸಿಕೊಳ್ಳುವುದು ಜಪಾನಿನ ಉದ್ದೇಶವಾಗಿತ್ತು. ತನ್ನ ಈ ಯೋಜನೆಯಂತೆ ಯಶಸ್ಸನ್ನು ಸಾಧಿಸಿ ಸಿತಾನ್ ನದಿಯ ಕೆಳಪ್ರದೇಶದ ಮೇಲೆ ಜಪಾನ್ ಹತೋಟಿ ಪಡೆಯಿತು. 1942 ಮಾರ್ಚ್‍ನಲ್ಲಿ ಬ್ರಿಟಿಷ್ ಪಡೆಗಳು ಇಲ್ಲಿಂದ ನಿರ್ಗಮಿಸಿ ಉತ್ತರದಲ್ಲಿ ಇರಾವಾಡೀ ನದಿಯ ಕಣಿವೆ ಪ್ರದೇಶದತ್ತ ನಡೆದುವು. ರಂಗೂನ್ ತೆರವಾಯಿತು. ಅಮೆರಿಕ ಸಂಯುಕ್ತಸಂಸ್ಥಾನದ ಮಿಲಿಟರಿ ಜನರಲ್ ಜೋಸೆಫ್ ಸ್ಟಿಲ್ವಿಲ್‍ನ ನೇತೃತ್ವದಲ್ಲಿ ಚೀನೀ ಸೈನ್ಯ ಪಡೆ ಜಪಾನ್‍ನ ಸಿತಾನ್ ಕಣಿವೆ ಪ್ರದೇಶದಲ್ಲಿಯ ಮುನ್ನಡೆಯನ್ನು ಕೆಲಕಾಲದ ತನಕ ತಡೆಹಿಡಿದಿದ್ದು ಅನಂತರ ಜಪಾನಿ ಪಡೆಗಳ ಕರೆನ್ನಿ ಮತ್ತು ಷಾನ್ ಪ್ರಸ್ಥಭೂಮಿಯಲ್ಲಿಯ ಆಕ್ರಮಣದಿಂದಾಗಿ ಹಿಮ್ಮೆಟ್ಟಬೇಕಾಯಿತು.

	ಜಪಾನ್ ಆಕ್ರಮಿತ ಮೈನ್‍ಮಾರ್‍ದಲ್ಲಿ ಮಾಜಿ ಪ್ರಧಾನಿಯಾಗಿದ್ದ ಬ ಮಾನನ್ನು ನೇಮಿಸಲಾಯಿತು. ಈತ ಜಪಾನಿನ ಕೈಗೊಂಬೆಯಾಗಿದ್ದು ಜಪಾನಿನ ಇಚ್ಛೆಯ ಮೇರೆಗೆ ಆಡಳಿತ ನಿರ್ವಹಿಸುತ್ತಿದ್ದ. ಜಪಾನಿನ ಆಕ್ರಮಣ ಕಾಲದಲ್ಲಿ ಜನಜೀವನ ದುರ್ಬರವಾಗಿದ್ದಿತು. ಬ್ರಿಟಿಷ್ ಇಂಡಿಯದ ಮೇಲಿನ ಆಕ್ರಮಣಕ್ಕಾಗಲಿ, ಮಿತ್ರ ರಾಷ್ಟ್ರಗಳ ಪ್ರತಿ ಆಕ್ರಮಣದ ರಕ್ಷಣೆಯ ನೆಲೆಯಾಗಿ ಆಗಲಿ ಮೈನ್‍ಮಾರ್‍ದ ಪ್ರಾಮುಖ್ಯವನ್ನು ಮನಗಂಡ ಜಪಾನ್ 1943ರಲ್ಲಿ ಬುಮಾನ ಆಡಳಿತಕ್ಕೆ ಕೆಲವು ಹೆಚ್ಚಿನ ಅಧಿಕಾರ ಸ್ವಾಯತ್ತತೆ ನೀಡಿತು. ಸ್ವತಂತ್ರವಾದ ಪೂರ್ವಭಾವಿ ಸಿದ್ಧತಾ ಸಮಿತಿಯೊಂದು 1943ರ ಮೊದಲ ಭಾಗದಲ್ಲಿ ಸಂವಿಧಾನವೊಂದನ್ನು ರೂಪಿಸಿತು ಮತ್ತು 1943ರ ಆಗಸ್ಟ್‍ನಲ್ಲಿ ಮೈನ್‍ಮಾರ್‍ದ ಸ್ವಾತಂತ್ರವನ್ನು ಆಚರಿಸಲಾಯಿತು. ಮೈನ್‍ಮಾರ್‍ದ ಅಧಿಪತಿಯಾಗಿದ್ದ ಬ ಮಾನ ಅನುಯಾಯಿಗಳು ಮತ್ತು ಅಂಗ್‍ಸಾನ್ ಮುಖಂಡತ್ವ ಪಡೆದ ತಾಕಿನ್ ಗುಂಪಿನವರು ಇವರನ್ನು ಒಳಗೊಂಡು ಮಂತ್ರಿಮಂಡಲ ರಚಿಸಲಾಯಿತು. ಬರ್ಮಾ ಅಮೆರಿಕ ಮತ್ತು ಬ್ರಿಟನ್‍ಗಳ ಮೇಲೆ ಯುದ್ಧ ಸಾರಿದ. ಜಪಾನೀಯರಿಂದ ಬೆಂಬಲಿಸಲ್ಪಟ್ಟ ಸುಭಾಷ್ ಚಂದ್ರಬೋಸರ ನೇತೃತ್ವದಲ್ಲಿ ರೂಪುಗೊಂಡಿದ್ದ ಭಾರತ ರಾಷ್ಟ್ರೀಯ ಸೇನೆಯ ಜೊತೆಗೂಡಿ ಬರ್ಮಾ 1944ರಲ್ಲಿ ಉದ್ದೇಶಿಸಿದ್ದ ಭಾರತ ಮೇಲಿನ ಧಾಳಿಯಲ್ಲಿ ಪಾಲ್ಗೊಂಡ. ಆದರೆ ಈತನ ಮಂತ್ರಿ ಮಂಡಲದಲ್ಲಿದ್ದ ಕೆಲವು ತಾಕಿನ್ ಗುಂಪಿನ ಜಪಾನ್ ವಿರೋಧಿ ಸದಸ್ಯರು ಭಾರತದ ತಮ್ಮ ನಿಕಟವರ್ತಿಗಳೊಡನೆ ಕೂಡಿಕೊಂಡು ಜಪಾನ್ ವಿರೋಧಿ ಸಂಚು ನಡೆಸಿದರು.

	ಮಿತ್ರರಾಷ್ಟ್ರಗಳ ಪಡೆಯ ಸಹ ಮುಖ್ಯದಳಪತಿಯಾಗಿದ್ದ ಜನರಲ್ ಜೋಸೆಫ್ ಸ್ಟಿಲ್ವೆಲ್ ಜಪಾನಿನ ವಿರುದ್ಧ ಪ್ರತ್ಯಾಕ್ರಮಣವನ್ನು ನಡೆಸುವಲ್ಲಿ ಬ್ರಿಟಿಷರು ಮಾಡಿದ ವಿಳಂಬದಿಂದ ವಿಚಲಿತನಾದ. ಪ್ರಬಲ ಹಾಗೂ ಸುರಕ್ಷಿತ ಮಾರ್ಗ ಬ್ರಿಟನ್ನಿನದಾಗಿತ್ತು ಮೌಂಟ್‍ಬ್ಯಾಟಿನ್ ಬ್ರಿಟಿಷ್ ಆಫ್ರಿಕದಿಂದ ಹೆಚ್ಚು ಸೇನೆಯನ್ನು ಭಾರತಕ್ಕೆ ತಂದು ಜನಬಲ ಹಾಗೂ ಸಂಪತ್ತನ್ನು ಕ್ರೋಢೀಕರಿಸಿ ಅನಂತರ ಜಪಾನಿಯರು ತಮ್ಮನ್ನು ಸಮೀಪಿಸಿದವರೆಗೆ ಕಾಯಲು ನಿರ್ಧರಿಸಿದ. ಪ್ರತ್ಯಾಕ್ರಮಣ ಕೈಗೊಂಡ ಬ್ರಿಟಿಷ್ ಭಾರತೀಯ ಹಾಗೂ ಆಫ್ರಿಕದ ಸೇನಾ ತುಕಡಿಗಳು ಮಳೆಯ ಹಾವಳಿ ಎದುರಿಸಬೇಕಾಗಿ ಬಂದರೂ ವಾಯುಪಡೆಯ ಸರಬರಾಜು ಕಾರ್ಯದ ಯಶಸ್ವಿ ನಿರ್ವಹಣೆಯ ಅನುಕೂಲ ಹೊಂದಿದ್ದವು. 1944ರ ಪ್ರಾರಂಭದಲ್ಲಿ ಅರಕಾನ್-ಚಿತ್ತಗಾಂಗ್ ಕರಾವಳಿ ಪ್ರದೇಶದಲ್ಲಿ ಜಪಾನ್ ನಡೆಸಿದ ಸತತ ಧಾಳಿಗಳು ಮುರಿದುಬಿದ್ದುವು.

	ಮೈನ್‍ಮಾರ್‍ದ ಮೇಲಿನ ಕೊನೆಯ ಹಂತದ ಆಕ್ರಮಣದಲ್ಲಿ ಮಿತ್ರರಾಷ್ಟ್ರ ಪಡೆಗಳು ಪ್ರಮುಖ ಬಂದರಾದ ರಂಗೂನನ್ನು ತಲುಪುವ ಪ್ರಯತ್ನಕ್ಕೆ ಅಚಲ ವಿರೋಧ ತೋರಿದುವು. ಈ ವೇಳೆಗೆ ಪ್ರಾರಂಭವಾದ ಮಳೆಯಿಂದಾಗಿ ಬ್ರಿಟಷ್ ಸರಬರಾಜು ವ್ಯವಸ್ಥೆಗೆ ಉಂಟಾದ ಅಡ್ಡಿಯಿಂದಾಗಿ ರಂಗೂನನ್ನು ವಶಪಡಿಸಿಕೊಳ್ಳುವ ಬ್ರಿಟಿಷ್ ಪ್ರಯತ್ನ ಕೈಗೊಡಲಿಲ್ಲ. ಈ ಮಿಲಿಟರಿ ಕಾರ್ಯಚರಣೆಯ ಹಿನ್ನಲೆಯಲ್ಲಿ ಕೆಳಮೈನ್‍ಮಾರ್‍ದಲ್ಲಿ ಜಪಾನನ್ನು ಸೋಲಿಸಲು ತಾಕಿನ್ ಗುಂಪಿನ ಅಂಗ್‍ಸಾನ್ ಮತ್ತು ಪ್ಯಾಸಿಸ್ಟ್ ವಿರೋಧಿ ಪಡೆಯ ಬೆಂಬಲವನ್ನು ಲಾರ್ಡ್‍ಲೂಯಿ ಮೌಂಟ್ ಬ್ಯಾಟನ್ ಒಪ್ಪಿಕೊಂಡ. 1945 ಮೇ 1ರಂದು ಜಪಾನಿಯರು ಕಡೆಯದಾಗಿ ಸೋತು ಮೈನ್‍ಮಾರ್‍ದಿಂದ ನಿರ್ಗಮಿಸಿದರು.

	ಈ ವೇಳೆಗೆ ಅಪಾರ ಜನಪ್ರಿಯನಾಗಿದ್ದ ತಾಕಿನ್ ಅಂಗ್ ಸಾನ್ ಮತ್ತು ಆತನ ರಾಷ್ಟ್ರೀಯ ನಿಕಟವರ್ತಿಗಳ ಪ್ರಭಾವವನ್ನು ಹತ್ತಿಕ್ಕಲು ಉಗಾಂಡದಲ್ಲಿ ಆಶ್ರಯ ಪಡೆದಿದ್ದ ಯು ಸಾ ಮತ್ತು ಜಪಾನಿನಲ್ಲಿದ್ದ ಬಮಾರನ್ನು ಮೈನ್‍ಮಾರ್‍ಕ್ಕೆ ಹಿಂತಿರುಗುವಂತೆ ಮಾಡಿ ರಾಜಕೀಯ ವಿರೋಧವನ್ನು ಸೃಷ್ಟಿಸಿದರು. ಮೈನ್‍ಮಾರ್‍ದ ಗವರ್ನರ್ ಆಗಿದ್ದ ಡೋರ್ಮನ ಸ್ಮಿತ್ ಆಪಾದನೆಯ ಮೇಲೆ ಅಂಗ್ ಸಾನ್‍ನನ್ನು ಬಂಧಿಸಿ ಜನಾಭಿಪ್ರಾಯವನ್ನು ಕೆಣಕಲು ಮಾಡಿದ ಪ್ರಯತ್ನವನ್ನು ಆಟ್ಲೆ ಸರ್ಕಾರ ಲಂಡನ್ನಿನಲ್ಲಿ ತಿರಸ್ಕರಿಸಿತು. ಡೋರ್ಮನ್ ಸ್ಮಿತ್‍ನ ಸ್ಥಾನದಲ್ಲಿ ರ್ಯಾನ್ಸೆಯನ್ನು ನೇಮಿಸಿ, ಉಂಟಾಗಬಹುದಾಗಿದ್ದ ದಂಗೆಯನ್ನು ತಡೆಯಲಾಯಿತು. ಅಂಗ್ ಸಾನ್ ಮತ್ತು ಆತನ ನಿಕಟವರ್ತಿಗಳನ್ನು ಮಂತ್ರಿಮಂಡಲದಲ್ಲಿ ಸೇರಿಸಲಾಯಿತು. ಸ್ವಾತಂತ್ರ್ಯ ಸಮಾರಂಭದ ಏರ್ಪಾಡಿಗೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಲು ಅವರನ್ನು 1947ರ ಪ್ರಾರಂಭದಲ್ಲಿ ಲಂಡನ್ನಿಗೆ ಆಹ್ವಾನಿಸಲಾಯಿತು. ಆದರೆ ಅಂಗ್‍ಸನ್ ಹಾಗೂ ಅವನ ಕೆಲವು ನಿಕಟವರ್ತಿಗಳು 1947ರಲ್ಲಿ ಕೊಲೆಯಾದರು. ಬರ್ಮೀಯರು ಆರಿಸಿದ ಸಂವಿಧಾನ ಸಭೆ ಉದ್ದೇಶಿತ ಸಂವಿಧಾನವನ್ನು ರಚಿಸಲು ಲಂಡನ್ನಿನ ಒಪ್ಪಿಗೆಯನ್ನು ಪಡೆಯಿತು. 1947 ಅಕ್ಟೋಬರ್ 17ರಲ್ಲಿ ಆದ ಒಪ್ಪಂದರಂತೆ ಮೈನ್‍ಮಾರ್ 1948 ಜನವರಿ 4ರಂದು ಸ್ವತಂತ್ರವಾಯಿತು ಯುನು ನಾಯಕತ್ವದಲ್ಲಿ ಮಂತ್ರಿಮಂಡಲ ರಚಿತವಾಯಿತು. 1948 ಏಪ್ರಿಲ್ 19ರಂದು ಆಗಿನ ಬರ್ಮ ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು.

	ಸ್ವಾತಂತ್ರ್ಯಾನಂತರದ ಮೈನ್‍ಮಾರ್: ಸ್ವಾತಂತ್ರ್ಯಾನಂತರದ ಮೊದಲನೆಯ ದಶಕದಲ್ಲಿ ಮೈನ್‍ಮಾರ್ ಪ್ರಜಾಪ್ರತಿನಿಧಿ ಸಭೆಯುಳ್ಳ ಪ್ರಜಾಪ್ರಭುತ್ವವನ್ನು (1952) ಅಳವಡಿಸಿಕೊಂಡಿತು. ಉ ಬ ಉ ಅಧ್ಯಕ್ಷರಾದರು, ಕಮ್ಯುನಿಸ್ಟ್ ಪ್ರಭಾವವನ್ನು ಹತ್ತಿಕ್ಕಿತು ಮತ್ತು ಇತರ ವಿಚ್ಚಿದ್ರ ಕಾರಕ ಶಕ್ತಿಗಳ ದಮನದಲ್ಲಿ ತೊಡಗಿತು. ಕರೆನ್ ರಾಜ್ಯವನ್ನು 1952 ಜೂನ್ 2ರಂದು ಉ ನು ಸ್ಥಾಪಿಸಿ ಅಲ್ಲಿಯ ಮಂದಿಯಲ್ಲಿ ಶಾಂತಿ ಸ್ಥಾಪಿಸುವ ಯತ್ನ ನಡೆಸಿದ. 1960ರ ಸಾರ್ವತ್ರಿಕ ಚುನಾವಣೆ ಆಗುವ ತನಕ ಜನರಲ್ ಉ ನೆ ವಿನ್ ಆಗಿನ ಬರ್ಮವನ್ನು ಸೈನಿಕಾಡಳಿತಕ್ಕೊಳಪಡಿಸಿದ್ದ. ಚುನಾವಣೆಯ ನಂತರ ಉ ನು ಪ್ರಧಾನ ಮಂತ್ರಿಯಾದ. 1962ರಲ್ಲಿ ಷಾನ್ ಪಾಂತ್ಯದ ಬಂಡಾಯಗಾರರ ದೆಸೆಯಿಂದಾಗಿ ಮತ್ತೆ ಸೈನಿಕಾಡಳಿತ ಬಂದು ಜನರಲ್ ನೇವಿನ್ ಅಧಿಕಾರ ವಹಿಸಿಕೊಂಡು 1966ರ ತನಕ ಉ ನು ರವರನ್ನು ಬಂಧನದಲ್ಲಿರಿಸಿದ್ದ. ಜನರಲ್ ನೇವಿನ್ ಸೈನಿಕ ಆಚರಣೆಯ ಮೂಲಕ ಸಂವಿಧಾನವನ್ನು ಕೊನೆಗಾಣಿಸಿ ಮೈನ್‍ಮಾರ್ ಸೋಷಿಯಲಿಸ್ಟ್ ಪ್ರೋಗ್ರಾಮ್ ಪಕ್ಷದ ನಾಯಕನಾಗಿ ಆಡಳಿತ ವಹಿಸಿಕೊಂಡ. 1964ರಲ್ಲಿ ಆಗಿನ ಬರ್ಮದ ಇತರ ಪಕ್ಷಗಳನ್ನು ನ್ಯಾಯಬಾಹಿರವೆಂದು ಸಾರಲಾಯಿತು.

	ನೇವಿನ್ ರಾಷ್ಟ್ರೀಕೃತ ಆರ್ಥಿಕ ಕಾರ್ಯಕ್ರಮವನ್ನು ಜಾರಿಗೆ ತಂದು ಪ್ರಬಲ ಕೇಂದ್ರೀಯ ಆಡಳಿತ ಸ್ಥಾಪಿಸಲು ಯತ್ನಿಸಿದ. 1971ರಲ್ಲಿ ಆಗಿನ ಬರ್ಮವನ್ನು ಸಮಾಜವಾದಿ ಗಣರಾಜ್ಯವೆಂದು ಘೋಷಿಸಲಾಯಿತು. ಹೊಸ ಸಂವಿಧಾನವನ್ನು ರೂಪಿಸಿ 1973ರಲ್ಲಿ ಅದಕ್ಕೆ ರಾಷ್ಟ್ರೀಯ ಮನ್ನಣೆಯನ್ನು ಕೊಡಲಾಯಿತು. ಮೈನ್‍ಮಾರ್ ಸೋಷಿಯ ಲಿಸ್ಟ್ ಪ್ರೋಗ್ರಾಮ್ ಪಕ್ಷ ಮಾತ್ರ ರಾಷ್ಟ್ರದ ಏಕೈಕ ಮನ್ನಣೆ ಪಡೆದ ಪಕ್ಷವೆಂದು ಪರಿಗಣಿಸಲ್ಪಟ್ಟಿತು; ಮತ್ತು ರಾಷ್ಟ್ರವನ್ನು ಸೋಷಿಯ ಲಿಸ್ಟ್ ರಿಪಬ್ಲಿಕ್ ಆಫ್ ಯೂನಿಯನ್ ಆಫ್ ಮೈನ್‍ಮಾರ್ ಎಂದು ಹೆಸರಿಸಲಾಯಿತು. 1974ನೆಯ ಮಾರ್ಚ್ ತಿಂಗಳಲ್ಲಿ ನೇವಿನ್ ರಾಷ್ಟ್ರದ ಅಧ್ಯಕ್ಷನಾಗಿ ಚುನಾಯಿತನಾದ. 1974ರ ಅನಂತರ ಪಕ್ಷಗಳ ತಿಕ್ಕಾಟ ಪ್ರಾರಂಭವಾಗಿ ಸರ್ಕಾರ ಬಿಗಿ ಮುಷ್ಟಿಯಿಂದ ಅದನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು. 1975ರಲ್ಲಿ ಐದು ಸಣ್ಣಪುಟ್ಟ ಪಕ್ಷಗಳು ಸೇರಿ ಫೆಡರಲ್ ನ್ಯಾಷನಲ್ ಡೆಮೊಕ್ರಾಟಿಕ್ ಫ್ರಂಟ್ ಎಂಬ ಪಕ್ಷ ರಚಿಸಿ ನೇವಿನ್ ಸರ್ಕಾರವನ್ನು ಅಧಿಕಾರದಿಂದ ಕೊನೆಗೊಳಿಸಲು ಹೋರಾಟ ಪ್ರಾರಂಭಿಸಿದುವು. 1976ರಲ್ಲಿ ಇದರ ಜೊತೆಗೆ ಇನ್ನೂ ನಾಲ್ಕು ಪಂಗಡಗಳು ಒಟ್ಟು ಗೂಡಿ ಹೋರಾಟ ಮುಂದುವರಿಸಿದವು. ಆ ವೇಳೆಗೆ ಮೈನ್‍ಮಾರ್‍ದ ಕಮ್ಯೂನಿಸ್ಟ್ ಪಾರ್ಟಿಗೆ ಹಣಕಾಸಿನ ಸಹಾಯ ಮಾಡುವುದಿಲ್ಲವೆಂದು ಚೀನಾದಿಂದ ವಾಗ್ದಾನ ಪಡೆಯುವ ಪ್ರಯತ್ನದಲ್ಲಿ ನೇವಿನ್ ವಿಫಲನಾದ. 1976 ಮತ್ತು 77ರಲ್ಲಿ ಅನೇಕ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳನ್ನು ಆಚರಣೆಗೆ ತರಲಾಯಿತು. 1978ರ ಸಾರ್ವತಿಕ ಚುನಾವಣೆಯಲ್ಲಿ ನೇವಿನ್ ಪುನಃ ಜಯಗಳಿಸಿ ಮತ್ತೊಂದು ಅವಧಿಗೆ ಅಧ್ಯಕ್ಷನಾಗಿ ಚುನಾಯಿತನಾದ. 1981ರ ಅಕ್ಟೋಬರ್‍ನಲ್ಲಿ ಚುನಾವಣೆಗಳು ನಡೆದು 1982 ಮಾರ್ಚ್‍ನಿಂದ ಸಾನ್ ಯು ಮೈನ್‍ಮಾರ್‍ದ ಅಧ್ಯಕ್ಷರಾಗಿ ಮ್ಯಾಂಗ್‍ಕ ಪ್ರಧಾನಿಯಾಗಿ ಅಧಿಕಾರ ವಹಿಸಿ ಕೊಂಡಿದ್ದಾರೆ. 1989ರಲ್ಲಿ ಸೈನಿಕಾಡಳಿತ ದೇಶದ ಹೆಸರನ್ನು ಮೈನ್‍ಮಾರ್ ಎಂದು ಘೋಷಿಸಿತು.
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ